×
Ad

ಮೀಸಲಾತಿಗಾಗಿ ಹೋರಾಟ ಮಾಡುವ ಸ್ವಾಮೀಜಿಗಳನ್ನು ಜೈಲಿಗೆ ಅಟ್ಟಬೇಕು: ಪ್ರೊ.ಮಹೇಶ್ ಚಂದ್ರಗುರು

Update: 2021-03-17 22:06 IST

ಮೈಸೂರು,ಮಾ.17: ಸಾಮಾಜಿಕ ನ್ಯಾಯದ ಪರ ಇರಬೇಕಿದ್ದ ಸ್ವಾಮೀಜಿಗಳು ಇಂದು ಮೀಸಲಾತಿ ಹೋರಾಟದ ನೇತೃತ್ವ ವಹಿಸಿರುವುದು ಅತ್ಯಂತ ಖಂಡನೀಯವಾಗಿದ್ದು, ಅಂತಹ ಸ್ವಾಮೀಜಿಗಳನ್ನು ಬಂಧಿಸಿ ಜೈಲಿಗೆ ಅಟ್ಟಬೇಕು ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಆಗ್ರಹಿಸಿದ್ದಾರೆ.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಬುಧವಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಜಿಲ್ಲಾ ಕುಂಬಾರರ ಸಂಘ, ಜಿಲ್ಲಾ ಸವಿತಾ ಸಮಾಜ, ಜಿಲ್ಲಾ ಭಗೀರಥ ಉಪ್ಪಾರರ ಸಂಘ, ಜಿಲ್ಲಾ ವಿಶ್ವಕರ್ಮ ಮಹಾಮಂಡಲ, ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜ್ಯೋತಿಪಣ ಯುವಜನ ಸಂಘ(ಗಾಣಿಗ ಸಮುದಾಯ) ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 'ಕವಲು ದಾರಿಯಲ್ಲಿ ಮೀಸಲಾತಿ'- ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮೀಸಲಾತಿ ಹೋರಾಟದ ನೇತೃತ್ವ ವಹಿಸಿಕೊಂಡಿರುವ ಮಠಾಧೀಶರಿಗೆ ದೇಶ ನಿಷ್ಠೆಗಿಂತ ಜಾತಿ ನಿಷ್ಠೆ ಮುಖ್ಯವಾಗಿದೆ. ಇಂತಹ ಕಾನೂನು ಬಾಹಿರ ಚಳುವಳಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಸ್ವಾಮೀಜಿಗಳನ್ನು ಬಂಧಿಸಿ ಜೈಲಿನಲ್ಲಿಡಬೇಕು ಎಂದು ಹೇಳಿದರು.

ಮಠಾದೀಶರಾದವರು ಸಮಾಜಮುಖಿ ಜೀವನ ಮುಕ್ತರಾಗಿರಬೇಕು. ದೈವನಿಷ್ಠ, ಪ್ರಕೃತಿ ನಿಷ್ಠ ಮತ್ತು ಸಂವಿಧಾನ ನಿಷ್ಠರಾಗಿರಬೇಕು, ಆದರೆ ಸಾಮರಸ್ಯ, ಏಕತೆ ಮತ್ತು ಭ್ರಾತೃತ್ವಕ್ಜೆ ಧಕ್ಕೆ ತರುವ ಸ್ವಾಮೀಜಿಗಳು ಮಠಗಳಲ್ಲಿ ಇರಬಾರದು ಎಂದು ಹೇಳಿದರು.

