×
Ad

ತುಮಕೂರು: ರೈತ ಮುಖಂಡರನ್ನು ಸ್ವಾಗತಿಸಿ, ಬಿಳ್ಕೋಟ್ಟ ರೈತರು, ಪ್ರಗತಿಪರ ಸಂಘಟನೆಗಳ ಮುಖಂಡರು

Update: 2021-03-20 18:35 IST

ತುಮಕೂರು, ಮಾ.20: ದಿಲ್ಲಿಯಲ್ಲಿ ಕರಾಳ ಕೃಷಿ ಮಸೂದೆಗಳ ರದ್ದತಿಗಾಗಿ ಒತ್ತಾಯಿಸಿ ನಡೆಯುತ್ತಿರುವ ರೈತ ಹೋರಾಟದ ಭಾಗವಾಗಿ ಶಿವಮೊಗ್ಗದಲ್ಲಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಹಮ್ಮಿಕೊಂಡಿರುವ ರೈತ ಮಹಾ ಪಂಚಾಯತ್ ನಲ್ಲಿ ಭಾಗವಹಿಸಲು ತುಮಕೂರು ಮೂಲಕ ಪ್ರಯಾಣ ಬೆಳೆಸಿದ ರೈತ ಹೋರಾಟಗಾರರಾದ ರಾಕೇಶ್ ಟಿಕಾಯತ್ ಹಾಗೂ ತಂಡವನ್ನು ತುಮಕೂರಿನಲ್ಲಿ ರೈತ ಸಂಘಟನೆಗಳು, ಎಡಪಕ್ಷಗಳ ಕಾರ್ಯಕರ್ತರು, ಎಎಪಿ ಪಕ್ಷದ ಮುಖಂಡರು, ಪ್ರಗತಿಪರ ಹೋರಾಟಗಾರರು ಸ್ವಾಗತಿಸಿ, ಬಿಳ್ಕೋಟ್ಟರು.

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟ ರೈತ ಹೋರಾಟಗಾರರಾದ ರಾಕೇಶ್ ಟಿಕಾಯತ್, ಡಾ.ದರ್ಶನ್‍ಪಾಲ್, ಯದುವೀರ ಸಿಂಗ್, ಚುಕ್ಕಿ ನಂಜುಂಡಸ್ವಾಮಿ, ರಾಮಕೃಷ್ಣ ಸೇರಿದಂತೆ ಹಲವು ನಾಯಕರು ಇಂದು ತುಮಕೂರಿನ ಟೌನ್‍ಹಾಲ್ ವೃತ್ತಕ್ಕೆ ಆಗಮಿಸಿದ ವೇಳೆ ಅವರಿಗೆ ಪ್ರಗತಿಪರ ಹೋರಾಟಗಾರರಾದ ಡಾ.ಬಸವರಾಜು, ಕೆ.ದೊರೈರಾಜು, ರೈತ ಸಂಘದ ಎ.ಗೋವಿಂದ ರಾಜು, ಆನಂದಪಟೇಲ್ ಸೇರಿದಂತೆ ಅನೇಕ ಮುಖಂಡರು ಹೂಗುಚ್ಚ ನೀಡಿ ಸ್ವಾಗತಿಸಿದ್ದಲ್ಲದೆ, ಎಳೆ ನೀರು ನೀಡಿದರು.

ಈ ವೇಳೆ ಮಾತನಾಡಿದ ರೈತ ನಾಯಕ ರಾಕೇಶ್ ಟಿಕಾಯತ್, ರೈತರಿಗೆ ಮರಣಶಾಸನವಾಗಿರುವ ಮೂರು ರೈತ ವಿರೋಧಿ ಶಾಸನಗಳನ್ನ ಹಿಂದಕ್ಕೆ ಪಡೆಯಬೇಕು ಹಾಗೂ ಬೆಂಬಲ ಬೆಲೆಯನ್ನು ಕಾನೂನಾತ್ಮಕಗೊಳಿಸಬೇಕೆಂದು ಆಗ್ರಹಿಸಿ ಕಳೆದ 120 ದಿನಗಳಿಂದ ದಿಲ್ಲಿಯಲ್ಲಿ ನಡೆಯುತ್ತಿರುವ ಈ ಹೋರಾಟವನ್ನು ದೇಶದಾದ್ಯಂತ ವಿಸ್ತರಿಸಬೇಕೆಂಬ ಇಚ್ಚೆಯಿಂದ ಮೂರು ದಿನಗಳ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ. ಇಂದು ಶಿವಮೊಗ್ಗದಲ್ಲಿ ಮತ್ತು ನಾಳೆ ಹಾವೇರಿಯಲ್ಲಿ ರೈತರ ಮಹಾ ಪಂಚಾಯತ್ ನಡೆಯಲಿದೆ. ಮಾ.22 ರಂದು ಬೃಹತ್ ಸಂಖ್ಯೆಯಲ್ಲಿ ರೈತರೊಂದಿಗೆ ವಿಧಾನಸೌಧ ಮುತ್ತಿಗೆ ಹಾಕುವ ಕಾರ್ಯಕ್ರಮವಿದೆ. ಎಂ.ಎಸ್.ಪಿ ಬಗ್ಗೆ ಸರಕಾರ ಸ್ಪಷ್ಟ ಕಾನೂನು ತರುವವರೆಗೂ ನಮ್ಮ ಹೋರಾಟ ನಿಲ್ಲದು. ಇದಕ್ಕೆ ನಾಡಿನ ಎಲ್ಲಾ ರೈತಾಪಿ ವರ್ಗ, ನಾಗರಿಕರು ನಮ್ಮ ಈ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಬೇಕೆಂದು ಕರೆ ನೀಡಿದರು.

ಈ ವೇಳೆ ಪ್ರಗತಿಪರ ಹೋರಾಟಗಾರರಾದ ಡಾ.ಆರುಂಧತಿ, ತಾಜುದ್ದೀನ್ ಷರೀಫ್, ಪಿ.ಎನ್.ರಾಮಯ್ಯ, ಕೊಟ್ಟಶಂಕರ್, ಸಿಐಟಿಯುನ ಸೈಯದ್ ಮುಜೀಬ್, ಎನ್.ಕೆ.ಸುಬ್ರಮಣ್ಯ, ಎಐಕೆಸಿಸಿಯ ಸಂಚಾಲಕ ಸಿ.ಯತಿರಾಜು, ಡಾ.ಮುರುಳೀಧರ್, ಪಂಡಿತ್ ಜವಹರ್, ಎಎಪಿ ಜಿಲ್ಲಾಧ್ಯಕ್ಷ ಮುನೀರ್ ಅಹಮದ್, ಸಂಘಟನಾ ಕಾರ್ಯದರ್ಶಿ ಉಮರ್ ಫಾರೂಕ್, ಕಾಂಗ್ರೆಸ್ ಮುಖಂಡರಾದ ರಾಯಸಂದ್ರ ರವಿಕುಮಾರ್, ಎ.ನರಸಿಂಹಮೂರ್ತಿ, ರೈತ ಸಂಘದ ಮತ್ತು ಹಸಿರು ಸೇನೆಯ ಧನಂಜಯ ಆರಾಧ್ಯ ಸೇರಿದಂತೆ ಹಲವರು ಹಾಜರಿದ್ದು, ರೈತರ ಹೋರಾಟಗಾರರಿಗೆ ಬೆಂಬಲ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News