×
Ad

ಕೃಷಿ ಕಾಯ್ದೆಗಳನ್ನು ರದ್ದು ಮಾಡಲು ಆಗ್ರಹ: ಜನಸಾಗರದ ನಡುವೆ ಶಿವಮೊಗ್ಗದಲ್ಲಿ ರೈತ ಮಹಾ ಪಂಚಾಯತ್

Update: 2021-03-20 19:18 IST

ಶಿವಮೊಗ್ಗ, ಮಾ.20: ನಗರದ ಸೈನ್ಸ್ ಮೈದಾನದಲ್ಲಿ ಹಮ್ಮಿಕೊಂಡಿರುವ ದಕ್ಷಿಣ ಭಾರತದ ಮೊದಲ ರೈತ ಮಹಾ ಪಂಚಾಯತ್ ನಲ್ಲಿ ಸಾವಿರಾರು ಮಂದಿ ರೈತರು ಭಾಗವಹಿಸಿದ್ದು, ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ದಿಲ್ಲಿಯ ರೈತ ಹೋರಾಟವನ್ನು ಮುನ್ನಡೆಸುತ್ತಿರುವ ಡಾ.ದರ್ಶನ್ ಪಾಲ್, ರಾಕೇಶ್ ಟಿಕಾಯತ್ ಮತ್ತು ಯುದುವೀರ್‌ ಸಿಂಗ್‌ರವರು ಭಾಗವಹಿಸಿ ಮಹಾಪಂಚಾಯತ್ ಗೆ ಚಾಲನೆ ನೀಡಿದರು. 

ಮಹಾ ಪಂಚಾಯತ್ ನಲ್ಲಿ ರೈತರು ಮೂರು ರೈತ ಕಾಯ್ದೆಗಳನ್ನು ಬೇಷರತ್ತಾಗಿ ಹಿಂಪಡೆಯುವುದು ಸೇರಿದಂತೆ ಹತ್ತು ನಿರ್ಣಯಗಳನ್ನು ಕೈಗೊಂಡಿದ್ದಾರೆ.

ಹತ್ತು ನಿರ್ಣಯಗಳು :

1. ಕೇಂದ್ರ ಸರ್ಕಾರ ಸರ್ವಾಧಿಕಾರಿ ರೀತಿಯಲ್ಲಿ ಜಾರಿ ಗೊಳಿಸಿರುವ ಮೂರು ರೈತ ವಿರೋಧಿ ಮತ್ತು ಕಾರ್ಪೋರೇಟ್ ಪರವಾದ ಕಾಯ್ದೆಗಳನ್ನು ಬೇಷರತ್ತಾಗಿ ಈ ಕೂಡಲೆ ಹಿಂಪಡೆಯಬೇಕು.

2. ರಾಜ್ಯ ಸರ್ಕಾರ ಜನವಿರೋಧಿಯಾಗಿ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಚಕ್ತಿ ಕಾಯ್ದೆ ಮತ್ತು ಜಾನುವಾರು ಹತ್ಯೆ ನಿಷೇಧ ಕಾಯ್ದೆಗಳಿಗೆ ತಂದ ತಿದ್ದುಪಡಿಗಳನ್ನು ಕೂಡಲೆ ರದ್ದುಪಡಿಸಬೇಕು.

3. ಹಸಿರು ಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸಿ, ಈಗ ರೈತ ವಿರೋಧಿಯಾದ ಕಾಯ್ದೆಗಳನ್ನು ಜಾರಿಗೆ ತರುತ್ತಿರುವ ಮತ್ತು ಕರ್ನಾಟಕದ ರೈತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ ಕನಿಷ್ಠ ಸೌಜನಕ್ಕೂ ರೈತ ಸಂಘಟನೆಗಳನ್ನು ಕರೆದು ಮಾತಾಡದ ಮುಖ್ಯಮಂತ್ರಿ ಯಡಿಯೂರಪ್ಪನವರ ನಡೆತೆಯನ್ನು ಮಹಾ ಪಂಚಾಯತ್ ಖಂಡಿಸುತ್ತದೆ.

4. ಸ್ವಾಮಿನಾಥನ್ ಮತ್ತು ಪ್ರಕಾಶ್ ಕಮ್ಮರಡಿಯವರ ವರದಿಗಳನ್ನು ಆಧರಿಸಿ, ರೈತರ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ, ಅದರ ಅನುಷ್ಠಾನವನ್ನು ಕಡ್ಡಾಯಗೊಳಿಸುವ ಕಾಯ್ದೆಯನ್ನು ಜಾರಿಗೆ ತರಬೇಕು.