ಇಂದು ಸರ್ಕಾರಿ ಪ್ರಾಯೋಜಿತ ಮೀಸಲಾತಿ ಚಳುವಳಿಗಳು ರಾಜ್ಯದಲ್ಲಿ ನಡೆಯುತ್ತಿದ್ದು, ಈ ಚಳುವಳಿಗಳ ಹಿಂದೆ ಆರೆಸ್ಸೆಸ್ ಮತ್ತು ಸಂಘ ಪರಿವಾರದ ಸ್ಥಾಪಿತ ಹಿತಾಸಕ್ತಿ ಅಡಗಿದೆ. ವೀರಶೈವ, ಪಂಚಮಸಾಲಿ ಮತ್ತು ಒಕ್ಕಲಿಗ ಮೀಸಲಾತಿ ಹೋರಾಟದ ಹಿಂದೆ ಆರೆಸ್ಸೆಸ್ ಮತ್ತು ಸಂಘ ಪರಿವಾರದ ಸಂಚಿದೆ. ಇವರು ನಮ್ಮನ್ನು ಒಗ್ಗೂಡಲು ಬಿಡದೆ ವಿಭಜನೆ ಮಾಡಿ ನಾಶಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ರಾಜ್ಯದ ವೀರಶೈವ ಮತ್ತು ಒಕ್ಕಲಿಗ ಸಮಾಜಗಳು ಬಹಳ ಪ್ರಭಾವಶಾಲಿ ಸಮಾಜಗಳು. ಇವು ಸಾಮಾಜಿಕ ನ್ಯಾಯದ ಎಲ್ಲಾ ತರಹದ ಅಧಿಕಾರವನ್ನು ಅನುಭವಿಸಿವೆ. ಅಂತಹದರಲ್ಲಿ ಇವರಿಗೇಕೆ ಮೀಸಲಾತಿ ನೀಡಬೇಕು. ಹಾವನೂರು ವರದಿಯಲ್ಲಿ ಲಿಂಗಾಯತರಿಗೆ ಮೀಸಲಾತಿ ಅವಶ್ಯಕತೆ ಇಲ್ಲ ಎಂದು ಉಲ್ಲೇಖಿಸಿದ್ದಾರೆ. 1980 ರಲ್ಲಿ ವೆಂಕಟಸ್ವಾಮಿ ಆಯೋಗ ಒಕ್ಕಲಿಗರಿಗೆ ಯಾವುದೇ ಕಾರಣಕ್ಕೂ ಮೀಸಲಾತಿ ನೀಡಬಾರದು ಎಂದು ಹೇಳಿದೆ. ಅಂತಹದರಲ್ಲಿ ಈ ಸಮಾಜಗಳು ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವುದು ದುರದೃಷ್ಟಕರ ಎಂದು ಹೇಳಿದರು.

ಸಾವಿರಾರು ವರ್ಷಗಳಿಂದ ತಮ್ಮದಲ್ಲದ ತಪ್ಪಿಗಾಗಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ವಂಚಿತರಾದ ಸಮುದಾಯಗಳಿಗೆ ಮೀಸಲಾತಿ ಅಗತ್ಯವಿದೆ. ಆದರೆ ಸಮಾಜದಲ್ಲಿ ಬಲಿಷ್ಠಗೊಂಡು ಎಲ್ಲಾ ಅಧಿಕಾರವನ್ನು ಅನುಭವಿಸಿರುವ ಸಮುದಾಯಗಳಿಗೆ ಮೀಸಲಾತಿ ಏಕೆ ನೀಡಬೇಕು ಎಂದು ಪ್ರಶ್ನಿಸಿದರು.

