ಹುಲಿ ದಾಳಿಯ ಆತಂಕದ ನಡುವೆಯೇ ದಕ್ಷಿಣ ಕೊಡಗಿನಲ್ಲಿ ಹುಲಿಯ ಮೃತದೇಹ ಪತ್ತೆ
ಮಡಿಕೇರಿ, ಮಾ.19: ಹುಲಿ ದಾಳಿಯ ಆತಂಕದ ನಡುವೆಯೇ ಕೋತೂರು ಲಕ್ಕುಂದ ಗ್ರಾಮದ ಕಾಫಿ ತೋಟದಲ್ಲಿ ಹುಲಿಯ ಮೃತದೇಹವೊಂದು ಪತ್ತೆಯಾಗಿದೆ.
ದಕ್ಷಿಣ ಕೊಡಗಿನ ಕೋತೂರು ಗ್ರಾಮದ ಲಕ್ಕುಂದದ ಕೊಡಂದೇರ ರವಿ ಅವರ ತೋಟದಲ್ಲಿ ಸುಮಾರು ಒಂದು ವಾರದ ಹಿಂದೆ ಸತ್ತಿರುವ ಹುಲಿಯ ಮೃತದೇಹ ಶುಕ್ರವಾರ ಮಧ್ಯಾಹ್ನ ಗೋಚರಿಸಿದೆ. ಹುಲಿಯ ಪಟ್ಟೆಯನ್ನು ಮ್ಯಾಚ್ ಮಾಡಲಾಗಿದ್ದು, ಇದು ಮಾನವ ಜೀವ ಬಲಿ ಪಡೆದ ಹುಲಿಯದ್ದೇ ಮೃತದೇಹವೆಂದು ನಾಗರಹೊಳೆ ಎಸಿಎಫ್ ಗೋಪಾಲ್ ಅವರು ಮಾಹಿತಿ ನೀಡಿದ್ದಾರೆ.
ಹುಲಿಯ ಸಾವಿಗೆ ನಿಖರವಾದ ಕಾರಣ ಇನ್ನಷ್ಟೇ ತಿಳಿಯಬೇಕಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಇದು ಹುದಿಕೇರಿ ಹಾಗೂ ಶ್ರೀಮಂಗಲ ಸುತ್ತಮುತ್ತಲ ಪ್ರದೇಶಗಳಲ್ಲಿ ಜನ ಹಾಗೂ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿಯೇ ಆಗಿದ್ದಲ್ಲಿ ಆ ಭಾಗದ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಮತ್ತೆ ಜಾನುವಾರು ಬಲಿ
ಮತ್ತೊಂದೆಡೆ ಉತ್ತರ ಕೊಡಗಿನಲ್ಲೂ ಹುಲಿ ಹಾವಳಿ ಮುಂದುವರಿದಿದ್ದು, ಮೂರ್ನಾಡು ಹಾಗೂ ನಾಪೋಕ್ಲು ಬಳಿ ಎರಡು ಜಾನುವಾರುಗಳು ಹುಲಿ ದಾಳಿಗೆ ಬಲಿಯಾಗಿವೆ.
ಮೂರ್ನಾಡು ಸಮೀಪದ ಎಂ.ಬಾಡಗದಲ್ಲಿ ಅಲ್ಲಿನ ನಿವಾಸಿ ಕೋಟೇರ ಅಶೋಕ್ ಎಂಬವರ ಹಸುವನ್ನು ಹುಲಿ ಕೊಂದು ಹಾಕಿದೆ.
ಮಡಿಕೇರಿ ಅರಣ್ಯ ಉಪ ವಲಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿದ್ದಾರೆ. ಹುಲಿ ದಾಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಅಲ್ಲದೆ ನಾಪೋಕ್ಲು ಸಮೀಪದ ನಾಲಡಿ ಗ್ರಾಮದಲ್ಲೂ ಹುಲಿ ದಾಳಿಗೆ ಎಮ್ಮೆಯೊಂದು ಬಲಿಯಾಗಿದೆ. ಅಲ್ಲಿನ ತೋಡುಕರೆ ನಿವಾಸಿ ಕಂಬೆಯಂಡ ಅನು ಸುಬ್ಬಯ್ಯ ಅವರಿಗೆ ಸೇರಿದ ಎಮ್ಮೆಯನ್ನು ಹುಲಿ ಕೊಂದು ಹಾಕಿದೆ.