5. ಬಗರ್ ಹುಕುಂ ರೈತರ ಭೂಮಿಗಳನ್ನು ಮತ್ತು ಸರ್ಕಾರಿ ಜಾಗಗಳಲ್ಲಿ ಮನೆ ಕಟ್ಟಿಕೊಂಡಿರುವ ಬಡಜನರ ಜಾಗಗಳನ್ನು ಕೂಡಲೇ ಮಂಜೂರುಗಳಿಸಬೇಕು.

6. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭೂಮಿ ಪರಬಾರೆ ತಡೆ ಕಾಯ್ದೆಯ ಮೂಲ ಆಶಯಕ್ಕೆ ಧಕ್ಕೆ ತರುವಂತೆ ರೆವೆನ್ಯೂ ನ್ಯಾಯಾಲಯಗಳು ಆದೇಶ ನೀಡುತ್ತಿರುವದರಿಂದ ಕೂಡಲೆ ಸದರಿ PTCL ಕಾಯ್ದೆಗೆ ತಿದ್ದುಪಡಿ ತಂದು ಮೂಲ ಕಾಯ್ದೆಯನ್ನು ಬಲಪಡಿಸಬೇಕು.

7. ಅನ್ನ ಭಾಗ್ಯ ಯೋಜನೆಯನ್ನು ದುರ್ಬಲಗೊಳಿಸುಲು ಮತ್ತು ಪಡಿತರ ವ್ಯವಸ್ಥೆಯನ್ನು ರದ್ದುಗೊಳಿಸಲು ಸರ್ಕಾರ ಮಾಡುತ್ತಿರುವ ಹುನ್ನಾರಗಳನ್ನು ಮಹಾ ಪಂಚಾಯತ್ ಖಂಡಿಸುತ್ತದೆ, ಜನಸಾಮಾನ್ಯರಿಗೆಲ್ಲರಿಗೂ, ಎಲ್ಲಾ ಮೂಲ ಅಗತ್ಯ ಧಾನ್ಯಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುವಂತೆ ಪಡಿತರ ವ್ಯವಸ್ಥೆಯನ್ನು ಬಲಪಡಿಸಬೇಕು.

8. ಮಲೆನಾಡಿನ 33,000/- ಹೆರ್ ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ನೀಡುವ ಸಲುವಾಗಿ, ಐದು ವರ್ಷಗಳ ಹಿಂದೆ ಸಂಪೂರ್ಣ ಸ್ಥಗಿತಗೊಂಡಿರುವ MPM ಕಾರ್ಖಾನೆ ಹೆಸರಿಗೆ, ಕಾನೂನು ಬಾಹಿರವಾಗಿ 40 ವರ್ಷಕ್ಕೆ ಲೀಸ್ ಮಾಡಿರುವ ಕ್ರಮವನ್ನು ಈ ಮಹಾ ಪಂಚಾಯತ್ ಖಂಡಿಸುತ್ತದೆ. ಮತ್ತು ಸದರಿ ಭೂಮಿಯನ್ನು ಅರಣ್ಯ ಇಲಾಖೆಗೆ ವಾಪಾಸ್ ಪಡೆಯಬೇಕೆಂದು ಒತ್ತಾಯಿಸುತ್ತದೆ.

9. ಪಶ್ಚಿಮಘಟ್ಟ ಮತ್ತು ಮಲೆನಾಡ ತಪ್ಪಲ ಜನರನ್ನು ಆಭದ್ರತೆಯಿಂದ ಬದುಕುವಂತೆ ಮಾಡಿರುವ ಕಸ್ತೂರಿ ರಂಗನ್, ಸೆಕ್ಷನ್ - 4, ಹುಲಿಯೋಜನೆ, ಆಭಯರಣ, ರಕ್ಷಿತ ಅರಣ ಮುಂತಾದ ಯೋಜನೆಗಳನ್ನು ಕೂಡಲೇ ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತದೆ.

10. ಜನರೊಡನೆ ಸಮಾಲೋಚನೆ ನಡೆಸಿ ಮಲೆ ಮತ್ತು ನಾಡು ಎರಡೂ ಉಳಿಯುವಂತಹ ಜನಸ್ನೇಹಿ ಮತ್ತು ಪರಿಸರ ಸ್ನೇಹಿ ಅಭಿವೃದ್ಧಿ ಯೋಜನೆಯನ್ನು ರೂಪಿಸಿ, ಅನುಷ್ಠಾನಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News