ಜಾತಿಗಣತಿ ಮೇಲೆ ಇಂದು ಮೀಸಲಾತಿ ನಿರ್ಧಾರ ಮಾಡಬೇಕಿದ್ದು, ದೇಶದಲ್ಲಿ ಶೇ.25 ರಷ್ಟು ದಲಿತರು ನಂತರ ಮುಸಲ್ಮಾನರು, ಕುರುಬರು, ನಾಯಕರು, ವೀರಶೈವರು ಮತ್ತು ಒಕ್ಕಲಿಗ ಸಮಾಜ ಇದೆ. ದೇಶದಲ್ಲಿ 5 ಮತ್ತು 6 ಸ್ಥಾನ ಹೊಂದಿರುವ ಸಮಾಜಗಳು ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವುದು ಸರಿಯಲ್ಲ ಎಂದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್ ಮಾತನಾಡಿ, ಶೋಷಿತ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಸಂಸತ್ ಭವನ ಮುತ್ತಿಗೆ ಹಾಕುವ ಚಳವಳಿಯನ್ನು ಮಾಡಬೇಕಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟಿನಿಂದ ಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈ ಬಾರಿ ಮಂಡಿಸಿರುವ ಬಜೆಟ್‍ನಲ್ಲಿ ಶೋಷಿತ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ. ವೀರಶೈವ, ಒಕ್ಕಲಿಗ ಸಮುದಾಯಗಳಿಗೆ ತಲಾ 500 ಕೋಟಿ ಮೀಸಲಿಟ್ಟು, ದಲಿತ, ಹಿಂದುಳಿದ ವರ್ಗಗಳಿಗೆ ಅನ್ಯಾಯವೆಸಗಿದ್ದಾರೆ. ಮೀಸಲಾತಿ ಹಂಚಿಕೆ ಮಾಡುವಲ್ಲಿಯೂ ವಿಫಲರಾಗಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರದ ನಡೆ ಖಂಡಿಸಿ ದೆಹಲಿಗೆ ತೆರಳಿ ಸಂಸತ್ ಭವನ ಮುತ್ತಿಗೆ ಹಾಕಿ ಪ್ರಧಾನಿಗಳ ಗಮನ ಸೆಳೆಯಬೇಕಿದೆ ಎಂದು ಹೇಳಿದರು.

ಸರ್ಕಾರಗಳು ವೈಜ್ಞಾನಿಕ ಮೀಸಲಾತಿ ನೀಡುವಲ್ಲಿ ಎಡವಿದೆ. ಹಾಗಾಗಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಬೇಕಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದ ವೇಳೆ ಆರ್ಥಿಕ ಸಾಮಾಜಿಕ ಸ್ಥಿತಿಗಳನ್ನು ತಿಳಿಯಲು ಜಾತಿವಾರು ಜನಗಣತಿ ಮಾಡಿಸಿದ್ದರು. ಕಾಂತರಾಜು ಆಯೋಗ ರಚನೆ ಮಾಡಿ ನೂರಾರು ಕೋಟಿ ಖರ್ಚು ಮಾಡಿ ಜಾತಿವಾರು ಜನಗಣತಿ ಮಾಡಿಸಿದರು. ಆದರೆ ಸಿದ್ದರಾಮಯ್ಯ ನಂತರದ ಯಾವ ಸರ್ಕಾರಗಳು ಜನಗಣತಿ ಬಿಡುಗಡೆ ಮಾಡದೆ ಸಮಾಜವನ್ನು ವಂಚಿಸುತ್ತಿವೆ ಎಂದು ಆರೋಪಿಸಿದರು.

ಸಭೆಯಲ್ಲಿ ಸಾಹಿತಿಗಳಾದ ಪ್ರೊ.ಕೆ.ಎಸ್.ಭಗವಾನ್, ಪ್ರೊ.ಕಾಳೇಗೌಡ ನಾಗವಾರ, ಮಾಜಿ ಮಹಾಪೌರರುಗಳಾದ ಅನಂತು, ಆರ್.ನಾರಾಯಣ್, ಕುಂಬಾರರ ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್.ಪ್ರಕಾಶ್, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎನ್.ಆರ್.ನಾಗೇಶ್, ಭಗೀರತ ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಯೋಗೇಶ್, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ಮಹೇಶ್ ಸೋಸಲೆ, ವಿಶ್ವಕರ್ಮ ಮಹಾಮಂಡಲ ಜಿಲ್ಲಾಧ್ಯಕ್ಷ ಸಿ.ಟಿ.ಆಚಾರ್ಯ, ಕರ್ನಾಟಕ ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ ನಾಗನಹಳ್ಳೀ ಎಂ.ರೇವಣ್ಣ, ಎಂ.ಲೋಕೇಶ್ ಕುಮಾರ್, ಆರ್.ಕೆ.ರವಿ, ಕಾಗಿನಲೆ ಎಂ.ಮಹೇಂದ್ರ, ರವಿ ಜೆ.ನಾಯಕ್, ಪವನ್ ಸಿದ್ದರಾಮ, ಯದುಕುಮಾರ್, ಜಯರಾಮ್, ಕಾಡನಹಳ್ಳಿ ಡಿ.ಸ್ವಾಮಿಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೊದಲು ಅಂಬೇಡ್ಕರ್ ರನ್ನು ಅಧ್ಯಯನ ಮಾಡಿಕೊಳ್ಳಬೇಕು: ಪ್ರೊ.ಭಗವಾನ್
ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವವರು ಮೊದಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಧ್ಯಯನ ಮಾಡಿಕೊಳ್ಳಬೇಕು ಎಂದು ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅಭಿಪ್ರಾಯಿಸಿದರು.

