ದೇವಸ್ಥಾನದಿಂದ ಅರಣ್ಯ ಒತ್ತುವರಿ ವಿಚಾರ: ಭೂಮಿ ಬಿಟ್ಟು ಕೊಡುವ ಬಗ್ಗೆ ನಿಲುವು ತಿಳಿಸಲು ಹೈಕೋರ್ಟ್ ನಿರ್ದೇಶನ
ಬೆಂಗಳೂರು, ಮಾ.18: ಸಿಗಂಧೂರು ಚೌಡೇಶ್ವರಿ ದೇವಸ್ಥಾನ ಮಂಡಳಿ ಅವರು ಒತ್ತುವರಿ ಮಾಡಿಕೊಂಡಿರುವ ಅರಣ್ಯ ಭೂಮಿಯನ್ನು ಸರಕಾರಕ್ಕೆ ಸ್ವಯಂಪ್ರೇರಿತವಾಗಿ ಹಿಂದಿರುಗಿಸುವ ಕುರಿತು ನಿಲುವು ಸ್ಪಷ್ಟಪಡಿಸುವಂತೆ ಹೈಕೋರ್ಟ್ ದೇವಸ್ಥಾನದ ಆಡಳಿತ ಮಂಡಳಿಗೆ ನಿರ್ದೇಶಿಸಿದೆ.
ಈ ಸಂಬಂಧ ಸಾಗರ ತಾಲೂಕಿನ ಲಕ್ಷ್ಮೀನಾರಾಯಣ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ದೇವಸ್ಥಾನದ ಪರ ವಾದಿಸಿದ ವಕೀಲರು, ಶಿವಮೊಗ್ಗ ಡಿಸಿ ನೀಡಿರುವ ಮಾಹಿತಿಯಂತೆ ದೇವಸ್ಥಾನ 12.16 ಎಕರೆಯನ್ನು ಬಳಸಿಕೊಂಡಿಲ್ಲ. ದೇವಸ್ಥಾನ ಸುಮಾರು 5 ಎಕರೆ ಜಾಗದಲ್ಲಿ ಮಾತ್ರ ಇದೆ. ಇನ್ನು ಈ ಜಾಗವನ್ನು ದೇವಸ್ಥಾನಕ್ಕೆ ಮಂಜೂರು ಮಾಡಿಕೊಡಲು ಸರಕಾರಕ್ಕೆ ಕೋರಲಾಗಿದ್ದು, ಪರಿಶೀಲನೆ ಹಂತದಲ್ಲಿದೆ ಎಂದು ಪೀಠಕ್ಕೆ ತಿಳಿಸಿದರು.
ಅರ್ಜಿದಾರರ ಪರ ವಕೀಲರು ವಾದಿಸಿ, ಡಿಸಿ ನೀಡಿರುವ ವರದಿಯಂತೆ ಇಡೀ ಜಾಗ ಅರಣ್ಯ ಪ್ರದೇಶಕ್ಕೆ ಸೇರಿದ್ದಾಗಿದೆ. ಈ ಭೂಮಿಯನ್ನು ಸರಕಾರವೂ ಸಕ್ರಮಗೊಳಿಸಲು ಬರುವುದಿಲ್ಲ. ಹೀಗಾಗಿ ಮನವಿ ಪುರಸ್ಕರಿಸಬಾರದು ಪೀಠಕ್ಕೆ ತಿಳಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ಚೌಡೇಶ್ವರಿ ದೇವಸ್ಥಾನ ಮಂಡಳಿ ಅವರು ಜಾಗವನ್ನು ಹಿಂದಿರುಗಿಸುವ ಕುರಿತು ನಿಲುವು ತಿಳಿಸುವಂತೆ ನಿರ್ದೇಶನ ನೀಡಿತು.