ಬೆಳಗಾವಿ ಉಪಚುನಾವಣೆಗೆ ಸತೀಶ್ ಜಾರಕಿಹೊಳಿ ಹೆಸರು ಅಂತಿಮವಾಗಲಿದೆ: ಸಿದ್ದರಾಮಯ್ಯ

Update: 2021-03-20 15:10 GMT

ಮೈಸೂರು, ಮಾ.20: ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸತೀಶ್ ಜಾರಕಿಹೊಳಿ ಅವರ ಹೆಸರೇ ಅಂತಿಮವಾಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮಾಜಿ ಜಿ.ಪಂ ಅಧ್ಯಕ್ಷ ಕೆ.ಸಿ.ಬಲರಾಂ ಅವರ ಅಂತಿಮ ದರ್ಶನ ಪಡೆಯಲು ಶನಿವಾರ ಮೈಸೂರಿಗೆ ಆಗಮಿಸಿದ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸತೀಶ್ ಜಾರಕಿಹೊಳಿ ಹೆರನ್ನು ಶಿಫಾರಸ್ಸು ಮಾಡಲಾಗಿದೆ. ಬಹುತೇಖ ಅವರೇ ಅಭ್ಯರ್ಥಿಯಾಗಲಿದ್ದಾರೆ ಎಂದರು.

ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಯಡಿಯೂರಪ್ಪ ಏನು ಸೋಲುತ್ತೇವೆ ಎಂದು ಹೇಳಲು ಸಾಧ್ಯನಾ? ಮತಗಳೇನು ಯಡಿಯೂರಪ್ಪ ಜೇಬಿನಲ್ಲಿ ಇದ್ದಾವ? ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು. ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಎ.17ರಂದು ಜನ ಇವರಿಗೆ ತಕ್ಕ ಉತ್ತರ ಕೊಡಲಿದ್ದಾರೆ ಎಂದರು.

ಉಪಚುನಾವಣೆಗೆ ಕಾಂಗ್ರೆಸ್ ಎಲ್ಲಾ ಸಿದ್ದತೆ ಮಾಡಿಕೊಂಡಿದೆ. ಪ್ರತಾಪ್ ಗೌಡ ಪಕ್ಷ ಬಿಟ್ಟು ಹೋಗಿದ್ದಾನೆ. ಅವರಿಗೆ ನೈತಿಕತೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ನಡೆಯತ್ತಿದೆ ಎಂಬ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದವನು ಬಿಜೆಪಿ ಪಕ್ಷಕ್ಕೆ ಹೋಗಿದ್ದಾನೆ. ಇಂತವರಿಗೆ ಹೊಂದಾಣಿಕೆ ರಾಜಕಾರಣದ ಬಗ್ಗೆ ಮಾತನಾಡುವುದಕ್ಕೆ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದರು. ಇಂತವರ ಮಾತಿಗೆ ನಾನು ಉತ್ತರ ಕೊಡುವುದಿಲ್ಲ, ಎಂದು ಹೇಳಿದರು.

ಕೆ.ಸಿ.ಬಲರಾಂ ನನ್ನ ಆತ್ಮೀಯ, ನನ್ನ ಜೊತೆ ರಾಜಕಾರಣ ಮಾಡಿಕೊಂಡು ಬಂದಿದ್ದಾನೆ. ಇದುವರೆಗೂ ಯಾವ ಚುನಾವಣೆಯಲ್ಲೂ ಸೋತಿರಲಿಲ್ಲ, ಮೈಮುಲ್ ಚುನಾವಣೆಯಲ್ಲಿ ಸೋತಿದ್ದರಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News