‘ಕೃಷ್ಣಾ’ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಕೇಂದ್ರಕ್ಕೆ ಪತ್ರ: ಗೋವಿಂದ ಕಾರಜೋಳ
ಬೆಂಗಳೂರು, ಮಾ.18: ಉತ್ತರ ಕರ್ನಾಟಕದ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸುವ ಸಂಬಂಧ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಗುರುವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ಪ್ರಕಾಶ್ ರಾಥೋಡ್ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದ ಸಚಿವರು, ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ 2020ರಲ್ಲಿ 3 ಸಾವಿರ ಕೋಟಿ ರೂ.ಖರ್ಚು ಮಾಡಿದ್ದೇವೆ. ಪ್ರಸ್ತುತ ಬಜೆಟ್‍ನಲ್ಲಿ ಮತ್ತೆ 5,600 ಕೋಟಿ ರೂ.ಮೀಸಲಿರಿಸಲಾಗಿದೆ ಎಂದು ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಆಗಿದ್ದಾಗ ಸುಮಾರು 17 ಸಾವಿರ ಕೋಟಿ ರೂ.ಮೀಸಲಿಟ್ಟಿದ್ದರು. ಆ ಹಣದಲ್ಲಿ 730 ಕೋಟಿ ರೂ.ಖರ್ಚು ಮಾಡಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಸುಮಾರು 1 ಲಕ್ಷ ಕೋಟಿ ರೂ.ಬೇಕಾಗಬಹುದು ಎಂದು ಹೇಳಿದರು.
ಮಧ್ಯಪ್ರವೇಶಿಸಿ ಮಾತನಾಡಿದ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು, ಆಲಮಟ್ಟಿ ಅಣೆಕಟ್ಟೆಗೆ 1964ರಲ್ಲಿ ಲಾಲ್ ಬಹದ್ದೂರ್‍ಶಾಸ್ತ್ರಿ ಅವರು ಅಡಿಗಲ್ಲು ಹಾಕಿದ್ದರು. ಆದರೆ, ರಾಜ್ಯ ಸರಕಾರ ಪಸ್ತುತ ಬಜೆಟ್‍ನಲ್ಲಿ ಕಡಿಮೆ ಹಣವನ್ನು ಮೀಡಲಿಡುವ ಮೂಲಕ ಸಮಸ್ಯೆ ಹಾಗೆಯೇ ಉಳಿಯುವಂತೆ ಮಾಡಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಿಂದ 5 ಲಕ್ಷ 96 ಸಾವಿರ ಹೆಕ್ಟೇರ್ ಜಮೀನು ನೀರಾವರಿ ಆಗಲಿದೆ ಎಂದು ತಿಳಿಸಿದರು.