ನಟಿ ಕಂಗನಾ ವಿರುದ್ಧದ ಪ್ರಕರಣ: ರಾಜ್ಯ ಗೃಹ ಇಲಾಖೆಗೆ ಹೈಕೋರ್ಟ್ ನೋಟಿಸ್

Update: 2021-03-19 15:55 GMT

ಬೆಂಗಳೂರು, ಮಾ.19: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೊಸದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಭಯೋತ್ಪಾದಕರಿಗೆ ಹೋಲಿಸಿ ಟ್ವೀಟ್ ಮಾಡಿದ್ದ ವಿಚಾರದಲ್ಲಿ ನಟಿ ಕಂಗನಾ ರಣಾವತ್, ತಮ್ಮ ವಿರುದ್ಧ ತುಮಕೂರಿನ ಕ್ಯಾತ್‍ಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಗೃಹ ಇಲಾಖೆಗೆ ನೋಟಿಸ್ ಜಾರಿಗೊಳಿಸಿದೆ. 

ತುಮಕೂರಿನ ವಕೀಲ ಎಲ್.ರಮೇಶ್ ನಾಯ್ಕ್ ದಾಖಲಿಸಿರುವ ಖಾಸಗಿ ದೂರಿನ ಮೇರೆಗೆ ಕ್ಯಾತಸಂದ್ರ ಪೊಲೀಸರು ದಾಖಲಿಸಿರುವ ಎಫ್‍ಐಆರ್ ಅನ್ನು ರದ್ದುಪಡಿಸುವಂತೆ ಕೋರಿ ನಟಿ ಕಂಗನಾ ರಣಾವತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಶುಕ್ರವಾರ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಪೀಠದಲ್ಲಿ ನಡೆಯಿತು.

ವಿಚಾರಣೆ ವೇಳೆ ಕಂಗನಾ ಪರ ವಾದಿಸಿದ ವಕೀಲ ರಿಝ್ವಾನ್ ಸಿದ್ದಿಕಿ ಅವರು, ತುಮಕೂರಿನ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡುವಂತೆ ಪೀಠಕ್ಕೆ ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಗೃಹ ಇಲಾಖೆಗೆ ಹಾಗೂ ವಕೀಲ ಎಲ್.ರಮೇಶ್ ನಾಯ್ಕ್‍ಗೆ ನೋಟಿಸ್ ಜಾರಿಗೊಳಿಸಿತು.

ಏನಿದು ಪ್ರಕರಣ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೊಸದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಭಯೋತ್ಪಾದಕರಿಗೆ ಹೋಲಿಸಿ ನಟಿ ಕಂಗನಾ ಸೆ.21ರಂದು ಟ್ವೀಟ್ ಮಾಡಿದ್ದರು. ನಟಿಯ ಟ್ವೀಟ್ ದೇಶದ ರೈತರನ್ನು ಅಪಮಾನಿಸಿದೆಯಲ್ಲದೇ, ಶಾಂತಿ ಸೌಹಾರ್ದತೆಯನ್ನೂ ಕದಡಲು ಪ್ರಚೋದಿಸುತ್ತಿದೆ ಎಂದು ಆರೋಪಿಸಿ ವಕೀಲ ರಮೇಶ್ ನಾಯ್ಕ್ ತುಮಕೂರಿನ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಸೆ.25ರಂದು ಖಾಸಗಿ ದೂರು ದಾಖಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ತುಮಕೂರಿನ ಪ್ರಧಾನ ಸಿವಿಲ್ ನ್ಯಾಯಾಲಯ ಸಿಆರ್‍ಪಿಸಿ ಸೆಕ್ಷನ್ 156 ಅಡಿ ನಟಿ ವಿರುದ್ಧ ಎಫ್‍ಐಆರ್ ದಾಖಲಿಸಿ ಮುಂದಿನ ಕ್ರಮಗಳನ್ನು ಜರುಗಿಸುವಂತೆ ಕ್ಯಾತಸಂದ್ರ ಠಾಣೆ ಪೊಲೀಸರಿಗೆ ಅ.9ರಂದು ಆದೇಶಿಸಿತ್ತು. ಅದರಂತೆ ಪೊಲೀಸರು ನಟಿ ವಿರುದ್ಧ ಐಪಿಸಿ ಸೆಕ್ಷನ್ 153(ಎ), 504, 108 ಅಡಿ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಸಿದ್ದರು. ಫೆ.24ರಂದು ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯ ಪೊಲೀಸರು ಜರುಗಿಸಿರುವ ಕ್ರಮಗಳ ವರದಿ ಕೇಳಿತ್ತು.

ಈ ಹಿನ್ನೆಲೆಯಲ್ಲಿ ಎಫ್‍ಐಆರ್ ಹಾಗೂ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಗೊಳಿಸುವಂತೆ ಕೋರಿ ನಟಿ ಕಂಗನಾ ಹೈಕೋರ್ಟ್ ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News