×
Ad

ಕುಟುಂಬ ವ್ಯಾಮೋಹ ನಮ್ಮನ್ನು ಬಲಿ ತೆಗೆದುಕೊಳ್ಳಬಾರದು: ಬಿಎಸ್‌ವೈಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಲಹೆ

Update: 2021-03-19 17:52 IST

ಬೆಂಗಳೂರು, ಮಾ. 19: ‘ಆಡಳಿತ ನಡೆಸುವವರಿಗೆ ಕಣ್ಣು, ಕಿವಿ, ಮೂಗು, ಬಾಯಿ ಸೇರಿದಂತೆ ಪಂಚೇಂದ್ರಿಯಗಳು ಕೆಲಸ ಮಾಡುತ್ತಿರಬೇಕು. ಅಧಿಕಾರ ಯಾರಿಗೂ ಶಾಶ್ವತವಲ್ಲ. ಅಧಿಕಾರದಲ್ಲಿ ಇರುವಷ್ಟು ದಿನ ಅಂತಃಕರಣದಿಂದ ನೊಂದವರ ಪರ ಕೆಲಸ ಮಾಡಬೇಕು. ಕುಟುಂಬ ವ್ಯಾಮೋಹ ಸಹಜ. ಆದರೆ, ಅದೇ ನಮ್ಮನ್ನು ಬಲಿ ತೆಗೆದುಕೊಳ್ಳಬಾರದು' ಎಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಸಲಹೆ ಮಾಡಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ 2021-22ನೆ ಸಾಲಿನ ಆಯವ್ಯಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿ ಯಾರೇ ಸಿಎಂ ಆದರೂ ಅವರ ಸುತ್ತ ‘ಬ್ಯಾಂಡ್‍ಸೆಟ್'ನವರು ನಿಮ್ಮನ್ನು ಖುಷಿಪಡಿಸಿ ಅವರು ಭಕ್ಷಿಸು ಪಡೆದು ಹೊರಟು ಹೋಗುತ್ತಾರೆ. ಆದರೆ, ಈ ಬ್ಯಾಂಡ್‍ಸೆಟ್‍ನವರನ್ನು ಎಂದೂ ನಂಬಬೇಡಿ ಎಂದು ಕಿವಿಮಾತು ಹೇಳಿದರು.

ಅಧಿಕಾರದ ಅಮಲು ಏರಬಾರದು: ಈ ಬ್ಯಾಂಡ್‍ಸೆಟ್‍ನವರು ನಾಯಕರ ಕಣ್ಣು ಕಾಣದಂತೆ, ಕಿವಿ ಕೇಳದಂತೆ ಮಾಡುತ್ತಾರೆ. ಮದ್ಯ ಸೇವಿಸಿದರಷ್ಟೇ ಅಮಲು ಏರುವುದಿಲ್ಲ. ಅಧಿಕಾರಕ್ಕೆ ಬಂದರೂ ಕಣ್ಣಿಗೆ ಪೊರೆ ಬರುತ್ತದೆ. ಹೀಗಾಗಿ ಎಂದಿಗೂ ಅಧಿಕಾರದ ಅಮಲು ಏರಬಾರದು ಎಂದು ರಮೇಶ್ ಕುಮಾರ್ ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಒಂದು ಸರಕಾರಕ್ಕೆ ಅಂತಃಕರಣ ಬಹಳ ಮುಖ್ಯ. ಜನಪರ ಕಾಳಜಿ ಇಟ್ಟುಕೊಂಡು ಕೆಲಸ ಮಾಡಬೇಕು. ಬಹಳ ವರ್ಷಗಳಿಂದ ಬಿಎಸ್‍ವೈ ಅವರನ್ನು ನಾನು ಅತ್ಯಂತ ಸಮೀಪದಿಂದ ಬಲ್ಲೆ. ಹಿಂದಿನಿಂದಲೂ ಅವರ ಬಗ್ಗೆ ನನಗೆ ಗೌರವವಿದೆ. ಆದರೆ, ಆಡಳಿತದಲ್ಲಿ ಕುಟುಂಬದ ಹಸ್ತಕ್ಷೇಪ ಸರಿಯಲ್ಲ ಎಂದು ರಮೇಶ್ ಕುಮಾರ್ ಆಕ್ಷೇಪಿಸಿದರು.

ಅಧಿಕಾರಸ್ತರಿಗೆ ಪಂಚೇಂದ್ರಿಯಗಳು ಸರಿಯಾಗಿರಬೇಕು. ಕಣ್ಣು, ಕಿವಿ ತೆರೆದುಕೊಂಡು ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಸಲಹೆ ಮಾಡಿದ ರಮೇಶ್ ಕುಮಾರ್, ರಾಜನೊಬ್ಬ ಕಿರೀಟ ಹಾಕಿಕೊಂಡು ಪ್ರಜೆಗಳೆಲ್ಲ ಕ್ಷೇಮವೇ.. ಎಂದು ಮಂತ್ರಿ ಪ್ರಶ್ನಿಸಿದ ಕತೆಯೊಂದನ್ನು ಉಲ್ಲೇಖಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ನಡೆಸುವವರು ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.

