ಡಾ.ರಾಜ್‍ಕುಮಾರ್ ದತ್ತಿ ಪ್ರಶಸ್ತಿಗೆ ಕೆ.ನರಸಿಂಹಯ್ಯ, ಬಸಂತಕುಮಾರ್ ಪಾಟೀಲ ಆಯ್ಕೆ

Update: 2021-03-17 16:57 GMT

ಬೆಂಗಳೂರು, ಮಾ.17: ಕನ್ನಡ ಸಾಹಿತ್ಯ ಪರಿಷತ್‍ನ 2020 ಹಾಗೂ 2021ನೇ ಸಾಲಿನ ಡಾ.ರಾಜ್‍ಕುಮಾರ್ ದತ್ತಿ ಪ್ರಶಸ್ತಿಗೆ ರಂಗಕಲಾವಿದ ಕೆ. ನರಸಿಂಹಯ್ಯ(ಪುಟ್ಟರಾಜು) ಮತ್ತು ನಟ ಮತ್ತು ನಿರ್ಮಾಪಕ ಬಸಂತಕುಮಾರ್ ಪಾಟೀಲರನ್ನು ಆಯ್ಕೆ ಮಾಡಲಾಗಿದೆ.

ಬುಧವಾರ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಡಾ.ಮನು ಬಳಿಗಾರ್ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಈ ತೀರ್ಮಾನ ಕೈಗೊಳ್ಳಲಾಯಿತು. ಪ್ರಶಸ್ತಿಯು 30ಸಾವಿರ ರೂ. ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ. ಡಾ. ರಾಜ್‍ಕುಮಾರ್ ಅವರ ಕುಟುಂಬ ಪರಿಷತ್‍ನಲ್ಲಿ ಇಟ್ಟಿರುವ ಐದು ಲಕ್ಷ ರೂ. ದತ್ತಿಯಿಂದ ಈ ಪುರಸ್ಕಾರವನ್ನು ರಂಗಭೂಮಿ ಅಥವಾ ಚಲನಚಿತ್ರರಂಗಕ್ಕೆ ಸಂಬಂಧಿಸಿದವರಿಗೆ ನೀಡಲಾಗುತ್ತದೆ.

ಹಿರಿಯ ನಟ ಬಸಂತಕುಮಾರ್ ಪಾಟೀಲ್, ಕನ್ನಡ ಚಲನಚಿತ್ರಗಳ ನಾಯಕ ನಟರಾಗಿ, ಐದು ರಾಷ್ಟ್ರೀಯ ಪ್ರಶಸ್ತಿ ಪಡೆದ ಚಿತ್ರಗಳ ನಿರ್ಮಾಪಕರಾಗಿ ಕನ್ನಡ ಚಿತ್ರರಂಗದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಹಿರಿಯ ರಂಗಕಲಾವಿದ ಕೆ.ನರಸಿಂಹಯ್ಯ(ಪುಟ್ಟರಾಜು), ಕಳೆದ 50 ವರ್ಷಗಳಿಂದ ಸತತವಾಗಿ ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಗಳಲ್ಲಿ ಕಲಾವಿದರಾಗಿ ತಮ್ಮ ನೈಪುಣ್ಯತೆಯನ್ನು ಮೆರೆದಿದ್ದಾರೆಂದು ಕನ್ನಡ ಸಾಹಿತ್ಯ ಪರಿಷತ್ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News