ನೃತ್ಯಗಾರ್ತಿ ಗಾಯಗೊಂಡರೆ ಟ್ವೀಟ್ ಮಾಡುವ ಪ್ರಧಾನಿ, ರೈತರು ಸತ್ತರೆ ಪ್ರತಿಕ್ರಿಯಿಸಲ್ಲ: ಯುದ್ಧವೀರ್ ಸಿಂಗ್
ಶಿವಮೊಗ್ಗ, ಮಾ.20: ದೆಹಲಿಯಲ್ಲಿ ಒಬ್ಬ ವ್ಯಕ್ತಿ ದೇಶವನ್ನು ಮಾರಾಟ ಮಾಡುತ್ತಿದ್ದಾನೆ. ಆದರೆ, ನೀವು ಕೂತು ಮಾರಾಟ ಮಾಡುವುದನ್ನು ನೋಡುತ್ತಿದ್ದಿರಾ. ವಾರೆ ವಾ ಮೇರೆ ದೇಶ್ ಕಿ ಜನತಾ ಎಂದು ಯುದ್ಧವೀರ್ ಸಿಂಗ್ ಬೇಸರ ವ್ಯಕ್ತಪಡಿಸಿದರು.
ಶಿವಮೊಗ್ಗದ ರೈತ ಮಹಾ ಪಂಚಾಯತ್‌ನಲ್ಲಿ ಮಾತನಾಡಿದ ಅವರು, ಬಾಂಬೆಯಲ್ಲಿ ಯಾರೋ ಡ್ಯಾನ್ಸರ್ ಮಹಿಳೆ ಗಾಯಗೊಂಡರೆ ಟ್ವೀಟ್ ಮಾಡುವ ಪ್ರಧಾನಿ ಮೋದಿಯವರು, ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರು ಸತ್ತರೂ ಪ್ರತಿಕ್ರಿಯಿಸಿಲ್ಲ. ಇದು ಈ ದೇಶದ ದುರಂತ ಎಂದು ಹೇಳಿದರು.
ಒಂದಲ್ಲ ಒಂದು ದಿನ ದೇಶವನ್ನು ಅದಾನಿ, ಅಂಬಾನಿ ಚಾಟಿ ಹಿಡಿದು ಚಲಾಯಿಸಲಿದ್ದಾರೆ. ಮತ್ತೊಮ್ಮೆ ದೇಶ ಗುಲಾಮಗಿರಿಯತ್ತ ಹೋಗಲಿದೆ. ಈಗ ಅಸ್ತಿತ್ವ ಉಳಿಸಿಕೊಳ್ಳದೇ, ಎಚ್ಚೆತ್ತುಕೊಳ್ಳದೇ ಹೋದಲ್ಲಿ ದೇಶಕ್ಕೆ ಗಂಡಾಂತರ ಕಾದಿದೆ ಎಂದು ರೈತರಿಗೆ ಎಚ್ಚರಿಕೆ ನೀಡಿದರು.
ಉದ್ಯಮಿಗಳಿಗೆ ಲಕ್ಷಾಂತರ ರೂಪಾಯಿಗಳ ಸಾಲವನ್ನು ನೀಡಿ ಮನ್ನಾ ಮಾಡಲಾಗುತ್ತಿದೆ. ಆದರೆ, ಬಡವರ ಐವತ್ತು ಸಾವಿರ ರೂ. ಸಾಲ ಇದ್ದರೂ ಕೂಡ ಅದನ್ನು ಮನ್ನಾ ಮಾಡುತ್ತಿಲ್ಲ. ಉದ್ಯಮಿಗಳ ಕೋಟ್ಯಂತರ ರೂ. ಸಾಲ ಮನ್ನಾ ಮಾಡುವ ಬದಲು, ರಾಜ್ಯದ ದೇಶದ ರೈತರ ಸಾಲ ಮನ್ನಾ ಮಾಡಿದ್ದರೆ, ಜನರು ಉಳಿಯುತ್ತಿದ್ದರು.
ಕೊರೋನದಿಂದಾಗಿ, ದೇಶದಲ್ಲಿ 8 ಕೋಟಿ ಜನರ ಉದ್ಯೋಗ ಕಳೆದು ಹೋಗಿದೆ. ಆದರೆ, ಧರ್ಮದ ಅಮಲಿನಲ್ಲಿ ಕೇಂದ್ರ ಸರ್ಕಾರ ತೇಲುತ್ತಿದೆ. ಅದನ್ನು ಜನರು ನೋಡುತ್ತಾ ಕುಳಿತಿದ್ದಾರೆ. ರಾಮ ನಮ್ಮದೇ ಸ್ವತ್ತು ಎಂದು ಹೇಳುತ್ತಿರುವ ಸರ್ಕಾರವನ್ನು ಜನರು ಹೊಗಳುತ್ತಿದ್ದಾರೆ. ರೈತನ ಭೂಮಿಯೇ ರಾಮ, ರೈತನ ಬೆಳೆಯೇ ರಾಮ, ಕೇಂದ್ರ ಸರ್ಕಾರ ಇದನ್ನು ಅರಿಯಬೇಕಿದೆ ಎಂದರು.
ದೇಶವನ್ನು ಧರ್ಮದ ಹೆಸರಿನಲ್ಲಿ ನಡೆಸಲಾಗುತ್ತಿದೆ. ದೇಶವನ್ನು ಧರ್ಮದ ಹೆಸರಿನಲ್ಲಿ ಛಿದ್ರ ಮಾಡುವ ಪ್ರಯತ್ನ ಜಾರಿಯಲ್ಲಿದೆ. ಈ ಕೃಷಿ ನೀತಿ ಜಾರಿ ವಿರುದ್ಧ ದೆಹಲಿಗೆ ಹೋರಾಟಕ್ಕೆ ಬರುವ ಬದಲು ಬೆಂಗಳೂರಿಗೆ ಹೋಗಿ ಚಳವಳಿ ನಡೆಸಿ. ರೈತರ ಪರವಾಗಿ ಸಣ್ಣ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರೂ, ಹೋರಾಟ ನಡೆಸಿ ಎಂದು ಕರೆ ನೀಡಿದರು.