ಮೀಸಲಾತಿ ಕುರಿತ ಉನ್ನತ ಮಟ್ಟದ ಸಮಿತಿ ರದ್ದುಗೊಳಿಸಲು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಪಟ್ಟು

Update: 2021-03-18 13:32 GMT

ಬೆಂಗಳೂರು, ಮಾ.18: ಮೀಸಲಾತಿ ಕುರಿತು ಪರಿಶೀಲನೆ ನಡೆಸಲು ರಚಿಸಿರುವ ಉನ್ನತ ಮಟ್ಟದ ಸಮಿತಿ ಅಸಂವಿಧಾನಿಕ. ಯಾವುದೇ ಸಾಂವಿಧಾನಿಕ ಮಾನ್ಯತೆ ಇಲ್ಲದ ಈ ಸಮಿತಿಯನ್ನು ಕೂಡಲೇ ರದ್ದುಗೊಳಿಸುವಂತೆ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಆಗ್ರಹಿಸಿದೆ.

ಗುರುವಾರ ವೇದಿಕೆಯ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರ ನೇತೃತ್ವದ ನಿಯೋಗ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಮುಖ್ಯಕಾರ್ಯದರ್ಶಿ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.

ಬಳಿಕ ಈ ಕುರಿತು ಪ್ರತಿಕ್ರಿಯಿಸಿದ ವೇದಿಕೆಯ ಗೌರವಾಧ್ಯಕ್ಷರೂ ಆದ ಹಿರಿಯ ಚಿತ್ರನಟ ಮುಖ್ಯಮಂತ್ರಿ ಚಂದ್ರು, ಸಂವಿಧಾನದಲ್ಲಿ ಡಾ.ಅಂಬೇಡ್ಕರ್ ಅವರ ಆಶಯದಂತೆ ಮೀಸಲಾತಿಯನ್ನು ಅಳವಡಿಸಿಕೊಳ್ಳಲಾಗಿದೆ. ಪ್ರಾತಿನಿಧ್ಯವೇ ಇಲ್ಲದ ಹಿಂದುಳಿದ ವರ್ಗಗಳ ಜನರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಅಭಿವೃದ್ದಿಗೊಳ್ಳಲು ಅವಕಾಶ ನೀಡುವ ಸದುದ್ದೇಶ ಇದರ ಹಿಂದೆ ಇದೆ. ಆದರೆ, ಸಂವಿಧಾನದ ಮೂಲಕ ದತ್ತವಾಗಿರುವ ಮೀಸಲಾತಿಯನ್ನೆ ಪರಿಶೀಲನೆ ಮಾಡಲು ಕರ್ನಾಟಕ ರಾಜ್ಯ ಸರಕಾರ ಹೊರಟಿದ್ದು, ಸಂವಿಧಾನದಲ್ಲಿ ಅಡಕವಾಗಿರುವ ಅಂಶಗಳನ್ನು ಪರಾಮರ್ಶಿಸುವಂತಹ ಸಮಿತಿಯನ್ನು ರಚಿಸುವಂತಹ ಕ್ರಮಕ್ಕೆ ಯಾವ ಕಾನೂನು ಅವಕಾಶ ನೀಡಿದೆ ಎಂದು ಟೀಕಿಸಿದರು.

ವೇದಿಕೆಯ ಅಧ್ಯಕ್ಷ ಎಂ.ಸಿ. ವೇಣುಗೋಪಾಲ್ ಮಾತನಾಡಿ, ಮೀಸಲಾತಿ ಪರಾಮರ್ಶಿಸುವ ಕುರಿತು ಉನ್ನತ ಮಟ್ಟದ ಸಮಿತಿಗೆ ಯಾವುದೇ ನಿರ್ದಿಷ್ಟ ಮಾನದಂಡಗಳನ್ನು ಕೂಡ ನೀಡಲಾಗಿಲ್ಲ. ಜೊತೆಗೆ ಕಾರ್ಯವ್ಯಾಪ್ತಿಯ ಚೌಕಟ್ಟನ್ನು ನೀಡಿಲ್ಲ. ಇದು ಅನೇಕ ರೀತಿಯ ಅನುಮಾನಗಳಿಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ, ಯಾವುದೇ ಕಾರ್ಯವ್ಯಾಪ್ತಿ ಇಲ್ಲದೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಿರುವುದು ಕಾನೂನು ಬಾಹಿರವಲ್ಲವೆ ಎಂದು ಪ್ರಶ್ನಿಸಿದರು.

ಸಮಿತಿಯಲ್ಲಿರುವ ನಿವೃತ್ತ ಐಎಎಸ್ ಅಧಿಕಾರಿ ಕೆ.ರತ್ನಪ್ರಭ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ನಿವೃತ್ತಿಯ ನಂತರ ಬಿಜೆಪಿ ಪಕ್ಷಕ್ಕೆ ಸೇರಿದ್ದಾರೆ. ಇನ್ನು ಡಾ.ಬಿ.ವಿ. ವಸಂತಕುಮಾರ್ ಎಂಬುವರು ಸಹ ಬಿಜೆಪಿ ಪರ ಮನಸ್ಥಿತಿ ಹೊಂದಿದ್ದಾರೆ. ಇವರು ಪಕ್ಷದ ಆಣತಿಯಂತೆ ನಡೆದುಕೊಳ್ಳುತ್ತಾರೆಯೆ ಹೊರತು ಅತಿ ಹಿಂದುಳಿದ ಜಾತಿಗಳ ಬಗ್ಗೆ ಪೂರ್ವಗ್ರಹವಿಲ್ಲದೆ ನ್ಯಾಯಯುತವಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ನಮಗೆ ಹೇಗೆ ಬರಲು ಸಾಧ್ಯ ಎಂದು ಹೇಳಿದರು.

ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಯಾವುದೇ ಕಾನೂನಿನ ಪಾವಿತ್ರತೆ ಇಲ್ಲದ, ಕೇವಲ ರಾಜಕೀಯ ಕಾರಣಕ್ಕಾಗಿ ರಚಿಸಲಾಗಿರುವ ಸದರಿ ಉನ್ನತ ಮಟ್ಟದ ಸಮಿತಿಯನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದರಿಂದ ನಮ್ಮ ಹಿತಾಸಕ್ತಿಗೆ ಧಕ್ಕೆ ಉಂಟಾಗುವ ಆತಂಕ ನಮಗಿದೆ. ಈ ಹಿನ್ನೆಲೆಯಲ್ಲಿ ಮೀಸಲಾತಿ ಪರಾಮರ್ಶಿಸುವ ಕುರಿತು ಉನ್ನತ ಮಟ್ಟದ ಸಮಿತಿಯನ್ನು ತಕ್ಷಣ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.

ನಿಯೋಗದಲ್ಲಿ ವೇದಿಕೆಯ ಉಪಾಧ್ಯಕ್ಷರಾದ ಪಿ.ಆರ್.ರಮೇಶ್, ಡಾ.ಜಿ.ರಮೇಶ್, ಎಚ್. ಸುಬ್ಬಣ್ಣ, ಕಾರ್ಯಕಾರಿ ಸಮಿತಿ ಸದಸ್ಯರಾದ ಜಿ.ಡಿ.ಗೋಪಾಲ್, ಎಚ್.ಸಿ.ರುದ್ರಪ್ಪ, ಟಿ.ಸಿ ನಟರಾಜ್, ಎಂ.ಬಿ.ಬಸವರಾಜ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News