ಮಾ.20ರಂದು ರೈತರ ಮಹಾಪಂಚಾಯತ್: ಎಲ್ಲಾ ಕಡೆಯಿಂದಲೂ ನಿರೀಕ್ಷೆ ಮೀರಿ ಬೆಂಬಲ ಎಂದ ರೈತ ಮುಖಂಡರು

Update: 2021-03-18 18:06 GMT

ಶಿವಮೊಗ್ಗ,ಮಾ.18: ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಮಾ.20ರಂದು ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ನಡೆಯಲಿರುವ ರೈತರ ಮಹಾ ಪಂಚಾಯತ್ ಸಮಾವೇಶಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಸಮಾವೇಶಕ್ಕೆ ಜನಸಾಗರವೇ ಹರಿದು ಬರಲಿದೆ ಎಂದು ರೈತ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ರೈತರ ಮಹಾ ಪಂಚಾಯತ್ ಸಮಾವೇಶದ ಸಂಚಾಲಕ ಕೆ.ಟಿ.ಗಂಗಾಧರ್, ಕೇಂದ್ರ ಸರ್ಕಾರದ ರೈತ ಕಾಯ್ದೆಗಳನ್ನು ವಿರೋಧಿಸಿ ಶಿವಮೊಗ್ಗದಲ್ಲಿ ಹಮ್ಮಿಕೊಂಡಿರುವ ರೈತರ ಮಹಾ ಪಂಚಾಯತ್ ಸಮಾವೇಶಕ್ಕೆ ಕಳೆದ 15 ದಿನಗಳಿಂದ ನಾವು ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ನಡೆಸುತ್ತಿದ್ದೇವೆ. ಹಳ್ಳಿ ಹಳ್ಳಿಗೆ ಪ್ರವಾಸ ಮಾಡಿದ್ದೇವೆ. ಎಲ್ಲಾ ಕಡೆಯಿಂದಲೂ ನಿರೀಕ್ಷೆ ಮೀರಿ ಬೆಂಬಲಸಿಗುತ್ತಿದೆ. ಕೇವಲ ರೈತರು ಮಾತ್ರವಲ್ಲ. ಅನ್ನ ಊಟ ಮಾಡುವ ಎಲ್ಲರೂ ಈ ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಸ್ವಯಂ ಪ್ರೇರಣೆಯಿಂದ ಮಾ.20 ರಂದು ಸೈನ್ಸ್ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಈ ಸಮಾವೇಶಕ್ಕೆ ಸಾಗರೋಪಾದಿಯಲ್ಲಿ ಜನರು ಬರುತ್ತಾರೆ. ಇದೊಂದು ಐತಿಹಾಸಿಕ ಸಮ್ಮೇಳನವಾಗಿ ದಾಖಲಾಗುತ್ತದೆ. ಒಂದು ಉತ್ಸವ ರೀತಿಯಲ್ಲಿ ಇರುತ್ತದೆ. ಇದು ಪ್ರತಿಭಟನೆಯ ಜಾತ್ರೆಯೆಂದು ರೈತ ಮಹಾ ಪಂಚಾಯತ್ ಸಮ್ಮೇಳನ ಕುರಿತು ಬಣ್ಣಿಸಿದರು.

ಕೇಂದ್ರ ಸರ್ಕಾರ ಈ ಕಾಯ್ದೆಗಳನ್ನು ತಂದು ರೈತ ಚಳುವಳಿಗೆ ಮತ್ತೊಮ್ಮೆ ಮರು ಜನ್ಮ ನೀಡಿದೆ. ಈ ರೈತ ಸಂಗ್ರಾಮ ರಾಷ್ಟ್ರವ್ಯಾಪಿ ಆಂದೋಲನವಾಗಲಿದೆ. ಇಲ್ಲಿ ಕೇವಲ ರೈತರು ಮಾತ್ರ ಇಲ್ಲ. ವಿವಿಧ ರಾಜಕೀಯ ಪಕ್ಷದವರು, ದಲಿತ ಮುಖಂಡರು, ಕನ್ನಡ ಪರ ಸಂಘಟನೆಗಳು, ಪ್ರಗತಿಪರರು, ಬರಹಗಾರರು ಎಲ್ಲರು ಈ ಮಹಾ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಚಳುವಳಿಯ ನೆಲದಲ್ಲಿ ಇದು ಹೆಜ್ಜೆ ಗುರುತನ್ನು ಬಿಟ್ಟು ಹೋಗುತ್ತದೆ ಎಂದರು.