ಆಡಳಿತ ನಡೆಸುವವರದ್ದು ‘ಬಹುಮತ' ಸರಕಾರ ಅಷ್ಟೇ ಆಗಬಾರದು. ಅಂತಃಕರಣ ಇರುವ ಸರಕಾರ ಆಗಿರಬೇಕು. ಅಂತಃಕರಣ ಸತ್ತು ಹೋದರೆ ಅದು ಪ್ರಜಾಪ್ರಭುತ್ವವಲ್ಲ. ಎಲ್ಲಿ ಕಟ್ಟಕಡೆಯ ವ್ಯಕ್ತಿಗೆ ಮೊದಲ ಪ್ರಾಶಸ್ತ್ಯ ಸಿಗುವುದಿಲ್ಲವೋ ಅದು ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಲ್ಲ ಎಂದು ರಮೇಶ್ ಕುಮಾರ್, ಆಡಳಿತ ನಡೆಸುವವರಷ್ಟೇ ವಿಪಕ್ಷಗಳು ಕೂಡ ಜನರ ಧ್ವನಿಯಾಗಿ ಕೆಲಸ ಮಾಡಬೇಕೆಂದು ಲೋಹಿಯಾ, ಶಾಂತವೇರಿ ಗೋಪಾಲಗೌಡರನ್ನು ನೆನಪು ಮಾಡಿಕೊಂಡರು.

ವಿಪಕ್ಷಗಳು ಜನರ ಕರುಳಿನ ದ್ವನಿಯಾಗಬೇಕು. ಆಡಳಿತದಲ್ಲಿ ಅವಕಾಶ ಸಿಕ್ಕಿಲ್ಲ ಎಂದು ವಿರೋಧ ಪಕ್ಷ ಆಗಬಾರದು. ಆಡಳಿತಸ್ಥರ ಎಲ್ಲ ನೀತಿಗಳನ್ನು ವಿರೋಧಿಸುವುದು ವಿರೋಧ ಪಕ್ಷದ ಕೆಲಸವಲ್ಲ. ಜನರ ಸಮಸ್ಯೆಗಳ ಆಧಾರದ ಮೇಲೆ ಧ್ವನಿ ಎತ್ತಬೇಕು ಎಂದ ರಮೇಶ್ ಕುಮಾರ್, ಜನರ ನಿಜವಾದ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದು ಅವುಗಳನ್ನು ಪರಿಹರಿಸಬೇಕು ಎಂದರು.

ಉಳ್ಳವರ ಮಧ್ಯೆ ಚುನಾವಣೆ: ಇತ್ತೀಚಿನ ದಿನಗಳಲ್ಲಿ ಚುನಾವಣೆಗಳು ತಾತ್ವಿಕತೆಯ ಬದಲಿಗೆ ತಾಂತ್ರಿಕತೆ ಆಗುತ್ತಿದೆ. ಜಾತಿ, ಉಪಜಾತಿ, ಹಣವೇ ಪ್ರಧಾನ ಆಗಿವೆ. ಯಾವುದೇ ಜಾತಿ, ಹಣವಿಲ್ಲದೆ ತಾತ್ವಿಕತೆ ಆಧಾರದ ಮೇಲೆ ಹಲವು ಮಹನೀಯರು ಆಯ್ಕೆಯಾಗಿದ್ದಾರೆ. ಆದರೆ, ಇಂದು ಉಳ್ಳವರ ಮಧ್ಯೆ ಚುನಾವಣೆ ನಡೆಯುತ್ತಿದೆ. ಲೋಕಸಭೆ, ವಿಧಾನಸಭೆ ಒಂದು ರೀತಿಯಲ್ಲಿ ಬಂಡವಾಳ ವಿನಿಮಯ ಕೇಂದ್ರಗಳಾಗಿವೆ ಎಂದು ರಮೇಶ್ ಕುಮಾರ್ ಮಾರ್ಮಿಕವಾಗಿ ವಿಶ್ಲೇಷಿಸಿದರು.

ತಾಂತ್ರಿಕತೆಯ ನೆಪ ಮಾಡಿಕೊಂಡು ಸಾರ್ವಜನಿಕ ಮಹತ್ವದ ವಿಷಯಗಳನ್ನು ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನೀಡದೆ ಬಾಯಿಗೆ ಬೀಗ ಹಾಕಿದಂತೆ ಆಗಬಾರದು. ಅದೇ ವೇಳೆ ಯಾವುದೇ ವಿಷಯವೂ ಬಾಯಿಗೆ ಬೀಗ ಇಲ್ಲದಂತೆ ಮನಸೋ ಇಚ್ಛೆ ಚರ್ಚೆಯೂ ಆಗಬಾರದು ಎಂದು ರಮೇಶ್ ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News