×
Ad

ದಿಲ್ಲಿಯ ಟ್ರ್ಯಾಕ್ಟರ್ ರ್‍ಯಾಲಿ ಮಾದರಿ ಬೆಂಗಳೂರಿನಲ್ಲಿಯೂ ಹೋರಾಟ ರೂಪಿಸಿ: ರಾಕೇಶ್ ಟಿಕಾಯತ್ ಕರೆ

Update: 2021-03-21 22:26 IST

ಹಾವೇರಿ, ಮಾ.21: ಬಂಡವಾಳಶಾಹಿಗಳು ಕೃಷಿ ಕ್ಷೇತ್ರವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಹುನ್ನಾರದಲ್ಲಿದ್ದು ಅವರಿಗೆ ನೆರವಾಗಲು ಕೇಂದ್ರ ಸರ್ಕಾರ ಕಾನೂನು ಜಾರಿಗೆ ತರುತ್ತಿದ್ದು, ಈ ಬಗ್ಗೆ ರೈತ ಸಮುದಾಯ ಜಾಗೃತರಾಗಬೇಕು ಎಂದು ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯತ್ ಕರೆ ನೀಡಿದರು.

ನಗರ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕಿಸಾಸ್ ಮೋರ್ಚಾ ಹಾಗೂ ಐಕ್ಯ ಹೋರಾಟ ಸಮಿತಿ ಆಶ್ರಯದಲ್ಲಿ ರವಿವಾರ ಏರ್ಪಡಿಸಿದ್ದ ರೈತ ಮಹಾ ಪಂಚಾಯತ್ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಕರಾಳ ಕೃಷಿ ಕಾಯ್ದೆ ಜಾರಿಯಾದರೆ ತಿನ್ನುವ ಅನ್ನ ತಿಜೋರಿಯಲ್ಲಿ ನೋಡಬೇಕಾಗುತ್ತದೆ. ಇದು ಇಲ್ಲಿಗೇ ನಿಲ್ಲಬೇಕಾದರೆ ನಿದ್ರೆಯಲ್ಲಿರುವ ಯುವ ಜನತೆ ಎಚ್ಚೆತ್ತುಕೊಳ್ಳಬೇಕು. ಎರಡು ತಿಂಗಳಿಂದ ದೆಹಲಿಯಲ್ಲಿ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿದ್ದರೂ ಸರ್ಕಾರ ನಮ್ಮೊಂದಿಗೆ ಮಾತುಕತೆಗೆ ಮುಂದಕ್ಕೆ ಬರುತ್ತಿಲ್ಲ. ಆದ್ದರಿಂದ ಈ ಹೋರಾಟ ಎಲ್ಲಿಯವರೆಗೆ ಮುಂದುವರಿಯುತ್ತದೆ ಎನ್ನಲು ಸಾಧ್ಯವಿಲ್ಲ. ನಂಬಿಕೆ ಮತ್ತು ಕೃಷಿ ಪದ್ಧತಿಯನ್ನು ನಂಬಿರುವ ದೇಶದಲ್ಲಿ ಈಗ ಗೊಂದಲದ ಸ್ಥಿತಿ ನಿರ್ಮಾಣವಾಗಿದೆ. ಹೆಸರಿಗೆ ಮಾತ್ರ ಒಂದು ಪಕ್ಷದ ಸರ್ಕಾರವಿದ್ದರೂ ಒಬ್ಬನೇ ವ್ಯಕ್ತಿಯ ಸರ್ವಾಧಿಕಾರಿ ಸರ್ಕಾರವನ್ನು ನಾವಿಂದು ನೋಡುತ್ತಿದ್ದೇವೆ ಎಂದು ಟೀಕಾ ಪ್ರಹಾರ ನಡೆಸಿದರು.