ರೈತ ಮುಖಂಡ ಹೆಚ್.ಆರ್.ಬಸವರಾಜಪ್ಪ ಮಾತನಾಡಿ, ಮಾ.20 ರ ಬೆಳಿಗ್ಗೆ ರೈತ ಮುಖಂಡರಾದ ರಾಕೇಶ್ ಟಿಕಾಯಿತ್, ಡಾ.ದರ್ಶನ್ ಪಾಲ್, ಯುದ್ದವೀರ್ ಸಿಂಗ್ ಮುಂತಾದವರು ಬೆಂಗಳೂರಿನಿಂದ ಹೊರಟು ಭದ್ರಾವತಿಗೆ 1.30ಕ್ಕೆ ತಲುಪಲಿದ್ದಾರೆ. ಅಲ್ಲಿ ಊಟ ಮಾಡಿ ನಂತರ ನೇರವಾಗಿ ಸೈನ್ಸ್ ಮೈದಾನದ ವೇದಿಕೆಗೆ ಬರುತ್ತಾರೆ. ಕೋವಿಡ್ ಹಿನ್ನಲೆಯಲ್ಲಿ ಮತ್ತು ಜಿಲ್ಲಾಧಿಕಾರಿಗಳ ಮನವಿಯ ಮೇರೆಗೆ ಮೆರವಣಿಗೆಯನ್ನು ನಾವು ಮಾಡುವುದಿಲ್ಲ. ವೇದಿಕೆ ಕಾರ್ಯಕ್ರಮ 3 ಗಂಟೆಗೆ ಆರಂಭವಾಗುತ್ತದೆ. 1 ಗಂಟೆಯ ತನಕ ಪ್ರಖ್ಯಾತ ಹಾಡುಗಾರ ಜೆನ್ನಿ ಅವರ ಸಂಗೀತ ಕಾರ್ಯಕ್ರಮ ಮತ್ತು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ ಎಂದರು.

ಸರಿಯಾಗಿ 4 ಗಂಟೆಗೆ ರೈತ ಹೋರಾಟಗಾರ ಸುಂದರೇಶ್ ಅವರ ಪತ್ನಿ ಶೋಭ ಸುಂದರೇಶ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. ಕೆಲವೇ ರೈತ ಮುಖಂಡರು ಮಾತ್ರ ಭಾಷಣ ಮಾಡಲಿದ್ದಾರೆ. ಸುಮಾರು 6.30 ಕ್ಕೆ ಕಾರ್ಯಕ್ರಮ ಮುಗಿಯುತ್ತದೆ. ಕೋವಿಡ್ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವನ್ನು ಕೂಡ ಅನುಸರಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಎಂ.ಶ್ರೀಕಾಂತ್ ರೈತ ಮತ್ತು ಹೋರಾಟದ ಗೀತೆಗಳುಳ್ಳ ಆಡಿಯೋ ಬಿಡುಗಡೆ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಪಿ.ಶ್ರೀಪಾಲ್, ಕೆ.ಎಲ್.ಅಶೋಕ್, ಗುರುಮೂರ್ತಿ, ಎನ್.ರಮೇಶ್, ಎನ್.ಮಂಜುನಾಥ,  ಹಾಲೇಶಪ್ಪ, ಯೋಗೀಶ್, ವಿಶ್ವನಾಥ್ಕಾಶಿ, ಶಿ.ಜು.ಪಾಶ ಸೇರಿದಂತೆ ಹಲವರಿದ್ದರು.  

ಮಹಾಪಂಚಾಯತ್ ಗೆ ಬರುವ ಜನರಿಗೆ ಬಿಸಿಲ ಬೇಗೆಯ ಹಿನ್ನಲೆಯಲ್ಲಿ ಒಂದು ಲಾರಿ ಕಲ್ಲಂಗಡಿ ಹಣ್ಣು, 10 ಸಾವಿರಕ್ಕೂ ಹೆಚ್ಚು ಮಜ್ಜಿಗೆ ಪ್ಯಾಕೇಟ್ ಗಳು, ಅಷ್ಟೇ ಪ್ರಮಾಣದಲ್ಲಿ ಮಂಡಕ್ಕಿ ಪ್ಯಾಕೇಟ್ ಮತ್ತು ನೀರಿನ ಸೌಲಭ್ಯ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಈ ಎಲ್ಲವನ್ನು ದಾನಿಗಳೇ ನೀಡಿದ್ದಾರೆ. ಇದರ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂಬ ಸೂಚನೆ ನೀಡಲಾಗಿದೆ. ಸಾಧ್ಯವಾದಷ್ಟು ಅಂತರ ಕಾಪಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News