ಕಾಂಗ್ರೆಸ್ ನ ಲೂಟಿಯ ಬಗ್ಗೆ ಲೆಕ್ಕ ಕೇಳಲು ಗಾಂಧಿ ಕುಟುಂಬದ ಭಯವೇ?: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ
ಬೆಂಗಳೂರು, ಮಾ.19: ಮೋದಿ ಸರಕಾರ ಲಸಿಕೆ ಕಂಡುಹಿಡಿದು 70ಕ್ಕೂ ಅಧಿಕ ದೇಶಗಳಿಗೆ ಲಸಿಕೆ ನೀಡಿದೆ. ಆದರೆ ರಾಜ್ಯ ಕಾಂಗ್ರೆಸ್ ನಾಯಕರ ಕೊಳಕು ಮನಸ್ಥಿತಿಗೆ ಲಸಿಕೆ ಶೋಧಿಸಲು ಸಾಧ್ಯವಿಲ್ಲ. 6 ದಶಕದಿಂದ ದೇಶದಲ್ಲಿ ಕಾಂಗ್ರೆಸ್ ನಡೆಸಿದ ಲೂಟಿಯ ಲೆಕ್ಕ ಕೇಳುವ ಧೈರ್ಯ ತೋರುವಿರಾ ಸಿದ್ದರಾಮಯ್ಯ? ಲೆಕ್ಕ ಕೇಳುವುದಕ್ಕೆ ಗಾಂಧಿ ಕುಟುಂಬದ ಭಯವೇ? ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಅಲ್ಪಸಂಖ್ಯಾತ ನಾಯಕ ತನ್ವೀರ್ ಸೇಠ್ ಬೆಂಬಲಿಗರನ್ನು ಅಮಾನತು ಮಾಡುವ ಮೂಲಕ ಸಿದ್ದರಾಮಯ್ಯ ಅವರು ಮೈಸೂರು ಮೇಯರ್ ಆಯ್ಕೆ ವಿಚಾರದಲ್ಲಿ ತನ್ನ ಗರ್ವಭಂಗ ಮಾಡಿದ ಡಿ.ಕೆ.ಶಿವಕುಮಾರ್ ಮೇಲಿನ ಸಿಟ್ಟು ತೀರಿಸಿಕೊಂಡರು. ಸಿದ್ದರಾಮಯ್ಯ ಅವರು ತನ್ವೀರ್ ಸೇಠ್ ಮೇಲೆ ಮುಗಿಬಿದ್ದರೆ, ಡಿಕೆಶಿ ಅವರು ಅಖಂಡ ಮೇಲೆ ಮುಗಿಬೀಳುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ವಲಸೆ ನಾಯಕ ಸಿದ್ದರಾಮಯ್ಯ ಅವರು ಅಧಿಕಾರಕ್ಕಾಗಿ ಅಹಿಂದ ಸಮಾವೇಶ ಮಾಡಿದ್ದರು. ಈಗ ಅಲ್ಪಸಂಖ್ಯಾತರನ್ನು ಕೈಬಿಟ್ಟು ಹಿಂದ ಸಮಾವೇಶ ಮಾಡುತ್ತಿದ್ದಾರೆ. ಮೈಸೂರು ಮೇಯರ್ ಆಯ್ಕೆ ವಿಚಾರದಲ್ಲಾದ ಗರ್ವಭಂಗವನ್ನು ಅಲ್ಪಸಂಖ್ಯಾತ ನಾಯಕ ತನ್ವೀರ್ ಸೇಠ್ ಅವರ ಬೆಂಬಲಿಗರನ್ನು ಅಮಾನತು ಮಾಡುವ ಮೂಲಕ ತೀರಿಸಿಕೊಂಡರು ಎಂದು ಬಿಜೆಪಿ ದೂರಿದೆ.
ರಾಜ್ಯ ಕಾಂಗ್ರೆಸ್ ಗಾಂಧಿ ಕುಟುಂಬೇತರ ನಾಯಕರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಿ ಚುನಾವಣೆ ಎದುರಿಸುವ ತಾಕತ್ತು ನಿಮಗಿದೆಯಾ? ಒಂದು ಕುಟುಂಬದ ಗುಲಾಮಗಿರಿ ಎಷ್ಟು ದಿನ ಮಾಡುತ್ತಲಿರುವಿರಿ ಎಂದು ಬಿಜೆಪಿ ಪ್ರಶ್ನಿಸಿದೆ.