×
Ad

ರೈತರ ವಿದ್ಯುತ್, ಭೂಮಿಯನ್ನು ಕಿತ್ತುಕೊಳ್ಳಲು ಸರಕಾರದ ಹುನ್ನಾರ: ರಾಕೇಶ್ ಟಿಕಾಯತ್ ಆರೋಪ

Update: 2021-03-20 21:39 IST

ಶಿವಮೊಗ್ಗ, ಮಾ.20: ಸರ್ಕಾರ ರೈತರನ್ನು ಮೋಸ ಮಾಡಲು ಯತ್ನಿಸುತ್ತಿದ್ದು, ರೈತರ ಹಾಲು, ಬೀಜ, ವಿದ್ಯುತ್, ಭೂಮಿಯನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದೆ ಎಂದು ರೈತ ಹೋರಾಟಗಾರ ರಾಕೇಶ್ ಟಿಕಾಯತ್ ಆರೋಪಿಸಿದರು.

ಶಿವಮೊಗ್ಗದಲ್ಲಿ ನಡೆದ ರೈತ ಮಹಾಪಂಚಾಯತ್‌ನಲ್ಲಿ ಮಾತನಾಡಿದ ಅವರು, ಇಂದು ದೇಶದ ಬಡವರ ಹಸಿವಿನ ಮೇಲೆ ವ್ಯಾಪಾರ ನಡೆಯುತ್ತಿದೆ. ದೊಡ್ಡ ಬಂಡವಾಳಶಾಹಿಗಳು ರೈತರ ರೊಟ್ಟಿ, ಅನ್ನವನ್ನು ತಮ್ಮ ತಿಜೋರಿಗಳಲ್ಲಿ ಬಂಧಿಸಿಡಲು ಹುನ್ನಾರ ನಡೆಸುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು, ಅದಕ್ಕಾಗಿ ರೈತ ಹೋರಾಟ ತೀವ್ರಗೊಳಿಸಬೇಕು ಎಂದು ಹೇಳಿದರು.

ಯುವ ಜನರನ್ನು ಭೂಮಿ ಜೊತೆ ಬೆಸೆಯುವ ಕೆಲಸ ಮಾಡಬೇಕು. ಅವರು ಮಣ್ಣನ್ನು ಮೈಗಂಟಿಸಿಕೊಳ್ಳಬೇಕು. ಅವರು ತಮ್ಮ ಭೂಮಿಯ ಮಣ್ಣನ್ನು ಕೈಯಲ್ಲಿಡಿದು ರೈತ ಹೋರಾಟಕ್ಕೆ ಬರಬೇಕು ಎಂದು ಕರೆ ನೀಡಿದ ಅವರು, ದೊಡ್ಡ ಕಂಪನಿಗಳು ಬಂದು ನಿಮ್ಮ ಜಮೀನನ್ನು ಗುತ್ತಿಗೆಗೆ ಪಡೆದು ಕೃಷಿ ಮಾಡುತ್ತವೆ. ಕಿಸಾನ್ ಕ್ರೆಡಿಟ್ ಕಾರ್ಡ್ ಎಂಬ ಸಾಲ ಕೊಡುತ್ತಾರೆ. ರೈತರ ಬೆಳೆಗೆ ಬೆಲೆ ಸಿಗದೆ ಸಾಲ ವಾಪಸ್ ಮಾಡದಿದ್ದರೆ ಅವರ ಭೂಮಿ ಕಿತ್ತುಕೊಳ್ಳುತ್ತಾರೆ. ರೈತ ತನ್ನದೇ ಜಮೀನಿನಲ್ಲಿ ಜೀತ ಮಾಡುವ ಕಾಲಬರಲಿದೆ. ಅದನ್ನು ತಡೆಯಲು ನಮ್ಮ ಹೋರಾಟ ನಡೆಯುತ್ತಿದೆ ಎಂದರು.

ಇಂದು ದೆಹಲಿಯಲ್ಲಿ ಎಲ್ಲಾ ಗಡಿಗಳಲ್ಲಿ ಹೋರಾಟ ನಡೆಯುತ್ತಿದೆ. ಇದು ದೀರ್ಘ ಹೋರಾಟವಾಗಿದೆ. ಇದು ಬೇಗ ಮುಗಿಯುವುದಿಲ್ಲ. ದೆಹಲಿ ಮಾದರಿಯಲ್ಲಿ ಬೆಂಗಳೂರನ್ನು ನಾಲ್ಕು ದಿಕ್ಕುಗಳಲ್ಲಿ ಸುತ್ತುವರಿಯಿರಿ. ಹೋರಾಟ ಮುನ್ನಡೆಸಿ ಎಂದ ಅವರು, ಕರಾಳ ಕಾನೂನುಗಳು ವಾಪಸ್ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ. ಕರ್ನಾಟಕ ರಾಜ್ಯದಲ್ಲಿ ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿ ಈ ಹೋರಾಟವನ್ನು ಮುಂದುವರಿಸಬೇಕೆಂದು ಮನವಿ ಮಾಡಿದರು.

ಸರ್ಕಾರ ದ್ವಂದ್ವ ನೀತಿಯನ್ನು ಅಳವಡಿಸುತ್ತಿದೆ. ಸರ್ಕಾರಿ ನೌಕರರ ಪಿಂಚಣಿ ಕಿತ್ತುಕೊಂಡು ಎಂಪಿ ಎಮ್ಮೆಲ್ಲೆಗಳಿಗೆ ಸೌಲಭ್ಯಗಳನ್ನು ನೀಡುತ್ತಿದೆ. ಪೊಲೀಸರನ್ನು ಸರ್ಕಾರ ಶೋಷಿಸುತ್ತಿದೆ. ರೈತರ ಬೆಳೆಗಳಿಗೆ ಬೆಲೆ ನಿಗಧಿಪಡಿಸಬೇಕಾದವರು ಸರ್ಕಾರವಲ್ಲ, ಬದಲಿಗೆ ರೈತರು. ಆ ದಿನ ಬರುವಂತೆ ಹೋರಾಡೋಣ. ಯಾವಾಗ ಜೈರಾಮ್ ಮತ್ತು ಜೈಭೀಮ್ ಎಂಬ ಎರಡು ಘೋಷಣೆಗಳು ಒಟ್ಟಿಗೆ ಮೊಳಗುತ್ತವೆಯೊ ಆಗ ಜಯ ನಮ್ಮದು. ಅದಕ್ಕೆ ಕಾರ್ಮಿಕರು ಜೊತೆಗೂಡಬೇಕು ಎಂದರು.

ಕಾಯ್ದೆ ವಾಪಸಾತಿ ಮಾತನಾಡುತ್ತಿರುವ ಯುವಜನರು ಸರ್ಕಾರ ವಾಪಸಾತಿ ಮಾತನಾಡಿದರೆ ಏನಾಗುತ್ತದೆ ಎಂದು ಸರ್ಕಾರ ಯೋಚಿಸಬೇಕು. ಯುವಜನರು ರೊಚ್ಚಿಗೇಳುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಬೇರೆ ಸರ್ಕಾರವಾಗಿದ್ದರೆ ಎಚ್ಚೆತ್ತುಕೊಳ್ಳುತ್ತಿತ್ತು. ಆದರೆ ಈ ಸರ್ಕಾರವನ್ನು ಕಾರ್ಪೊರೇಟ್ ಕುಳಗಳೇ ನಡೆಸುತ್ತಿದ್ದಾರೆ. ಅದನ್ನು ಕಿತ್ತೊಗೆಯುವ ಕೆಲಸ ನಮ್ಮದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News