‘ಇಸ್ರೇಲ್ ಮಾದರಿ' ಕೃಷಿಗೆ ಮೀಸಲಿಟ್ಟ 150 ಕೋಟಿ ರೂ.ಹಣ ಎಲ್ಲಿ?: ಜೆಡಿಎಸ್ ಶಾಸಕರ ಧರಣಿ

Update: 2021-03-17 17:36 GMT

ಬೆಂಗಳೂರು, ಮಾ. 17: ‘2018-19ನೇ ಸಾಲಿನ ಆಯವ್ಯಯದಲ್ಲಿ ತೋಟಗಾರಿಕೆ ವಲಯಕ್ಕೆ ‘ಇಸ್ರೇಲ್ ಕೃಷಿ ಪದ್ಧತಿ ಯೋಜನೆ'ಗೆ ಮೀಸಲಿಟ್ಟಿದ್ದ 150 ಕೋಟಿ ರೂ.ಅನುದಾನ ಎಲ್ಲಿಗೆ ಹೋಯಿತು' ಎಂದು ಜೆಡಿಎಸ್ ಸದಸ್ಯರು ವಿಧಾನಸಭೆಯಲ್ಲಿ ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದ ಪ್ರಸಂಗ ನಡೆಯಿತು.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ನಾಗನಗೌಡ ಕಂದಕೂರ್ ಕೇಳಿದ ಪ್ರಶ್ನೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಉತ್ತರ ನೀಡಿ, ಕಾರವಾರ, ತುಮಕೂರು, ಯಾದಗಿರಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ‘ಇಸ್ರೇಲ್ ಮಾದರಿ'ಯ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು 150 ಕೋಟಿ ರೂ.ಅನುದಾನ ನಿಗದಿಪಡಿಸಲಾಗಿತ್ತು. ಆದರೆ, ಈ ಮೂಲ ಹಣವು ಇಲಾಖೆಗೆ ಬರಲೇ ಇಲ್ಲ. ಅನುದಾನ ಎಲ್ಲಿಗೆ ಹೋಯಿತು ಎಂಬುದು ಈವರೆಗೂ ಪತ್ತೆಯಾಗಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ಪತ್ತೆ ಮಾಡಿ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಸಚಿವರ ಉತ್ತರದಿಂದ ಕೆರಳಿದ ಜೆಡಿಎಸ್‍ನ ಹಿರಿಯ ಸದಸ್ಯರಾದ ಶಿವಲಿಂಗೇಗೌಡ, ಎಚ್.ಡಿ.ರೇವಣ್ಣ, ಎಚ್.ಕೆ.ಕುಮಾರಸ್ವಾಮಿ, ಬಾಲಕೃಷ್ಣ, ಅನ್ನದಾನಿ, ಕೃಷ್ಣಾರೆಡ್ಡಿ, ಮಂಜುನಾಥ್, ನಾಡಗೌಡ ಸೇರಿದಂತೆ ಇನ್ನಿತರರು ಸಚಿವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರ ಮಹತ್ವದ ಯೋಜನೆಗೆ ಘೋಷಣೆ ಮಾಡಿದ ಅನುದಾನ ಎಲ್ಲಿಗೆ ಹೋಗಿದೆ ಎಂದು ಪ್ರಶ್ನಿಸಿದರು.

ಯೋಜನೆಗೆ ಮೀಸಲಿಟ್ಟ ಅನುದಾನ ಎಲ್ಲಿಗೆ ಹೋಗಿದೆ ಎಂದು ಸಂಬಂಧಪಟ್ಟ ಸಚಿವರಿಗೆ ಮಾಹಿತಿ ಇಲ್ಲ ಎಂದರೆ ಹೇಗೆ? ಸರಕಾರ ನಡೆಸುವ ರೀತಿ ಇದೇನಾ? ಜೆಡಿಎಸ್ ಅಧಿಕಾರಾವಧಿಯಲ್ಲಿ ಜಾರಿಗೆ ತಂದ ಯೋಜನೆಯನ್ನು ದುರುದ್ದೇಶದಿಂದ ತಡೆ ಹಿಡಿಯುವ ಯತ್ನ. ಕೂಡಲೇ ಆ ಯೋಜನೆಗೆ ಅನುದಾನ ಒದಗಿಸಬೇಕು ಎಂದು ಪಟ್ಟುಹಿಡಿದು ಜೆಡಿಎಸ್ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್, ಸದನದ ಸಮಯ ವ್ಯರ್ಥ ಮಾಡುವುದು ಸರಿಯಲ್ಲ. ನಿಮ್ಮ ಸಮಸ್ಯೆಗಳೇನೆ ಇದ್ದರೂ ಚರ್ಚೆ ಮಾಡಬೇಕು. ಅದು ಬಿಟ್ಟು ಧರಣಿಗೆ ಬಂದರೆ ಯಾರಿಗೂ ಒಳ್ಳೆಯದಲ್ಲ. ಹೀಗಾಗಿ ನಿಮ್ಮ ಸ್ಥಾನಗಳಿಗೆ ತೆರಳಿ ಎಂದು ಸಲಹೆ ಮಾಡಿದರು. ಈ ವೇಳೆ ಪ್ರತಿಕ್ರಿಯಿಸಿದ ಶಿವಲಿಂಗೇಗೌಡ, ಹಣ ಎಲ್ಲಿಗೆ ಹೋಗಿದೆ ಎಂದು ಸರಕಾರ ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದರು.

ಬಳಿಕ ಉತ್ತರಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಆರ್ಥಿಕ ಇಲಾಖೆ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಇಸ್ರೇಲ್ ಮಾದರಿ ಯೋಜನೆಗೆ ಮೀಸಲಿಟ್ಟ ಹಣ ಎಲ್ಲಿಗೆ ಹೋಗಿದೆ ಎಂದು ಪತ್ತೆ ಹಚ್ಚಿ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಜೆಡಿಎಸ್ ಸದಸ್ಯರು ತಮ್ಮ ಧರಣಿಯನ್ನು ಹಿಂಪಡೆದು ತಮ್ಮ ಸ್ಥಾನಗಳಿಗೆ ಮರಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News