ರೈತರು ತಮ್ಮ ಟ್ರ್ಯಾಕ್ಟರ್ ಗಳನ್ನೇ ಶಸ್ತ್ರದ ರೀತಿಯಲ್ಲಿ ಬಳಸಬೇಕು. ದೆಹಲಿಯಲ್ಲಿ 3 ಲಕ್ಷ ಟ್ರ್ಯಾಕ್ಟರ್ ತಂದು ನಡೆಸಿದ ರ್‍ಯಾಲಿಯ ರೀತಿಯಲ್ಲಿ ಬೆಂಗಳೂರಿನಲ್ಲಿ ಹೋರಾಟ ರೂಪಿಸಬೇಕು. ನಾವು ಬೆಂಬಲ ಬೆಲೆ ಕೇಳಿದರೆ ಅದನ್ನು ಕೊಡಲು ಸರ್ಕಾರ ಸಿದ್ಧವಿಲ್ಲ. ಎಪಿಎಂಸಿ ಕಾಯ್ದೆ ಜಾರಿಯಾದರೆ ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಬಹುದು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಅವರೇ ಹೇಳಿದಂತೆ ಇನ್ನು ಮುಂದೆ ನಾವು ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿಗೆ ನಾವು ಬೆಳೆದ ಕೃಷಿ ಉತ್ಪನ್ನ ತೆಗೆದುಕೊಂಡು ಹೋಗಿ ಮಾರಾಟ ಮಾಡೋಣ. ಅಲ್ಲಿ ಅಧಿಕಾರಿಗಳೇ ಅದನ್ನು ಖರೀದಿಸಲು ಒತ್ತಾಯಿಸಿ ಮುಂದೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಭಾರತೀಯ ಕಿಸಾನ್ ಯುನಿಯನ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯುದ್ಧವೀರಸಿಂಗ್ ಮಾತನಾಡಿ, ಸರ್ಕಾರ ರೈತ ವಿರೋಧಿಯಾಗಿರುವ ಮೂರು ಕಾನೂನುಗಳನ್ನು ಜಾರಿಗೆ ತರುವ ಮೂಲಕ ರೈತರ ವ್ಯವಸ್ಥೆಯನ್ನೇ ಹಾಳು ಮಾಡಲು ಹೊರಟಿದ್ದು, ಸರ್ಕಾರ ಜಾರಿಗೊಳಿಸುವ ಹೊಸ ಕಾನೂನುಗಳ ಭದ್ರ ಬುನಾದಿಯೇ ತಪ್ಪಾಗಿದೆ. ಮೋದಿ ನೇತೃತ್ವದ ಸರ್ಕಾರಕ್ಕೆ ರೈತರ ಏಳಿಗೆ ಬಗೆಗಿನ ಚಿಂತನೆ, ವಿಕಾಸದ ಗುರಿ ಇಲ್ಲ. ಬಂಡವಾಳಶಾಹಿಗಳ ನಡುವೆ ಗುಪ್ತ ಒಪ್ಪಂದ ಮಾಡಿಕೊಂಡು ದೇಶವನ್ನು ಮಾರಾಟ ಮಾಡಲು ಹೊರಟಿದೆ. 2012ರಲ್ಲಿ ಮಾಜಿ ಕೇಂದ್ರ ಸಚಿವೆ ದಿ.ಸುಸ್ಮಾ ಸ್ವರಾಜ್ ಅವರು ಸದ್ಯ ಸರ್ಕಾರ ಜಾರಿಗೊಳಿಸಲು ಹೊರಟಿರುವ ಎಪಿಎಂಸಿ ತಿದ್ದುಪಡಿ ಕಾನೂನುನ್ನು ಬಲವಾಗಿ ವಿರೋಧಿಸಿದ್ದರು. ಮಾಜಿ ಸಚಿವ ಅರುಣ ಜೇಟ್ಲಿ ಅವರು ಗುತ್ತಿಗೆ ಕೃಷಿ ಪದ್ಧತಿಯಿಂದ ಕೃಷಿ ಕ್ಷೇತ್ರ ಹಾಳಾಗಲು ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು ಎಂದರು.

ರಾಷ್ಟ್ರದಲ್ಲಿಂದು ಧರ್ಮ, ಜಾತಿಯ ಅಫೀಮನ್ನು ಜನರಲ್ಲಿ ತುಂಬಲಾಗುತ್ತಿದೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ರಾಮನ ಹೆಸರಿನಲ್ಲಿ ಇಂದು ಒಂದು ಮುಷ್ಠಿ ಅಕ್ಕಿ ಕೇಳಲಾಗುತ್ತಿದೆ. ಆದರೆ ರಾಮ ರೈತನ ಮನ, ಮನೆ ಹಾಗೂ ಕೃಷಿ ಭೂಮಿಯಲ್ಲಿದ್ದಾನೆ. ಇದನ್ನು ಆಡಳಿತ ನಡೆಸುವವರು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಕಳೆದ ಮೂರು ತಿಂಗಳಿನಿಂದ ದೇಶದ ರಾಜಧಾನಿ ದೆಹಲಿಯಲ್ಲಿ ಮೂರು ಕಾನೂನುಗಳನ್ನು ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ 12 ಬಾರಿ ಮಾತುಕತೆಗೆ ಸಂಘಟನೆಯವರನ್ನು ಕರೆದಿದ್ದಾರೆ. ಈ ಕಾಲಕ್ಕೆ ರೈತ ವಿರೋಧಿ ಕಾನೂನನ್ನು ಹಿಂಪಡೆಯಲು ಆಗ್ರಹಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ತನ್ನ ಮೊಂಡುತನವನ್ನು ಬಿಟ್ಟಿಲ್ಲ ಎಂದರು.

ಸಮಾವೇಶದಲ್ಲಿ ರಾಜ್ಯ ರೈತ ಮುಖಂಡರಾದ ಕೆ.ಟಿ.ಗಂಗಾಧರ, ನಂದಿನಿ ಜಯರಾಮ, ಶಿದ್ಧನಗೌಡ ಪಾಟೀಲ, ಚುಕ್ಕಿ ನಂಜುಂಡಸ್ವಾಮಿ, ಶಂಕರಗೌಡ ಪಾಟೀ, ಶಶಿಕಾಂತ ಪಡಸಲಗಿ, ಕುರಬುರ ಶಾಂತಕುಮಾರ, ಕೋಡಿಹಳ್ಳಿ ಚಂದ್ರಶೇಖರ, ಚೂನಪ್ಪ ಪೂಜಾರ, ನಂದಿನಿ ಜಯರಾಮ, ಎಚ್.ಆರ್.ಬಸವರಾಜಪ್ಪ, ಪ್ರಶಾಂತ ನಾಯಕ, ವಿಜಯಕುಮಾರ, ಹರಿಯಾಣದ ಬೆಂಪಿ ಪೈಲ್ವಾನ್, ವೀರೇಂದ್ರ ನಲವಾಗ, ರಾಮಣ್ಣ ಕೆಂಚಳ್ಳೇರ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News