ಕ್ರಿಕೆಟಿಗ, ಮದುಮಗ ಜಸ್‌ಪ್ರೀತ್‌ ಬುಮ್ರಾಗೆ ಸಂಸದೆ ಶೋಭಾ ಟ್ವಿಟರ್ ನಲ್ಲಿ ಕುಟುಕಿದ್ದು ಏಕೆ ?

Update: 2021-03-20 12:10 GMT
Photo: Twitter.com/Jaspritbumrah

ಟೀಮ್‌ ಇಂಡಿಯಾದ ಖ್ಯಾತ ಕ್ರಿಕೆಟ್ ತಾರೆ, ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಇತ್ತೀಚೆಗೆ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್‌ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಲವು ಖ್ಯಾತ ಕ್ರಿಕೆಟಿಗರು, ಗಣ್ಯರು ಬುಮ್ರಾ ದಂಪತಿಯ ವೈವಾಹಿಕ ಜೀವನಕ್ಕೆ ಶುಭ ಹಾರೈಸಿದ್ದಾರೆ. ಆದರೆ ಈ ಪೈಕಿ ಸಂಸದೆ ಶೋಭಾ ಕರಂದ್ಲಾಜೆ ಅವರು ಶುಭ ಹಾರೈಸುವ ಬದಲಿಗೆ ಕ್ರಿಕೆಟಿಗನನ್ನು ಕುಟುಕಿದ್ದಾರೆ.

ಬುಮ್ರಾ- ಸಂಜನಾ ವಿವಾಹವು ಗೋವಾದಲ್ಲಿ ಖಾಸಗಿಯಾಗಿ ನಡೆದಿದ್ದು, ಸಮಾರಂಭದಲ್ಲಿ ಕುಟುಂಬದವರು ಮತ್ತು ಸ್ನೇಹಿತರನ್ನು ಒಳಗೊಂಡಂತೆ ಕೆಲವೇ ಕೆಲ ಸದಸ್ಯರ ಭಾಗಿಯಾಗಿದ್ದರು. ಆ ಬಳಿಕ ಬುಮ್ರಾ ಮತ್ತು ಸಂಜನಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿವಾಹದ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಪೈಕಿ ಮಾರ್ಚ್‌19ರಂದು ಹಾಕಿದ ಫೋಟೋ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

'ಕಳೆದ ಕೆಲ ದಿನಗಳು ನನ್ನ ಪಾಲಿಗೆ ಅದ್ಭುತವಾಗಿತ್ತು. ನಿಮ್ಮೆಲ್ಲರ ಶುಭ ಹಾರೈಕೆ ಮತ್ತು ಪ್ರೀತಿಗೆ ನಾವು ಅಭಾರಿಯಾಗಿದ್ದೇವೆ. ಧನ್ಯವಾದಗಳು" ಎಂದು ಟ್ವಿಟ್ಟರ್ ನಲ್ಲಿ ಎರಡು ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಈ ಎರಡು ಫೋಟೊಗಳಲ್ಲಿ ಒಂದು ಫೋಟೊದಲ್ಲಿ ಬುಮ್ರಾ ಮತ್ತು ಸಂಜನಾರ ಸಮೀಪ ನಿಂತಿರುವವರು ಪಟಾಕಿ ಸುಟ್ಟು ಸಂಭ್ರಮಿಸುತ್ತಿದ್ದಾರೆ. ಇದು ಹಲವರ ಅಸಮಾಧಾನಕ್ಕೆ ಕಾರಣವಾಗಿದ್ದು, ಇವರಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಕೂಡಾ ಒಳಗೊಂಡಿದ್ದಾರೆ. ಈ ಅಸಮಾಧಾನಕ್ಕೆ ಕಾರಣವಾಗಿದ್ದು ಮಾತ್ರ ಕಳೆದ ವರ್ಷ ದೀಪಾವಳಿ ಸಂದರ್ಭ ಬುಮ್ರಾ ಮಾಡಿದ್ದ ಒಂದು ಟ್ವೀಟ್ !

ಟ್ವೀಟ್ ನಲ್ಲೇನಿತ್ತು ?: ''ಮನೆಯಲ್ಲಿ ದೀಪಾವಳಿ ಆಚರಣೆ! ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿಯ ದೀಪಾವಳಿ ಶುಭಾಶಯಗಳು!'' #saynotocrackers'' ಎಂದು ಟ್ವೀಟ್ ಮಾಡಿದ್ದ ಬುಮ್ರಾ, ಪಟಾಕಿ ಬಳಸದಂತೆ ಕರೆ ನೀಡಿದ್ದರು.

ಇದರ ಸ್ಕ್ರೀನ್ ಶಾಟ್ ಅನ್ನು ತಮ್ಮ ಟ್ವೀಟ್ ನಲ್ಲಿ ಹಾಕಿದ ಶೋಭಾ ಕರಂದ್ಲಾಜೆ, ''ದೀಪಾವಳಿ ಸಮಯದಲ್ಲಿ ಮಾತ್ರ #saynotocrackers! ನಮ್ಮ ಸೆಲೆಬ್ರಿಟಿಗಳು ಹಿಂದೂ ಹಬ್ಬಗಳಲ್ಲಿ ಮಾತ್ರ ಪರಿಸರ ಕಾರ್ಯಕರ್ತರಾಗಿ ಬದಲಾಗುತ್ತಾರೆ. ಆದರೆ ಅವರ ಸಂಭ್ರಮದ ಸಮಯದಲ್ಲಿ ಅವರ ಕ್ರಿಯಾಶೀಲತೆ ಮರೆಯಾಗುತ್ತದೆ. ಪ್ರೀತಿಯ ಜಸ್‌ಪ್ರೀತ್‌ ಬುಮ್ರಾ, ನೀವು ಬೋಧಿಸುವದನ್ನು ಅಭ್ಯಾಸ ಮಾಡಿ ಎಂದು ಕುಟುಕಿದ್ದಾರೆ.

ಶೋಭಾ ಮಾತ್ರವಲ್ಲದೇ, ಹಲವಾರು ಮಂದಿ ಬುಮ್ರಾರ ವಿರುದ್ಧ ಕಮೆಂಟ್ ಮಾಡಿದ್ದು, ಇದು ನೀವಲ್ಲವೇ ? ಪಟಾಕಿ ಬಳಸಬೇಡಿ ಎಂಬುವುದು ದೀಪಾವಳಿಗೆ ಮಾತ್ರವೇ, ನಿಮ್ಮ ಮದುವೆಗೆ ಇಲ್ಲವೇ ? ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಪಟಾಕಿಗೆ ಯಾವುದೇ ಮಾಲಿನ್ಯವಿಲ್ಲ, ನಮ್ಮ ಪಟಾಕಿ ಮಾತ್ರ ಮಾಲಿನ್ಯ. ಬೂಟಾಟಿಕೆ ಎಂದು ಪವನ್ ಶರ್ಮಾ ಎಂಬವರು ಕಮೆಂಟ್ ಮಾಡಿದ್ದಾರೆ. 

ಅಲ್ಲದೇ, ದೀಪಾವಳಿ ಸಂದರ್ಭ ಬುಮ್ರಾ ಹಾಕಿದ್ದ ಟ್ವೀಟ್ ಮತ್ತು ಮದುವೆ ಸಂದರ್ಭ ಹಾಕಿದ ಫೋಟೋಗಳನ್ನು ಸೇರಿಸಿ ಬುಮ್ರಾ ವಿರುದ್ಧ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News