×
Ad

ಅಶ್ಲೀಲ ಸಿಡಿ ಬಿಡುಗಡೆ ಪ್ರಕರಣ: ಯುವತಿಯ ಪತ್ತೆಗೆ ವಿಶೇಷ ತನಿಖಾ ತಂಡ ರಚನೆ

Update: 2021-03-17 22:25 IST

ಬೆಳಗಾವಿ/ಬೆಂಗಳೂರು, ಮಾ.17: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣ ಸಂಬಂಧ ಸಂತ್ರಸ್ತೆಯ ಪತ್ತೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ ಎಂದು ಡಿಸಿಪಿ ವಿಕ್ರಂ ಅಮಟೆ ಹೇಳಿದ್ದಾರೆ.

ಬುಧವಾರ ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಸಿಡಿಯಲ್ಲಿರುವ ಯುವತಿಯ ಅಪಹರಣವಾಗಿದ್ದು, ಹುಡುಕಿಕೊಡುವಂತೆ ಅವರ ತಂದೆ ದೂರು ನೀಡಿರುವ ಹಿನ್ನೆಲೆಯಲ್ಲಿ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದರು.

ಸಹಾಯಕ ಪೊಲೀಸ್ ಆಯುಕ್ತ ಹಾಗೂ ಎಪಿಎಂಸಿ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ. ಈಗಾಗಲೇ ಅಪಹರಣ ಆರೋಪದಡಿ ಎಫ್‍ಐಆರ್ ದಾಖಲಾಗಿದೆ. ಇನ್ನು, ಆಕೆಯ ಶೋಧ ಕಾರ್ಯ ಈಗಾಗಲೇ ಶುರುವಾಗಿದೆ ಎಂದು ತಿಳಿಸಿದರು.

ಮಂಗಳವಾರ ಸಂಜೆ ಸಂತ್ರಸ್ತೆಯ ತಂದೆ ದೂರು ಸಲ್ಲಿಸಿದ್ದರು. ಜತೆಗೆ ಭದ್ರತೆ ನೀಡುವಂತೆ ಕೋರಿದ್ದಾರೆ. ಈ ಬಗ್ಗೆ ವ್ಯಾಪ್ತಿಯ ಪೊಲೀಸ್ ಠಾಣೆ ಪೊಲೀಸರು ನಿರ್ಧರಿಸುತ್ತಾರೆ ಎಂದ ಅವರು, ಪ್ರಕರಣವನ್ನು ಸಿಟ್‍ಗೆ ಹಸ್ತಾಂತರಿಸುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಸದ್ಯ ತನಿಖೆ ಆರಂಭವಾಗಿದ್ದರಿಂದ ತನಿಖೆಯಲ್ಲಿನ ಅಂಶ ಪರಿಗಣಿಸಲಾಗುವುದು ಎಂದು ಅವರು ವಿವರಿಸಿದರು.

ಮತ್ತೊಮ್ಮೆ ನೋಟಿಸ್: ಮತ್ತೊಂದೆಡೆ ನಾಪತ್ತೆಯಾಗಿರುವ ಸಂತ್ರಸ್ತೆಗೆ ಸಿಟ್ ತನಿಖಾಧಿಕಾರಿಗಳು ಎರಡನೆ ಬಾರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಅದೇ ರೀತಿ, ಶಂಕಿತ ಆರೋಪಿ ಎನ್ನಲಾದ ಪತ್ರಕರ್ತನ ಪತ್ತೆಗೂ ಸಿಟ್ ಅಧಿಕಾರಿಗಳು ಮುಂದಾಗಿದ್ದು, ಆತನ ಕುಟುಂಬಸ್ಥರ ಹೇಳಿಕೆಗಳನ್ನು ದಾಖಲಿಸಿಕೊಂಡರು ಎಂದು ಮೂಲಗಳು ತಿಳಿಸಿವೆ.

ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ತಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ನನ್ನ ಪುತ್ರಿಯ ಜೀವಕ್ಕೆ ಅಪಾಯ ಇದ್ದು, ಈ ಬಗ್ಗೆ ಆಕೆಯೇ ಮಾಹಿತಿ ನೀಡಿದ್ದಾಳೆ. ಸಿಡಿಯಲ್ಲಿರುವಳು ನಾನಲ್ಲ ಎಂದಿದ್ದು, ನನ್ನಂತೆ ಕಾಣುವ ಹುಡುಗಿಯ ದೃಶ್ಯ ಸೇರಿಸಲಾಗಿದೆ. ಅದು ನಕಲಿ ಸಿಡಿ, ಆ ಸಿಡಿಯಲ್ಲಿ ನನ್ನ ಪಾತ್ರವೇ ಇಲ್ಲ ಎಂದಿದ್ದಾಳೆ ಎಂದು ಅವರು ಹೇಳಿದರು.

ಆಯುಕ್ತರಿಗೆ ದೂರು

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಪರ ಇಡೀ ಸರಕಾರ ನಿಂತಿದೆ ಎಂದು ವಕೀಲ ಕೆ.ಎನ್.ಜಗದೀಶ್ ಕುಮಾರ್ ಆರೋಪಿಸಿದರು.

ಬುಧವಾರ ನಗರದ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವತಿಗೆ ಇದುವರೆಗೂ ಯಾವುದೇ ರಕ್ಷಣೆ ನೀಡಿಲ್ಲ. ಆದರೆ, ಮತ್ತೊಂದೆಡೆ ಇಡೀ ಸರಕಾರವೇ ಜಾರಕಿಹೊಳಿ ಪರ ನಿಂತಿದೆ. ಸಂತ್ರಸ್ತೆ ನೀಡಿದ ವಿಡಿಯೋ ಹೇಳಿಕೆ ಮೇಲೆ ಇದುವರೆಗೂ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

ರಮೇಶ್ ಜಾರಕಿಹೊಳಿ ದೂರಿಗೆ ಹೇಗೆ ಮನ್ನಣೆ ನೀಡಲಾಗಿದೆಯೋ, ಅದೇ ರೀತಿ ಯುವತಿಗೂ ಮನ್ನಣೆ ಕೊಡಬೇಕು. ನಿರ್ಭಯ ನಿಯಮದ ಪ್ರಕಾರ ಯಾವುದೇ ಯುವತಿಗೆ ಲೈಂಗಿಕ ಕಿರುಕುಳ ಆಗಿದ್ದರೆ, ಆಕೆಗೆ ರಕ್ಷಣೆ ನೀಡಬೇಕು. ಜೊತೆಗೆ 24 ಗಂಟೆಯ ಒಳಗಡೆ ಎಫ್‍ಐಆರ್ ದಾಖಲಿಸಿಕೊಳ್ಳಬೇಕು. ಆದರೆ, ಈ ಪ್ರಕರಣದಲ್ಲಿ ನಿಯಮ ಪಾಲನೆಯಾಗಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News