×
Ad

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಕೇಂದ್ರ ದೇಶದ ಬಡ ಜನರ ಬೆನ್ನುಮೂಳೆ ಮುರಿದಿದೆ- ಸಿದ್ದರಾಮಯ್ಯ

Update: 2021-03-19 22:11 IST

ಬೆಂಗಳೂರು, ಮಾ. 19: ‘ಅಂತರ್‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ಅತ್ಯಂತ ಕಡಿಮೆ ಇದ್ದರೂ, ದೇಶ ಹಾಗೂ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಅಗತ್ಯ ವಸ್ತಗಳ ಬೆಲೆಯೂ ಗಗನಕ್ಕೇರಿದೆ. ಆದರೆ, ಕೇಂದ್ರ ಸರಕಾರ ಮೀತಿ ಮಿರಿದ ತೆರಿಗೆ ಹೇರಿ ಜನರನ್ನು ಲೂಟಿ ಮಾಡುತ್ತಿದೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ನಿಯಮ 69ರಡಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರ ಪ್ರಸ್ತಾಪಿಸಿದ ಅವರು, ಬೆಲೆ ಏರಿಕೆಯಿಂದ ಸಾಮಾನ್ಯಜನ ದಿನ ಬಳಕೆಯ ವಸ್ತುಗಳನ್ನು ಖರೀದಿಸುವುದು ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರಕಾರ ತೆರಿಗೆ ಹೆಚ್ಚಳ ಮಾಡಿ ಕೊರೋನ ಸಂಕಷ್ಟದಿಂದ ಹೊರಬಂದು ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದ ದೇಶದ ಬಡ ಜನರ ಬೆನ್ನುಮೂಳೆ ಮುರಿದಿದೆ ಎಂದು ದೂರಿದರು.

2014ರಲ್ಲಿ ಮೋದಿಯವರು ದೇಶದ ಪ್ರಧಾನಿಯಾದಾಗ ಪೆಟ್ರೋಲ್ ಮೇಲೆ ವಿಧಿಸುತ್ತಿದ್ದ ಅಬಕಾರಿ ಸುಂಕ 9.21 ರೂ.ಗಳಿತ್ತು ಹಾಗೂ ಡೀಸೆಲ್ ಮೇಲೆ 3.46 ರೂ.ಗಳಿತ್ತು. ಆದರೆ, ಇಂದು ಪೆಟ್ರೋಲ್ ಮೇಲೆ 32.98 ರೂ. ಹಾಗೂ ಡೀಸೆಲ್ ಮೇಲೆ 31.83 ರೂ.ಗಳಾಗಿದೆ. ಅಂತರ್‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ 2014ರ ಕಚ್ಚಾತೈಲದ ಬೆಲೆ ಒಂದು ಬ್ಯಾರಲ್‍ಗೆ 6,794 ರೂ.ಆಗುತ್ತಿತ್ತು. ಇಂದು ಬ್ಯಾರಲ್‍ಗೆ 4,008 ರೂ.ಗಳಿಗೆ ಇಳಿಕೆಯಾಗಿದೆ.

ಅಂತರ್‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕಡಿಮೆಯಾದಂತೆ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯೂ ಕಡಿಮೆಯಾಗಬೇಕಿತ್ತಲ್ಲವೇ? ಇದಕ್ಕೆ ಕೇಂದ್ರದ ಮೋದಿಯವರ ಸರಕಾರವನ್ನು ಹೊಣೆ ಮಾಡದೆ ಇನ್ಯಾರನ್ನು ಹೊಣೆ ಮಾಡಬೇಕು? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, 2013-14ರಲ್ಲಿ ಭಾರತ 184 ಮಿಲಿಯನ್ ಟನ್ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿತ್ತು, 2019-20ರಲ್ಲಿ 228 ಮಿಲಿಯನ್ ಟನ್‍ಗೆ ಏರಿಕೆಯಾಗಿದೆ. ಕಚ್ಚಾತೈಲ ಆಮದು ಕಡಿಮೆ ಮಾಡಿಲ್ಲ ಎಂದು ಹಿಂದಿನ ಸರಕಾರಗಳನ್ನು ದೂರುವ ಪ್ರಧಾನಿ ಮೋದಿಯವರು 7 ವರ್ಷಗಳಿಂದ ತಾವೇನು ಮಾಡಿದ್ದಾರೆ ಎಂದು ಒಮ್ಮೆ ನೋಡಿಕೊಳ್ಳಲಿ ಎಂದು ಟೀಕಿಸಿದರು.

ಅಂತರ್‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‍ವೊಂದಕ್ಕೆ 125 ಡಾಲರ್ ಇದ್ದಾಗ ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 57 ರೂ.ಇತ್ತು. ಇದೀಗ ಕಚ್ಚಾತೈಲ ಬೆಲೆ ಬ್ಯಾರಲ್‍ಗೆ ಕೇವಲ 54.77 ಡಾಲರ್ ಇದೆ. ಆದರೆ, ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಲೀ.ಗೆ 94 ರೂ.ಗಳಾಗಿದೆ. ಇದನ್ನು ಕೇಂದ್ರ ಸರಕಾರ ಲೂಟಿ ಮಾಡುತ್ತಿದೆ ಎಂದು ಕರೆದರೆ ತಪ್ಪೇನು? ಎಂದು ಪ್ರಶ್ನಿಸಿದರು.

ಎಣ್ಣೆ ಹಾಕಿಸಿಕೊಂಡೇ ಬರಬೇಕು: ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಷಯ ಕೇಂದ್ರ ಸರಕಾರದ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಇಲ್ಲಿ ಚರ್ಚೆ ಸರಿಯೇ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಲೋಕಸಭೆಯಲ್ಲಿ ಇರಬೇಕೆಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆಂದು ಉಲ್ಲೇಖಿಸಿದರು.

ಈ ಹಂತದಲ್ಲಿ ಮಾತನಾಡಿದ ಎಚ್.ಕೆ.ಪಾಟೀಲ್, ವಿಷಯ ಯಾರ ವ್ಯಾಪ್ತಿಗೆ ಬರುತ್ತದೆಂಬುದು ಪ್ರಶ್ನೆಯಲ್ಲ. ನಾವು ಇಲ್ಲಿಗೆ ಬರಬೇಕು ಎಂದರೆ ಪೆಟ್ರೋಲ್, ಡೀಸೆಲ್ ಹಾಕಿಸಿಕೊಂಡೇ ಇಲ್ಲಿಗೆ ಬರಬೇಕು ಎಂದರು. ಗ್ರಾಮೀಣ ಭಾಷೆಯಲ್ಲೆ ಎಣ್ಣೆ ಹಾಕಿಕೊಂಡೇ ಬರಬೇಕು ಎಂದು ಸ್ಪೀಕರ್ ಚಟಾಕಿ ಹಾರಿಸಿದ್ದು ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News