ಡ್ರಗ್ಸ್ ಜಾಲ ಪ್ರಕರಣ: ವಿಚಾರಣೆಗೆ ಹಾಜರಾದ ತೆಲುಗು ನಟ ತನೀಶ್
ಬೆಂಗಳೂರು, ಮಾ.17: ಡ್ರಗ್ಸ್ ಜಾಲ ಪ್ರಕರಣದ ತನಿಖೆ ತೀವ್ರಗೊಳಿಸಿರುವ ನಗರದ ಗೋವಿಂದಪುರ ಠಾಣಾ ಪೊಲೀಸರು, ತೆಲುಗು ನಟ ತನೀಶ್‍ನನ್ನು ಬುಧವಾರ ವಿಚಾರಣೆಗೊಳಪಡಿಸಿದರು.
ಸಿನೆಮಾ ನಿರ್ಮಾಪಕ ಶಂಕರೇಗೌಡ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ಆರೋಪದಡಿ ತೆಲುಗು ನಟ ತನೀಶ್ ಸೇರಿ ಐದು ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಇತ್ತೀಚಿಗೆ ಪೊಲೀಸರು ನೋಟಿಸ್ ಜಾರಿ ನೀಡಿದ್ದರು. ಅದರಂತೆ ಬುಧವಾರ ಬೆಳಗ್ಗೆ ಠಾಣೆಗೆ ಹಾಜರಾದ ತನೀಶ್‍ನನ್ನು ವಿಚಾರಣೆ ನಡೆಸಿ, ಅವರ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ.ಶರಣಪ್ಪ ತಿಳಿಸಿದರು.
ತನೀಶ್ ತೆಲುಗಿನ ಬಿಗ್‍ಬಾಸ್ ಸೀಸನ್-2ರಲ್ಲಿ ಸ್ಪರ್ಧಿಸಿದ್ದು, ಬಾಲನಟನಾಗಿಯೂ ಈ ಹಿಂದೆ ಹಲವು ಸಿನೆಮಾಗಳಲ್ಲಿ ನಟನೆ ಮಾಡಿದ್ದಾನೆ. ಇತ್ತೀಚಿಗೆ ಬಂಧಿತನಾದ ವಿದೇಶಿ ಡ್ರಗ್ಸ್ ಪೆಡ್ಲರ್ ನೊಂದಿಗೆ ಸಂಪರ್ಕದಲ್ಲಿದ್ದ ಶಂಕರೇಗೌಡ ಅವರು ತಮ್ಮ ನಿವಾಸದಲ್ಲಿ ಆಗಾಗ ತಡರಾತ್ರಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಇದರಲ್ಲಿ ತನೀಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಈ ಮಾಹಿತಿಯನ್ನು ಆಧರಿಸಿ ವಿಚಾರಣೆ ಕೈಗೊಳ್ಳಲಾಗಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.