×
Ad

ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ಇರಬೇಕು: ಮಾಜಿ ಸಿಎಂ ಸಿದ್ದರಾಮಯ್ಯ

Update: 2021-03-18 20:54 IST

ಬೆಂಗಳೂರು, ಮಾ.18: ನಮ್ಮ ಸರಕಾರದ ಅವಧಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಮಾಡಿದ್ದು ರಾಜ್ಯಕ್ಕೆ ಬಂಡವಾಳ ಹರಿದು ಬಂದು ಉದ್ಯೋಗ ಸೃಷ್ಟಿಯಾಗಲಿ ಎಂಬ ಉದ್ದೇಶದಿಂದ. ಮೀಸಲಾತಿಯನ್ನು ತೆಗೆದು ಹಾಕಲು ಅಲ್ಲ. ನಾವು ಮೀಸಲಾತಿ ಪರವಾಗಿದ್ದೇವೆ. ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ಇರಬೇಕು ಎಂಬ ವಿಚಾರದಲ್ಲಿ ನಾವು ನಂಬಿಕೆ ಇಟ್ಟುಕೊಂಡಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಗುರುವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಬಿಎಸ್ಪಿ ಸದಸ್ಯ ಎನ್.ಮಹೇಶ್ ಮಾತನಾಡುತ್ತ, ಈ ಹಿಂದೆ ಕಾಂಗ್ರೆಸ್ ಸರಕಾರ ಹೂಡಿಕೆದಾರರ ಸಮಾವೇಶ ನಡೆಸಿದಾಗ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಆಗ್ರಹಿಸಿ ಪ್ರತಿಭಟನೆ ನಡೆದಿತ್ತು. ಆಗ ಹೋರಾಟಗಾರರ ಮೇಲೆ ಲಾಠಿಚಾರ್ಜ್ ನಡೆಸಲಾಗಿತ್ತು ಎಂದರು. ಈ ವೇಳೆ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಮಾತನಾಡಿದರು.

ಕೇಂದ್ರ ಸರಕಾರದ ಬಜೆಟ್‍ನಲ್ಲಿ 1.50 ಲಕ್ಷ ಕೋಟಿ ರೂ.ಬಂಡವಾಳ ಹಿಂತೆಗೆಯುವ ಪ್ರಸ್ತಾವನೆ ಇದೆ. ಈ ಬಂಡವಾಳ ಹಿಂತೆಗೆಯುವುದರಿಂದ ಆ ಸಂಸ್ಥೆಗಳು ಮುಚ್ಚಲ್ಪಟ್ಟು, ಮೀಸಲಾತಿಯೂ ಹೋಗುತ್ತದೆ. ಆದುದರಿಂದ, ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ತರಲು ಕೇಂದ್ರ ಸರಕಾರ ತಿದ್ದುಪಡಿ ಮಾಡಬೇಕು. ಆಗ ಮಾತ್ರ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಪಡೆಯಲು ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದರು.

ಬಂಡವಾಳ ಹಿಂತೆಗೆಯುವುದು ಮುಂದುವರಿದರೆ, ಉಳಿದ ಸರಕಾರಿ ಸ್ವಾಮ್ಯದ ಎಲ್ಲ ಕಂಪೆನಿಗಳು ಖಾಸಗೀಕರಣ ಆಗುತ್ತವೆ. ಮೀಸಲಾತಿ ಕ್ರಮೇಣ ಕಡಿಮೆಯಾಗುತ್ತದೆ. ಒಂದು ಕಡೆ ಮೀಸಲಾತಿ ಬೇಕು ಎಂದು ಹೋರಾಟಗಳು ನಡೆಯುತ್ತಿವೆ. ಮತ್ತೊಂದು ಕಡೆ ಇಂತಹ ಪ್ರಕ್ರಿಯೆಗಳಿಂದ ಮೀಸಲಾತಿ ಹೋಗುತ್ತಿದೆ. ಕ್ರಮೇಣ ಮೀಸಲಾತಿ ಅನ್ನೊದು ಶೂನ್ಯ ಆಗುತ್ತದೆ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ ಮಾತನಾಡಿ, ಅಮೆರಿಕದಲ್ಲಿ ಹೋಗಿ ನೆಲೆಸಿರುವ ಭಾರತೀಯರು, ಇಲ್ಲಿನ ಜಾತಿ ವ್ಯವಸ್ಥೆಯನ್ನೆ ಮುಂದುವರಿಸುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ಅಲ್ಲಿನ ಸಿಲಿಕಾನ್ ವ್ಯಾಲಿಯಲ್ಲಿರುವ ಒಂದು ಫಾರ್ಚೂನ್ 100 ಕಂಪೆನಿಯಲ್ಲಿ ಮೇಲ್ಜಾತಿಯವರು ದಲಿತರಿಗೆ ಕೆಲಸದ ಒತ್ತಡವನ್ನು ಹೆಚ್ಚು ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ ಎಂದರು.

