ಮೂರು ಕ್ಷೇತ್ರಗಳ ಉಪಚುನಾವಣೆ: ವಿಧಾನ ಮಂಡಲ ಅಧಿವೇಶನ ಮೊಟಕು ಸಾಧ್ಯತೆ

Update: 2021-03-18 14:18 GMT

ಬೆಂಗಳೂರು, ಮಾ. 18: ಬೆಳಗಾವಿ ಲೋಕಸಭೆ ಕ್ಷೇತ್ರ, ರಾಯಚೂರು ಜಿಲ್ಲೆಯ ಮಸ್ಕಿ, ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ತಿಂಗಳ ಅಂತ್ಯದವರೆಗೆ ನಿಗದಿಯಾಗಿದ್ದ ವಿಧಾನ ಮಂಡಲ ಅಧಿವೇಶನ ಕಲಾಪವನ್ನು ಮೂರ್ನಾಲ್ಕು ದಿನ ಮೊಟಕುಗೊಳಿಸುವ ಸಾಧ್ಯತೆಗಳಿವೆ.

ತೀವ್ರ ಪ್ರತಿಷ್ಠೆ ಮತ್ತು ಪೈಪೋಟಿ ಸೃಷ್ಟಿಸಿರುವ ಮೂರು ಕ್ಷೇತ್ರಗಳ ಉಪಚುನಾವಣೆ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್‍ಗೆ ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿ ಸೃಷ್ಟಿಸಿದೆ. ಹೀಗಾಗಿ ಮೂರು ಪಕ್ಷಗಳು ಉಪಚುನಾವಣೆ ಗೆಲುವಿಗೆ ಅಭ್ಯರ್ಥಿಗಳ ಆಯ್ಕೆ, ನಾಮಪತ್ರ ಸಲ್ಲಿಕೆ, ಚುನಾವಣಾ ಪ್ರಚಾರ ಹಾಗೂ ಗೆಲುವಿನ ರಣತಂತ್ರ ರೂಪಿಸಬೇಕಿದೆ.

ಎಪ್ರಿಲ್ 17ಕ್ಕೆ ಮೂರು ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಅದಕ್ಕೂ ಮೊದಲು ಮೂರು ರಾಜಕೀಯ ಪಕ್ಷಗಳು ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕಿದೆ. ಆ ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನ ಕಲಾಪವನ್ನು ಮೂರು ಅಥವಾ ನಾಲ್ಕು ದಿನ ಅವಧಿಯನ್ನು ಮೊಟಕುಗೊಳಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ವಿಧಾನ ಮಂಡಲ ಉಭಯ ಸದನಗಳಲ್ಲಿ 2021-22ನೆ ಸಾಲಿನ ಆಯವ್ಯಯದ ಮೇಲಿನ ಚರ್ಚೆಗಳು ನಡೆಯುತ್ತಿದ್ದು, ಶುಕ್ರವಾರ(ಮಾ.26) ಸಿಎಂ ಯಡಿಯೂರಪ್ಪ ಉತ್ತರ ನೀಡಲಿದ್ದಾರೆ. ಆ ಬಳಿಕ ಉಪಚುನಾವಣೆ ನಡೆಯುತ್ತಿರುವುದರಿಂದ ಕಲಾಪವನ್ನು ಮೊಟಕುಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಗೊತ್ತಾಗಿದೆ.

ಮಾ.22ರ ಸೋಮವಾರ ಬೆಳಗ್ಗೆ 10ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಅಲ್ಲಿ ಈ ಸಂಬಂಧ ಸಮಾಲೋಚನೆ ನಡೆಸಲಿದ್ದಾರೆ. ಆ ಬಳಿಕ ಸ್ಪೀಕರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಅಧಿವೇಶನ ಮೊಟಕುಗೊಳಿಸುವ ಸಂಬಂಧ ತೀರ್ಮಾನಿಸುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News