ಮಹಾರಾಷ್ಟ್ರ-ಕೇರಳ ಗಡಿ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ: ಪ್ರಧಾನಿ ಜೊತೆ ಸಿಎಂ ವಿಡಿಯೋ ಸಂವಾದ

Update: 2021-03-17 17:01 GMT

ಬೆಂಗಳೂರು, ಮಾ.17: ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯು ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇಂದು ಕೋವಿಡ್ 19 ಪರಿಸ್ಥಿತಿ ಕುರಿತಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡು, ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿ ವತಿಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ವಿವರಿಸಿದರು.

ರಾಜ್ಯದಲ್ಲಿ 2020ರ ಆಗಸ್ಟ್ ನಿಂದ ಅಕ್ಟೋಬರ್ ವರೆಗೆ ಕೋವಿಡ್ 19 ಸೋಂಕು ತೀವ್ರಗೊಂಡಿತ್ತು. ನವೆಂಬರ್ ನಿಂದ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗತೊಡಗಿತು. ಡಿಸೆಂಬರ್ ನಲ್ಲಿ ಇನ್ನೂ ಹೆಚ್ಚಿನ ಇಳಿಕೆಯಾಯಿತು. ಆದರೆ ಕಳೆದ 10 ದಿನಗಳಲ್ಲಿ ಕೋವಿಡ್ 19 ಪ್ರಕರಣಗಳು ಮತ್ತೆ ಏರುಗತಿಯಲ್ಲಿವೆ. ಪಾಸಿಟಿವಿಟಿ ರೇಟ್ ಮಾರ್ಚ್ 15 ರಂದು ಶೇ.1.65ರಷ್ಟು ವರದಿಯಾಗಿದೆ. ಪ್ರಕರಣಗಳ ಸಂಖ್ಯೆಯು ಬೆಂಗಳೂರು ಹಾಗೂ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಹೆಚ್ಚಾಗಿದೆ ಎಂದು ಅವರು ಪ್ರಧಾನಿಯ ಗಮನಕ್ಕೆ ತಂದರು.

ರಾಜ್ಯದಲ್ಲಿ ಈವರೆಗೆ 9.61 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, 12 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಪ್ರಕರಣಗಳು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಪರೀಕ್ಷಾ ಪ್ರಮಾಣವನ್ನು ಸಹ ಹೆಚ್ಚಿಸಲಾಗಿದೆ. ಮಾರ್ಚ್ 15 ರಂದು ತಜ್ಞರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಕೋವಿಡ್ 19ರ ವಿರುದ್ಧ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳುವುದು, ಮಾಸ್ಕ್ ಧಾರಣೆ ಕಡ್ಡಾಯಗೊಳಿಸುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಕುರಿತು ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಮದುವೆ ಮತ್ತು ಇತರ ಸಮಾರಂಭಗಳಲ್ಲಿ ಮಾರ್ಗಸೂಚಿಯಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಜನ ಸೇರದಂತೆ ಮುನ್ನೆಚ್ಚರಿಕೆ ವಹಿಸುವುದು. ಕೋವಿಡ್ ಸೋಂಕಿತರಿಗಾಗಿ ಹೆಚ್ಚುವರಿ ಹಾಸಿಗೆಗಳು, ಐಸಿಯುಗಳನ್ನು ಮೀಸಲಿಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ 3 ಕೋವಿಡ್ ಕೇರ್ ಸೆಂಟರ್ ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ರಾಜ್ಯದಲ್ಲಿರುವ 3500 ಕ್ಕೂ ಹೆಚ್ಚಿನ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಅಭಿಯಾನವನ್ನು ತೀವ್ರಗೊಳಿಸಲಾಗುವುದು. ಪ್ರತಿ ದಿನ 3 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಭಾರತ ಸರಕಾರದ ನೀತಿಯಂತೆ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಬೇಕಾಗಿದೆ. ವೃದ್ಧಾಶ್ರಮಗಳಲ್ಲಿ, ಅಪಾರ್ಟ್ ಮೆಂಟ್‍ಗಳಲ್ಲಿ ಹಾಗೂ ದುರ್ಗಮ ಪ್ರದೇಶಗಳಲ್ಲಿ ಲಸಿಕೆ ಅಭಿಯಾನ ಕೈಗೊಳ್ಳಲು ಅನುಮತಿ ನೀಡುವಂತೆ ಪ್ರಧಾನಿಗೆ ಮನವಿ ಮಾಡಿದ ಅವರು, ಇಂತಹ ಸ್ಥಳಗಳಲ್ಲಿ ಲಸಿಕೆ ಕೇಂದ್ರದಲ್ಲಿ ಒದಗಿಸುವ ಎಲ್ಲ ಸೌಲಭ್ಯಗಳು, ಆಂಬ್ಯುಲೆನ್ಸ್ ಹಾಗೂ ಸಾಕಷ್ಟು ಸಂಖ್ಯೆಯ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News