ನಂತರ ಮಾತು ಮುಂದುವರೆಸಿದ ಮಹೇಶ್, ನಾವು ಕಾಲೇಜಿಗೆ ಹೋಗುವಾಗ ಮೀಸಲಾತಿಯ ಕಾರಣಕ್ಕಾಗಿ ನಮ್ಮನ್ನು ‘ಸರಕಾರಿ ಬ್ರಾಹ್ಮಣರು’ ಎಂದು ಕರೆಯುತ್ತಿದ್ದರು. ಆದರೆ, ಇವತ್ತು ಬ್ರಾಹ್ಮಣರು ಸೇರಿದಂತೆ ಎಲ್ಲರೂ ಮೀಸಲಾತಿಗಾಗಿ ಬೇಡಿಕೆ ಇಡುತ್ತಿದ್ದಾರೆ. ಪರಿಶಿಷ್ಟರಲ್ಲಿರುವ 101 ಜಾತಿಗಳನ್ನು ಎರಡು, ಮೂರು ಭಾಗಗಳಾಗಿ ವಿಂಗಡಿಸಿ ಸಾಮಾಜಿಕ ನ್ಯಾಯ ನೀಡುವಂತೆ 2005ರಲ್ಲಿ ಸದಾಶಿವ ಆಯೋಗ ವರದಿ ನೀಡಿದೆ. ಆದರೆ, ಈವರೆಗೆ ಅದರ ಬಗ್ಗೆ ಚರ್ಚೆಯಾಗಿಲ್ಲ. ಅದೇ ರೀತಿ, ಎಸ್ಸಿ, ಎಸ್ಟಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸುವ ಕುರಿತು ನ್ಯಾ.ನಾಗಮೋಹನ್ ದಾಸ್ ವರದಿ ಇದೆ. ಅದಕ್ಕೆ ಪೂರಕವಾಗಿ ಕಾಂತರಾಜು ಸಮಿತಿಯು ಜಾತಿವಾರು ಸಮೀಕ್ಷೆ ಮಾಡಿ ವರದಿ ಕೊಟ್ಟಿದೆ. ಈ ವರದಿಗಳನ್ನು ಸದನದಲ್ಲಿ ಮಂಡಿಸಿ ಚರ್ಚೆ ಮಾಡಿ. ಅವೈಜ್ಞಾನಿಕವಾಗಿದ್ದರೆ ರದ್ದು ಮಾಡಿ, ವೈಜ್ಞಾನಿಕವಾಗಿದ್ದರೆ ಒಪ್ಪಿಕೊಳ್ಳಿ ಎಂದು ಸಲಹೆ ನೀಡಿದರು.

ಪಂಚಮಸಾಲಿ, ಒಕ್ಕಲಿಗರು, ಕುರುಬರಿಗೆ ಮೀಸಲಾತಿ ನೀಡುವುದನ್ನು ನಾನು ಬೆಂಬಲಿಸುತ್ತೇನೆ. ಆದರೆ, ಅವರನ್ನು ಸಣ್ಣ ಸಣ್ಣ ಜಾತಿಯವರು ಇವರ ಪ್ರವರ್ಗಗಳಿಗೆ ಸೇರಿಸಿ, ಅವರ ಅವಕಾಶಗಳನ್ನು ಬಲಿಷ್ಠರು ಕಬಳಿಸಿಕೊಳ್ಳಲು ಅವಕಾಶ ನೀಡಬಾರದು ಎಂದು ಮಹೇಶ್ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News