×
Ad

ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಗುವವರೆಗೂ ವಿಶ್ರಮಿಸುವುದಿಲ್ಲ: ರಾಕೇಶ್ ಟಿಕಾಯತ್

Update: 2021-03-20 23:43 IST

ಕಡೂರು, ಮಾ.20: ರೈತ ವಿರೋಧಿ ಕಾಯ್ದೆಗಳನ್ನು ಬಲವಂತವಾಗಿ ಹೇರುತ್ತಿರುವ ಕೇಂದ್ರ ಸರಕಾರದ ವಿರುದ್ಧದ ಹೋರಾಟಕ್ಕೆ ಜಯ ಸಿಗಲು ಸಾರ್ವಜನಿಕರ ಬೆಂಬಲ ಬೇಕಿದೆ ಎಂದು ಸಂಯುಕ್ತ ರೈತ ಮೋರ್ಚಾ ಮುಖಂಡ ರಾಕೇಶ್ ಟಿಕಾಯತ್ ತಿಳಿಸಿದರು.

ಶಿವಮೊಗ್ಗದಲ್ಲಿ ಆಯೋಜಿಸಲಾಗಿರುವ ರೈತ ಪಂಚಾಯತ್ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಕಡೂರಿನ ಕೆ.ಎಲ್.ವಿ.ಸರ್ಕಲ್‍ನಲ್ಲಿ ರೈತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರೈತರು 115 ದಿನಗಳಿಂದ ದಿಲ್ಲಿಯಲ್ಲಿ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರಕಾರ ಯಾವುದೇ ಸ್ಪಂದನೆ ತೋರದೆ ಸರ್ವಾಧಿಕಾರಿ ಮನೋಭಾವನೆ ತೋರುತ್ತಿದೆ. ರೈತರ ಪಾಲಿಗೆ ಮರಣಶಾಸನವೇ ಆಗಿರುವ ರೈತವಿರೋಧಿ ಶಾಸನಗಳನ್ನು ಹಿಂಪಡೆಯಬೇಕೆಂಬ ಬೇಡಿಕೆಯನ್ನು ಮಾನ್ಯಮಾಡದೇ ಶಾಸನ ಜಾರಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ರೈತರನ್ನು ಅವಮಾನ ಮಾಡುತ್ತಲಿದೆ. ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿ ರೈತರನ್ನೇ ಕಗ್ಗತ್ತಲಿಗೆ ನೂಕುತ್ತಿದೆ. ಇಂತಹ ಅಪಸವ್ಯದ ನಿರ್ಧಾರಗಳನ್ನು ಕೇಂದ್ರ ಸರಕಾರ ಹಿಂಪಡೆಯುವ ತನಕ ನಮ್ಮ ಹೋರಾಟ ನಿರಂತರ. ಈ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಗುವವರೆಗೂ ವಿಶ್ರಮಿಸುವುದಿಲ್ಲ ಎಂದರು.

ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಕೇಂದ್ರ ಸರಕಾರದ ರೈತ ವಿರೋಧಿ ನೀತಿಯ ದೂರಗಾಮಿ ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಬೇಕಿದೆ. ಬಡ ರೈತರ ಭೂಮಿ ಕಾರ್ಪೋರೇಟ್ ಸಂಸ್ಥೆಗಳ ಪಾಲಿನ ಚಿನ್ನದ ಗಣಿಯಾಗುವುದನ್ನು ತಪ್ಪಿಸಬೇಕಿದೆ. ಇದಕ್ಕೆ ರೈತರ ಮತ್ತು ಸರ್ವಜನತೆಯ ಸಹಕಾರ ಅಗತ್ಯವಾಗಿದೆ. ರೈತರ ಹೋರಾಟಕ್ಕೆ ನನ್ನ ಮತ್ತು ಜೆಡಿಎಸ್ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದರು.

ರೈತ ಹೋರಾಟಗಾರ್ತಿ ಚುಕ್ಕಿನಂಜುಂಡಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿದರು. ಡಾ.ದರ್ಶನ್ ಪಾಲ್, ಯುದ್ಧವೀರ ಸಿಂಗ್, ತಾಲೂಕು ರೈತಸಂಘದ ಅಧ್ಯಕ್ಷ ನಿರಂಜನಮೂರ್ತಿ, ಯುವ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎಚ್.ಪ್ರೇಂ ಕುಮಾರ್, ಪುರಸಭೆ ಅಧ್ಯಕ್ಷ ಭಂಢಾರಿ ಶ್ರೀನಿವಾಸ್, ಕೋಡಿಹಳ್ಳಿ ಮಹೇಶ್ವರಪ್ಪ, ಎಚ್.ಎಸ್.ದೇವರಾಜ್, ಕೆ.ವಿ.ಮಂಜುನಾಥ್, ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಮುಖಂಡರಾದ ಶೂದ್ರಶ್ರೀನಿವಾಸ್, ಗಂಗರಾಜು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News