ಉಪಚುನಾವಣೆಗೆ ಕೊರೋನ ನಿಯಮಗಳು ಅನ್ವಯವಾಗುವುದಿಲ್ಲವೇ: ಕುಮಾರಸ್ವಾಮಿ ಪ್ರಶ್ನೆ
ರಾಮನಗರ, ಮಾ.20: ಉಪ ಚುನಾವಣೆಗೆ ಕೊರೋನ ನಿಯಮಗಳು ಅನ್ವಯವಾಗುವುದಿಲ್ಲವೇ? ಚುನಾವಣೆಗೆ ಹೆದರಿ ಕೊರೋನ ಓಡಿ ಹೋಗುತ್ತದೆಯೇ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರವೆ ಕೊರೋನ ನಿಯಮಗಳನ್ನು ಮಾಡಿ, ಮತ್ತೆ ಚುನಾವಣೆಗೆ ಈ ನಿಯಮಗಳು ಅನ್ವಯವಾಗುವುದಿಲ್ಲ ಎಂದು ಹೇಳಿದರೆ ಹೇಗೆ? ಚುನಾವಣೆ ಇದೇ ಎಂದು ಕೊರೋನ ಬರೋದಿಲ್ಲವೇ ಎಂದರು.
ಸರಕಾರವು ಪ್ರತಿಯೊಂದು ಹಂತದಲ್ಲಿಯೂ ಅನಾಹುತಗಳು ಆಗದಂತೆ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ನಮಗೆ ಬೇಕಾದಂತೆ ನಿಯಮಗಳನ್ನು ಮಾರ್ಪಾಡು ಮಾಡಿಕೊಂಡು ಅನಾಹುತಗಳಿಗೆ ದಾರಿ ಮಾಡಿಕೊಡಬಾರದು ಎಂದು ಕುಮಾರಸ್ವಾಮಿ ಕಿಡಿಗಾರಿದರು.
ಮುಂದಿನ ಎಪ್ರಿಲ್‍ನಲ್ಲಿ ನಡೆಯಲಿರುವ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುವ ನಿರ್ಣಯ ಮಾಡಲಾಗಿದೆ ಎಂದ ಅವರು, ರಾಜ್ಯ ಸರಕಾರದ ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗಳಿಗೆ ಬಗೆಹರಿಸುವ ನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರಂತೆ, ಈ ಭಾಗದಲ್ಲಿ ಜನರ ಸಮಸ್ಯೆಗಳನ್ನು ಕೇಳಿ ಬಗೆಹರಿಸಲು ಇಲ್ಲೆ ಗ್ರಾಮ ವಾಸ್ತವ್ಯ ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೆ ಎಂದರು.
ಪ್ರಮುಖವಾಗಿ ಈ ಭಾಗದಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಯ ಸಮಸ್ಯೆಯಿದೆ. ರೈತರು ಸುಮಾರು 30, 40 ವರ್ಷಗಳಿಂದ ಆತಂಕದಲ್ಲಿದ್ದಾರೆ. ಅವರಲ್ಲಿ ವಿಶ್ವಾಸ ಮೂಡಿಸಲು ತಾಂತ್ರಿಕ ಹಾಗೂ ಕಾನೂನಾತ್ಮಕವಾದ ಸಮಸ್ಯೆಗಳನ್ನು ಬಗೆಹರಿಸಿ, ಸರಕಾರ ರೈತರ ಪರವಾಗಿ ಕೆಲಸ ನಿರ್ವಹಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.