ಗೋಹತ್ಯೆ ನಿಷೇಧ ಕಾಯ್ದೆಯಿಂದಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ: ಮರಿತಿಬ್ಬೇಗೌಡ

Update: 2021-03-17 17:20 GMT

ಬೆಂಗಳೂರು, ಮಾ.17: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಿಂದಾಗಿ ಗಾಯಗೊಂಡ ಜಾನುವಾರುಗಳು ನರಳಾಡುತ್ತಿದ್ದು, ಸಮಾಜದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ ಎಂದು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ಬುಧವಾರ ವಿಧಾನಪರಿಷತ್‍ನ ಮಧ್ಯಾಹ್ನದ ಕಲಾಪದಲ್ಲಿ ರಾಜ್ಯ ಸರಕಾರದ 2021-22ನೇ ಸಾಲಿನ ಆಯವ್ಯಯ ಕುರಿತು ಮಾತನಾಡಿದ ಅವರು, ಹಲವು ರೈತರು ತಮ್ಮ ಜಾನುವಾರುಗಳು ಗಾಯಗೊಂಡಿದ್ದು, ಗೋಹತ್ಯೆ ನಿಷೇಧ ಕಾಯ್ದೆಯಿಂದಾಗಿ ಅವುಗಳನ್ನು ಯಾರು ಕೊಂಡುಕೊಳ್ಳುತ್ತಿಲ್ಲ, ಇಟ್ಟುಕೊಳ್ಳಲೂ ಆಗುತ್ತಿಲ್ಲ, ಗಾಯಗೊಂಡ ಜಾನುವಾರುಗಳಿಗೆ ಕಾಗೆ, ಸೊಳ್ಳೆಗಳ ಕಾಟ ಶುರುವಾಗಿದೆ, ಇದು ಸಾಂಕ್ರಾಮಿಕ ರೋಗಕ್ಕೆ ಎಡೆಮಾಡಿಕೊಡುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.

ರಾಜ್ಯ ಸರಕಾರ ಪ್ರಸಕ್ತ ಬಜೆಟ್‍ನಲ್ಲಿ ಜಿಲ್ಲೆಗೊಂದು ಗೋ ಶಾಲೆ ತೆರೆಯಲಾಗುವುದೆಂದು ಘೋಷಿಸಲಾಗಿದೆ. ಆದರೆ, ಇದು ಯಾವಾಗ ಕಾರ್ಯರೂಪಕ್ಕೆ ಬರುತ್ತದೆ. ಅಲ್ಲಿಯವರೆಗೂ ಜಾನುವಾರುಗಳು, ರೈತರು ಹಾಗೂ ಸಾರ್ವಜನಿಕರು ಸಮಸ್ಯೆಗೆ ತುತ್ತಾಗಬೇಕೆ. ಇಂತಹ ಕಾಯ್ದೆಗಳನ್ನು ಜಾರಿಗೆ ತಂದು ಸಾರ್ವಜನಿಕರಿಗೆ ತೊಂದರೆ ಕೊಡುವುದಕ್ಕಿಂತ ಜಿಲ್ಲೆಗೊಂದು ವೃದ್ಧಾಶ್ರಮ ಮಾಡಿದ್ದರೆ ಉಪಕಾರವಾಗುತ್ತಿತ್ತೆಂದು ಅವರು ತಿಳಿಸಿದ್ದಾರೆ.

ರಾಜ್ಯ ಸರಕಾರ ಗೋ ಹತ್ಯೆ ನಿಷೆಧ ಕಾಯ್ದೆ ಜಾರಿ ಮಾಡಿದ್ದು, ಇದರಿಂದ ರೈತರು, ಜಾನುವಾರು ಹಾಗೂ ಸಾರ್ವಜನಿಕರು ಸಮಸ್ಯೆಗೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಮಾತು ‘ಸಮಾಜದಲ್ಲಿ ಹಸಿವಿನಿಂದ ಬಳಲುತ್ತಿರುವ ಬಡವರಿಗೆ, ನಿರ್ಗತಿಕರಿಗೆ  ಹೊಟ್ಟೆತುಂಬ ಅನ್ನ ಸಿಗುವಂತೆ ಮಾಡುವುದು ನನ್ನ ಮೊದಲ ಆದ್ಯತೆ. ಆ ನಂತರ ಉಳಿದರೆ ಪ್ರಾಣಿ, ಪಕ್ಷಿಗಳಿಗೆ ನೀಡುತ್ತೇನೆಂದು’ ಹೇಳಿರುವುದು ನೆನಪಾಗುತ್ತದೆ.

-ಮರಿತಿಬ್ಬೇಗೌಡ, ಜೆಡಿಎಸ್ ಸದಸ್ಯ, ವಿಧಾನಪರಿಷತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News