×
Ad

ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರಕ್ಕೆ ಅನರ್ಹರ ನೇಮಕ: ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ಸೂಚನೆ

Update: 2021-03-17 23:28 IST

ಬೆಂಗಳೂರು, ಮಾ.17: ಕನಿಷ್ಠ ಶೈಕ್ಷಣಿಕ ಅರ್ಹತೆ ಇಲ್ಲದಿದ್ದರೂ ಸಚಿವ ಆರ್.ಅಶೋಕ್ ಸಂಬಂಧಿ ಎ.ರವಿ ಅವರನ್ನು ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆಂದು ಆರೋಪಿಸಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ  ಹೈಕೋರ್ಟ್ ಸೂಚನೆ ನೀಡಿದೆ.

ಈ ಸಂಬಂಧ ಆರ್‍ಟಿಐ ಕಾರ್ಯಕರ್ತ ಟಿ.ನರಸಿಂಹಮೂರ್ತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಎಸ್.ಉಮಾಪತಿ ಅವರು, ಕಳೆದ ಜುಲೈನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಕೋರ್ಟ್ ನವೆಂಬರ್ ನಲ್ಲಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಆದರೆ, ಈವರೆಗೆ ಸರಕಾರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿಲ್ಲ. ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸರಕಾರದ ಪರ ವಕೀಲರು, ಕಾರಣಾಂತರಗಳಿಂದ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ವಿಳಂಬವಾಗಿದೆ. ಹೀಗಾಗಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ಪೀಠ, ಮಾ.30ರೊಳಗೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಬೇಕು. ಇದು ಕೊನೆಯ ಅವಕಾಶ ಎಂದು ಸ್ಪಷ್ಟಪಡಿಸಿತು. ಅಲ್ಲದೇ, ನೇಮಕಾತಿ ಆದೇಶಕ್ಕೆ ಸಂಬಂಧಿತ ಕಡತವನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಎ.12ಕ್ಕೆ ಮುಂದೂಡಿತು.

ಅರ್ಜಿದಾರರ ಮನವಿ ಏನು: ಕನಿಷ್ಠ ಶೈಕ್ಷಣಿಕ ಅರ್ಹತೆ ಇಲ್ಲದಿದ್ದರೂ ಸಚಿವ ಆರ್.ಅಶೋಕ್ ಸಂಬಂಧಿ ಆಗಿರುವ ಎ.ರವಿ ಅವರನ್ನು ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ಎ.ರವಿ ಕೇವಲ ಪಿಯುವರೆಗೆ ಓದಿದ್ದು, ಪದವಿ ಕೂಡ ಪೂರೈಸಿಲ್ಲ. ಆದರೂ ಸಿಎಂ ಮತ್ತು ಅಶೋಕ್ ಅವರ ರಾಜಕೀಯ ಪ್ರಭಾವ ಬಳಸಿ ಉನ್ನತ ಹುದ್ದೆ ಪಡೆದುಕೊಂಡಿದ್ದಾರೆ.

ವಿಮಾನ ನಿಲ್ದಾಣದ ಸುತ್ತಲಿನ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಬಹುದೊಡ್ಡ ವ್ಯಾಪ್ತಿಯ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ, ಮಾನ್ಯ ಮಾಡುವ ಅಥವಾ ತಿರಸ್ಕರಿಸುವ ಜವಾಬ್ದಾರಿಯನ್ನು ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ಹೊಂದಿದೆ. ಇಂಥ ಪ್ರಾಧಿಕಾರಕ್ಕೆ ಕನಿಷ್ಠ ಶೈಕ್ಷಣಿಕ ಅರ್ಹತೆಯೂ ಇಲ್ಲದ ವ್ಯಕ್ತಿಯನ್ನು ರಾಜಕೀಯ ಕಾರಣಗಳಿಗಾಗಿ ನೇಮಕ ಮಾಡಿದ್ದು, ಸರಕಾರದ ನೇಮಕಾತಿ ಆದೇಶವನ್ನು ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News