ಅಕ್ರಮ ಗಣಿಗಾರಿಕೆ: ಲೋಕಾಯುಕ್ತ ಎಸ್‍ಐಟಿ ಅವಧಿ ವಿಸ್ತರಣೆಗೆ ಸಚಿವ ಸಂಪುಟ ನಿರ್ಧಾರ

Update: 2021-03-17 17:34 GMT

ಬೆಂಗಳೂರು, ಮಾ.17: ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಲು ಲೋಕಾಯುಕ್ತ ರಚನೆ ಮಾಡಿರುವ ವಿಶೇಷ ತನಿಖಾ ತಂಡ(ಎಸ್‍ಐಟಿ)ದ ಅವಧಿಯನ್ನು ವಿಸ್ತರಣೆ ಮಾಡಲು ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಇತರ ಪ್ರಮುಖ ನಿರ್ಣಯಗಳು: ಕರ್ನಾಟಕ ಸಹಕಾರಿ ಸೊಸೈಟಿಗಳ (ತಿದ್ದುಪಡಿ) ಮಸೂದೆ, 2021 ಮತ್ತು ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆಗೆ ಅನುಮೋದನೆ. ಲೋಕಾಯುಕ್ತರ 2017-18ನೆ ಸಾಲಿನ ವಾರ್ಷಿಕ ವರದಿಯನ್ನು ವಿಧಾನ ಮಂಡಲದಲ್ಲಿ ಮಂಡಿಸಲು ಒಪ್ಪಿಗೆ. ಗುತ್ತಿಗೆ ಆಧಾರದಲ್ಲಿ ಲೋಕಾಯುಕ್ತಕ್ಕೆ 12 ಹಿರಿಯ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಅಕ್ರಮ ಗಣಿಗಾರಿಕೆ ಸಂಬಂಧ ಲೋಕಾಯುಕ್ತದಿಂದ ರಚನೆಗೊಂಡ ಎಸ್‍ಐಟಿಯ ಅವಧಿ ವಿಸ್ತರಣೆ. 2021-21 ನೇ ಸಾಲಿನ ಸರಕಾರಿ ಮತ್ತು ಅನುದಾನಿತ ಶಾಲೆಗಳ 1-10ನೇ ತರಗತಿ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆಗೆ 153.91 ಕೋಟಿ ರೂ., ಕರ್ನಾಟಕ ವಿತ್ತೀಯ ಹೊಣೆಗಾರಿಕೆ ತಿದ್ದುಪಡಿ ಮಸೂದೆ 2021, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ತಿದ್ದುಪಡಿ ಮಸೂದೆ 2021ಕ್ಕೆ ಸಂಪುಟ ಅನುಮೋದನೆ ನೀಡಿದೆ.

ರಾಣೆಬೆನ್ನೂರು ತಾಲೂಕು ಮಟ್ಟದ ಆಸ್ಪತ್ರೆಯನ್ನು 50 ಹಾಸಿಗೆಯಿಂದ ನೂರು ಹಾಸಿಗೆಗೆ ಮೇಲ್ದರ್ಜೆಗೇರಿಸಲು 10.84 ಕೋಟಿ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ. ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದಂತೆ ವಿಶೇಷ ನೇಮಕಾತಿಗಾಗಿ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನೇಮಕಾತಿ ವಿಶೇಷ ಕಾನೂನುಗಳು 2020ಕ್ಕೆ ಅನುಮೋದನೆ. 1120 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು 2032 ಆರೋಗ್ಯ ಮತ್ತು ಕಲ್ಯಾಣ ಕೇಂದ್ರಗಳಲ್ಲಿ ನ್ಯಾಷನಲ್ ಆರೋಗ್ಯ ಮಿಷನ್ ಅಡಿ ಟೆಲಿ ಮೆಡಿಸನ್ ಅಳವಡಿಕೆಗೆ 18.96 ಕೋಟಿ ರೂ.ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಕರ್ನಾಟಕ ಕಾರಾಗೃಹ ಅಭಿವೃದ್ಧಿ ಮಂಡಳಿ ಮಸೂದೆ 2021ಕ್ಕೆ ಅನುಮೋದನೆ. ಕರ್ನಾಟಕ ರಾಜ್ಯ ಕೈಗಾರಿಕೆ ಭದ್ರತೆ ಪಡೆ ವೃಂದ ನೇಮಕ ನಿಯಮ 2021ಕ್ಕೆ ಒಪ್ಪಿಗೆ. ಕರ್ನಾಟಕ ನಗರ ಮತ್ತು ಪಟ್ಟಣ ಯೋಜನೆ ಮೂರನೇ ತಿದ್ದುಪಡಿ ಮಸೂದೆಗೆ ಅನುಮೋದನೆ. ಅಥಣಿ ತಾಲೂಕಿನ ಸತ್ತಿ ಮತ್ತು ಇತರ ಎಂಟು ಗ್ರಾಮಗಳಿಗೆ ಬಹುಗ್ರಾಮ ಯೋಜನೆ ಅನುಷ್ಠಾನಕ್ಕೆ 45.39 ಕೋಟಿ ರೂ. ಇದಕ್ಕೆ ಜಲಜೀವನ ಮಿಷನ್ ಮತ್ತು ನಬಾರ್ಡ್‍ನಿಂದ ನೆರವು ಪಡೆದುಕೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಮಂಗಳೂರಿನಲ್ಲಿ ಜರ್ಮನ್ ತಂತ್ರಜ್ಞಾನ ತರಬೇತಿ ಸಂಸ್ಥೆ ಕಟ್ಟಡ

ಬೆಳಗಾವಿ ಮತ್ತು ಮಂಗಳೂರಿನಲ್ಲಿ 31.66 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಜರ್ಮನ್ ತಂತ್ರಜ್ಞಾನ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ. ಮಂಗಳೂರು ನಗರ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಕದ್ರಿ ಮಾರುಕಟ್ಟೆ ಸಂಕೀರ್ಣ ನಿರ್ಮಾಣಕ್ಕೆ 12.30 ಕೋಟಿ ರೂ.ಗೆ ಒಪ್ಪಿಗೆ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News