ಸಿಇಎನ್ ಠಾಣೆಗಳಿಗೆ ಮೂಲ ಸೌಕರ್ಯ ಒದಗಿಸುವಂತೆ ಸರಕಾರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು, ಮಾ.18: ಸೈಬರ್, ಎಕನಾಮಿಕ್ಸ್ ಅಂಡ್ ನಾರ್ಕೋಟಿಕ್ಸ್(ಸಿಇಎನ್) ಪೊಲೀಸ್ ಠಾಣೆಗಳ ಅಗತ್ಯತೆಗಳನ್ನು ಗಮನಿಸಿ ಸೂಕ್ತ ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದೆ.
ಬೆಂಗಳೂರು ನಗರದಲ್ಲಿರುವ ಎಂಟು ಸಿಇಎನ್ ಪೊಲೀಸ್ ಠಾಣೆಗಳಿಗೆ ಸೂಕ್ತ ಮೂಲ ಸೌಕರ್ಯಗಳನ್ನೇ ಒದಗಿಸಿಕೊಟ್ಟಿಲ್ಲ ಎಂದು ವಕೀಲೆ ಸುಧಾ ಕಾಟ್ವಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ರಾಜ್ಯ ಸರಕಾರಕ್ಕೆ ಈ ಸೂಚನೆ ನೀಡಿದೆ.
ಸಿಇಎನ್ ಪೊಲೀಸ್ ಠಾಣೆಗಳಿಗೆ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿದೆಯೇ ಎಂದು ಸರಕಾರಕ್ಕೆ ಪ್ರಶ್ನಿಸಿದ ಪೀಠ, ಠಾಣೆಗಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳೇನು ಎಂಬುದನ್ನು ಪರಿಶೀಲಿಸಿ ಅಗತ್ಯ ಸಿಬ್ಬಂದಿ, ಸಾಫ್ಟ್ ವೇರ್ ಹಾಗೂ ಸಾಧನಗಳನ್ನು ಒದಗಿಸಿಕೊಡುವಂತೆ ಸೂಚಿಸಿತು. ಹಾಗೆಯೇ, ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡದ ಸರಕಾರದ ನಡೆಗೆ ಬೇಸರ ವ್ಯಕ್ತಪಡಿಸಿತು.
ಇದೇ ವೇಳೆ ಸಿಇಎನ್ ಪೊಲೀಸ್ ಠಾಣೆಗಳ ಕಾರ್ಯವೈಖರಿ ಪರಿಶೀಲಿಸುವ ನಿಟ್ಟಿನಲ್ಲಿ ಈ ಠಾಣೆಗಳಲ್ಲಿ ಎಷ್ಟು ಪ್ರಕರಣಗಳಿವೆ, ಎಷ್ಟು ಎಫ್‍ಐಆರ್ ದಾಖಲಿಸಲಾಗಿದೆ, ಎಷ್ಟರಲ್ಲಿ ತನಿಖೆ ಮುಂದುವರೆದಿದೆ ಮತ್ತು ಎಷ್ಟು ಪ್ರಕರಣಗಳಲ್ಲಿ ಚಾರ್ಜ್‍ಶೀಟ್ ಸಲ್ಲಿಸಲಾಗಿದೆ ಎಂಬ ವಿವರಗಳನ್ನು ಸಲ್ಲಿಸುವಂತೆ ಸರಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಎ.9ಕ್ಕೆ ಮುಂದೂಡಿತು.