ದನ, ಕರುಗಳನ್ನು ಪೂಜೆ ಮಾಡಲು ನಾವು, ಹೆಣ ಹೊರಲು ಹೊಲೆಯರು; ಇದೆಂಥಾ ಪದ್ಧತಿ?: ರಮೇಶ್ ಕುಮಾರ್
ಬೆಂಗಳೂರು, ಮಾ.18: ಊರುಗಳಲ್ಲಿ ದನ, ಕರುಗಳು ಸತ್ತು ಹೋದರೆ ಅವುಗಳ ಹೆಣ ಹೊರಲು ಬ್ರಾಹ್ಮಣರು ಬರುತ್ತಾರೋ? ಇಲ್ಲ. ನಾವು ಯಾರನ್ನು ಊರಿನ ಹೊರಗೆ ಹೊಲಗೇರಿಯಲ್ಲಿ ಇಟ್ಟಿದ್ದೀವೋ ಅವರೇ ಬರಬೇಕು. ಪೂಜೆ ಮಾಡಲು ನಾವು, ಸತ್ತು ಹೋದರೆ ಅದನ್ನು ಹೊರಕ್ಕೆ ತೆಗೆದುಕೊಂಡು ಹೋಗಲು ಅವರು ಬರಬೇಕು. ಇದು ಎಂತಹ ಪದ್ಧತಿ ಎಂದು ಕಾಂಗ್ರೆಸ್ ಸದಸ್ಯ ಕೆ.ಆರ್.ರಮೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಲ ಹೊರುವುದನ್ನು ದಲಿತರು ಬಿಟ್ಟು ಬೇರೆ ಯಾರಾದರೂ ಮಾಡುತ್ತಾರೆಯೇ? ಅದೇ ರೀತಿ ಐತಿಹಾಸಿಕವಾಗಿ ದನ ಅವರ ಆಹಾರದ ಪದ್ಧತಿಯಾಗಿದೆ. ಪೂಜೆಗೆ ನಾವು ಎದುರು ಬರಲ್ಲ. ಆದರೆ, ರೈತನಿಗೆ ಆರ್ಥಿಕವಾಗಿ ಹೊರೆಯಾಗುವುದು, ಕೃಷಿಗೆ ಅನುಪಯುಕ್ತವಾಗುವ ಸಂದರ್ಭದಲ್ಲಿ ಸರಕಾರಕ್ಕೆ ಸ್ಪಷ್ಟನೆ ಇರಬೇಕು ಎಂದರು.
ಇವತ್ತು ಇಡೀ ಜಗತ್ತು ಒಂದು ಕಡೆ ಇಸ್ಲಾಮಿಕ್ ಹಾಗೂ ಕ್ರೈಸ್ತ ಜಗತ್ತು ಎಂದು ಕರೆಯಲ್ಪಡುತ್ತದೆ. ಇಸ್ಲಾಮಿಕ್ ಜಗತ್ತಿನಲ್ಲಿ ಹಂದಿ ಮಾಂಸ ನಿಷಿದ್ಧ. ಆದರೆ, ಕ್ರೈಸ್ತ ಜಗತ್ತಿನಲ್ಲಿ ಹಂದಿ ಹಾಗೂ ಬೀಫ್ ಎರಡನ್ನು ತಿನ್ನುತ್ತಾರೆ. ನಾವು ಪ್ರತಿಯೊಂದು ಜಿಲ್ಲೆಯಲ್ಲಿ ಯಾಂತ್ರೀಕೃತ ಕಸಾಯಿಖಾನೆಗಳನ್ನು ಮಾಡಿ, ಅಂತರ್‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಮಾಂಸವನ್ನು ರಫ್ತು ಮಾಡಿದರೆ ನಮ್ಮ ರೈತರಿಗೆ ಅನುಕೂಲವಾಗುವುದಿಲ್ಲವೇ? ಎಂದು ಅವರು ಪ್ರಶ್ನಿಸಿದರು.
ನಮ್ಮವರಿಗೆ ಏನು ಮಾಡಲು ಬರದಿದ್ದರೂ ಹಂದಿ, ಕುರಿ, ಮೇಕೆ ಸಾಕಲು ಬರುತ್ತದೆ. ಪಶುಸಂಗೋಪನೆ ಇಲಾಖೆ ಯಾಕೆ ಇಂತಹ ಯಾಂತ್ರೀಕೃತ ಕಸಾಯಿಖಾನೆಗಳನ್ನು ಮಾಡಿ, ಮಾಂಸ ರಫ್ತು ಮಾಡುವ ಬಗ್ಗೆ ಆಲೋಚನೆ ಮಾಡಬಾರದು. ಸರಕಾರ ಇಂತಹ ಕೆಲಸಕ್ಕೆ ಅಗತ್ಯವಿರುವ ಸಾಲ ಸೌಲಭ್ಯ ಕೊಡಲಿ ಎಂದು ರಮೇಶ್ ಕುಮಾರ್ ಹೇಳಿದರು.
ರೈತರು ಹುತಾತ್ಮರು: ಪಂಜಾಬ್ ಗಡಿಭಾಗದಲ್ಲಿ ಕಳೆದ 111 ದಿನಗಳಿಂದ ಹೋರಾಟ ಮಾಡುತ್ತಿರುವ ರೈತರಲ್ಲಿ, ಸುಮಾರು 200 ಜನ ಮೃತಪಟ್ಟಿದ್ದಾರೆ. ಅವರನ್ನು ನಾನು ಹುತಾತ್ಮರು ಎಂದು ಕರೆಯುತ್ತೇನೆ. ಒಂದು ಸದನವಾಗಿ ನಾವು ಅವರನ್ನು ನೆನಪು ಮಾಡಿಕೊಳ್ಳದಿದ್ದರೆ ಅಪರಾಧವಾಗುತ್ತದೆ. ‘ಅಚ್ಛೇದಿನ್ ಆಯೇಂಗೆ’ ಎಂಬ ಭರವಸೆಯಲ್ಲಿ ನಾವಿದ್ದೇವೆ ಎಂದು ರಮೇಶ್ ಕುಮಾರ್ ಹೇಳಿದರು.