×
Ad

ಬಿಎಸ್‍ವೈ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ವರಿಷ್ಠರ ಮೌನವೇಕೇ?: ಮಾಜಿ ಸಚಿವ ಕೃಷ್ಣ ಬೈರೇಗೌಡ ಪ್ರಶ್ನೆ

Update: 2021-03-21 21:51 IST

ಬೆಂಗಳೂರು, ಮಾ. 21: ‘ನಾನು ತಿನ್ನುವುದಿಲ್ಲ, ಬೇರೆಯಾರೂ ತಿನ್ನಲು ಬಿಡುವುದಿಲ್ಲ' ಎಂದು ಭ್ರಷ್ಟಾಚಾರದ ವಿರುದ್ಧ ಮಾತನಾಡಿದ್ದ ಬಿಜೆಪಿಯವರು ಇದೀಗ ಕರ್ನಾಟಕ ರಾಜ್ಯದಲ್ಲಿ ಯಡಿಯೂರಪ್ಪನವರನ್ನು ತಿನ್ನಲ್ಲಿಕ್ಕೆ ಬಿಟ್ಟಿದ್ದಾರೆ ಎಂದರೆ ಇದರಲ್ಲಿ ಅವರಿಗೂ ಪಾಲಿದೆಯೇ?' ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ, ಪ್ರಧಾನಿ ಮೋದಿ ಹಾಗೂ ಬಿಜೆಪಿ ವರಿಷ್ಠರನ್ನು ಪ್ರಶ್ನಿಸಿದ್ದಾರೆ.

ರವಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಎಸ್‍ವೈ ಅವರು ಆರ್‍ಟಿಜಿಎಸ್ ಮೂಲಕ ಭ್ರಷ್ಟಾಚಾರ ನಡೆಸಿರುವ ದಾಖಲೆ ಇದೆ. ಇದು ಬಿಜೆಪಿ ವರಿಷ್ಠರ ಕಣ್ಣಿಗೆ ಕಾಣುತ್ತಿದ್ದರೂ ಎಲ್ಲರೂ ಮೌನಕ್ಕೆ ಶರಣಾಗಿದ್ದಾರೆ. ಕೂಡಲೇ ಬಿಎಸ್‍ವೈ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಯಡಿಯೂರಪ್ಪ ಈ ಹಿಂದೆಯೂ ಸಿಎಂ ಆಗಿದ್ದ ವೇಳೆ ವೈಯಕ್ತಿಕ ಲಾಭಕ್ಕಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಯಡಿಯೂರಪ್ಪ ವಿರುದ್ದ ಈ ಹಿಂದೆಯೇ ಚಾರ್ಜ್‍ಶೀಟ್ ಸಲ್ಲಿಕೆಯಾಗಿರುವುದರಿಂದ ತನಿಖೆಗೆ ಒಳಪಡಬೇಕು. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಅಧಿಕಾರ ದುರುಪಯೋಗ ಪಡಿಸಿಕೊಳ್ಳಬಾರದು. ಹೀಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ಒತ್ತಾಯಿಸಿದರು.

ಯತ್ನಾಳ್ ಹಿಂದೆ ಯಾರಿದ್ದಾರೆ: ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಸಿಎಂ ಯಡಿಯೂರಪ್ಪ ಮತ್ತವರ ಕುಟುಂಬದ ಸದಸ್ಯರ ಭ್ರಷ್ಟಾಚಾರದ ವಿರುದ್ಧ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದು, ಅವರ ಹಿಂದೆ ಯಾರಿದ್ದಾರೆಂಬುದು ಅವರಿಗೆ ಗೊತ್ತು. ಬಿಜೆಪಿಯಲ್ಲಿ ಅಂತರಿಕ ಒಳ ಜಗಳ ಹೆಚ್ಚಾಗಿದ್ದು, ಜನತೆ ಇದರಿಂದ ಬೇಸತ್ತಿದ್ದಾರೆ. ಆದರೂ, ಬಿಜೆಪಿಯವರಿಗೆ ಅಧಿಕಾರವೇ ಮುಖ್ಯವಾಗಿದೆ ಎಂದು ಕೃಷ್ಣ ಬೈರೇಗೌಡ ಟೀಕಿಸಿದರು.

ಹೈಕಮಾಂಡ್‍ಗೂ ಕಿಕ್‍ಬ್ಯಾಕ್: ಭ್ರಷ್ಟಾಚಾರ ನಿಗ್ರಹಕ್ಕೆ ಲೋಕಪಾಲ್ ಮಸೂದೆ ಜಾರಿಗೆ ತರಬೇಕು ಎಂದು ಹೇಳುತ್ತಿದ್ದ ಪ್ರಧಾನಿ ಮೋದಿ, ರಾಜ್ಯಕ್ಕೆ ಬಂದಾಗ ಸಿದ್ದರಾಮಯ್ಯ ಸರಕಾರವನ್ನು ಭ್ರಷ್ಟ ಸರಕಾರ ಎಂದು ದೂರಿದ್ದರು. ಇದೀಗ ಯಡಿಯೂರಪ್ಪ ವಿಚಾರದಲ್ಲಿ ಮಾತ್ರ ಮೌನ ಏಕೇ? ಎಂದು ಪ್ರಶ್ನಿಸಿದ ಕಾಂಗ್ರೆಸ್ ವಕ್ತಾರ ವಿ.ಎಸ್.ಉಗ್ರಪ್ಪ, ಯಡಿಯೂರಪ್ಪನವರ ಭ್ರಷ್ಟಾಚಾರದಲ್ಲಿ ಹೈಕಮಾಂಡ್‍ಗೂ ಪಾಲಿದೆಯೇ? ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News