ಜಾತ್ರೆ ರದ್ದುಗೊಳಿಸಿರುವುದನ್ನು ವಿರೋಧಿಸಿ ನಂಜನಗೂಡು ಬಂದ್

Update: 2021-03-20 08:59 GMT

ಮೈಸೂರು: ನಂಜನಗೂಡು ಶ್ರೀಕಂಠೇಶ್ವರ ಜಾತ್ರೆ ರದ್ದು ಮಾಡಿರುವುದನ್ನು ವಿರೋಧಿಸಿ ನಂಜನಗೂಡಿನಲ್ಲಿ ಸ್ವಯಂ ಘೋಷಿತ ನಂಜನಗೂಡು ಬಂದ್ ಆಚರಿಸಲಾಯಿತು.

ಮಾ.26 ರಂದು ನಡೆಯಬೇಕಿದ್ದ ನಂಜನಗೂಡು ಜಾತ್ರೆಯನ್ನು ಕೊರೋನ ಹೆಚ್ಚಳ ಹಿನ್ನಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ  ರದ್ದುಗೊಳಿಸಿ ಆದೇಶ ಹೊರಡಿಸಿದ್ದರು. ಇದರಿಂದ ಆಕ್ರೋಶಗೊಂಡ ಯವಕರು, ಕೆಲವು ಸಂಘ ಸಂಸ್ಥೆಗಳು ಮತ್ತು ಸ್ಥಳೀಯರು ಶನಿವಾರ  ಸ್ವಯಂ ಘೋಷಿತ ಬಂದ್ ಗೆ ಕರೆ ನೀಡಿದ್ದರು. ಈ ಹಿನ್ನಲೆಯಲ್ಲಿ ನಂಜನಗೂಡಿನ ದೇವಸ್ಥಾನದ ರಥ ಬೀದಿ ಸೇರಿದಂತೆ, ಪಾಠಶಾಲ ರಸ್ತೆ, ಮಾರ್ಕೆಟ್ ರೋಡ್, ಎಂ.ಜಿ.ರಸ್ತೆ, ಆರ್.ಪಿ. ರಸ್ತೆ, ಬ್ರಾಡ್ ವೇ ರಸ್ತೆಗಳಲ್ಲಿರುವ  ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರಸ್ಥರು ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.

ಕಳೆದ ವರ್ಷ ಕೊರೋನ ಹಿನ್ನಲೆಯಲ್ಲಿ ಜಾತ್ರೆಯನ್ನು ರದ್ದುಗೊಳಿಸಲಾಗಿತ್ತು. ಆದರೆ ಈ ಬಾರಿಯೂ ಜಾತ್ರೆ ರದ್ದುಗೊಳಿಸಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೋನ ಹಿನ್ನಲೆ ಹೇಳಿ ನಂಜನಗೂಡು ಜಾತ್ರೆಯನ್ನು ರದ್ದು ಮಾಡುತ್ತೀರಿ ಆದರೆ ಬೇರೆಕಡೆಗಳಾದ ಮಹದೇಶ್ವರ ಬೆಟ್ಟ, ಪಿರಿಯಾ ಪಟ್ಟಣದಮ್ಮನವರ ಜಾತ್ರೆ, ಹಳ್ಳಿಗಳಲ್ಲಿ ನಡೆಯತ್ತಿರುವ ಮಾರಿ ಹಬ್ಬದ ಜಾತ್ರಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ನಂಜನಗೂಡು ಜಾತ್ರೆ ಯನ್ನೇ ಏಕೆ ರದ್ದುಗೊಳಿಸಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಕೊರೋನ ಮುಂಜಾಗ್ರತೆ ವಹಿಸಿ ಸ್ಥಳೀಯರಷ್ಟೇ ಜಾತ್ರೆ ಮಾಡುತ್ತೇವೆ ಅದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರಿ ಕಚೇರಿಗಳು, ಆಸ್ಪತ್ರೆ, ಮೆಡಿಕಲ್ ಸ್ಟೋರ್, ಪೆಟ್ರೋಲ್ ಬಂಕ್ ಗಳು ಎಂದಿನಂತೆ ಕಾರ್ಯ ನಿರ್ವಹಿಸಿವೆ.

ಇನ್ನು ಸಾರಿಗೆ ಸಂಚಾರದಲ್ಲೇನು ವ್ಯತ್ಯಾಸ ಕಂಡು ಬಂದಿಲ್ಲದೆ ಎಂದಿನಂತೆ ಬಸ್ ಗಳು ರಸ್ತೆಗಿಳಿದಿವೆ. ಶ್ರೀಶ್ರೀಕಂಠೇಶ್ವರ ಜಾತ್ರೆ ರದ್ದು ಗೊಳಿಸಿರುವುದನ್ನು ವಿರೋಧಿಸಿ ನಂಜನಗೂಡು ಯವಕರು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಜಾತ್ರೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದರು.

ಶುಕ್ರವಾರ ನಂಜನಗೂಡಿಗೆ ಆಗಮಿಸಿದ್ದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಘೇರಾವ್ ಮಾಡಿದ ಸ್ಥಳೀಯರು ಜಾತ್ರೆ ಮಾಡುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಬೇಕೆಂದು ಮನವಿ ಸಲ್ಲಿಸಿದ್ದರು.

ಜೊತೆಗೆ ಸ್ಥಳೀಯ ಶಾಸಕ ಹರ್ಷವರ್ಧನ್ ಕೂಡ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಇತಿಹಾಸ ಪ್ರಸಿದ್ಧ ನಂಜನಗೂಡು ದೊಡ್ಡಜಾತ್ರೆಯನ್ನು ನಡೆಸಲು ಅವಕಾಶ ನೀಡಬೇಕು, ಈ ಸಂಬಂಧ ಮೈಸೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News