ಮೀಸಲಾತಿಗಾಗಿ ಇಂದು ಮುಂದುವರಿದ ಜನಾಂಗಗಳು ಹೋರಾಟ ಮಾಡುತ್ತಿವೆ. ಅವರು ಮೊದಲು ಅಂಬೇಡ್ಕರ್, ಜ್ಯೋತಿ ಬಾಪುಲೆ, ಪೆರಿಯಾರ್, ನಾರಾಯಣಗುರು ಅವರ ಬಗ್ಗೆ ತಿಳಿದುಕೊಳ್ಳಬೇಕು. ನಂತರ ಮೀಸಲಾತಿಗಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.

ಮೀಸಲಾತಿ ಹೆಸರಿನಲ್ಲಿ ಸಮಾಜವನ್ನು ಹೊಡೆಯುವ ಕೆಲಸವನ್ನು ಮಾಡಲಾಗುತ್ತಿದೆ. ಹಿಂದೂ ಧರ್ಮದ ಹೆಸರಿನಲ್ಲಿ ವೈದಿಕಶಾಹಿಗಳು ಹಿಡಿತ ಸಾಧಿಸಲು ಹೊರಟಿದ್ದಾರೆ. ರಾಮ ಚಾತುರ್ವಣ ರಕ್ಷಣೆ ಮಾಡಿದ ಎಂಬ ಒಂದೇ ಕಾರಣಕ್ಕೆ ರಾಮ ಮಂದಿರ ಕಟ್ಟಲು ಮುಂದಾಗಿದ್ದಾರೆ. ಅದನ್ನು ಅರಿಯದ ಅಬ್ರಾಹ್ಮಣರು ವೈದಿಕಶಾಹಿಗಳ ಗುಲಾಮರಾಗುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಮ ಅಪ್ಪನಿಗೆ ಹುಟ್ಟಿದವನಲ್ಲ, ಪುರೋಹಿತನೊಬ್ಬನಿಗೆ ಹುಟ್ಟಿದವನು. ಇದು ನಾನು ಹೇಳುತ್ತಿರುವುದಲ್ಲ, ವಾಲ್ಮೀಕಿ ರಾಮಯಣದಲ್ಲೇ ಉಲ್ಲೇಖವಾಗಿದೆ. ಅದನ್ನು ಪ್ರತಿಪಾದಿಸಿದರೆ ನನ್ನ ಮೇಲೆ ಕೇಸುಗಳನ್ನು ಹಾಕುತ್ತಾರೆ. ಸತ್ಯ ಹೇಳುವ ನನ್ನ ಮೇಲೆ ಸುಪ್ರೀಂಕೋರ್ಟ್ ನಲ್ಲೇ ಕೇಸುಗಳನ್ನು ಹಾಕಿದರೂ ಅದನ್ನು ಗೆದ್ದುಕೊಂಡು ಬರುವ ಶಕ್ತಿ ನನಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News