ಚಿಕ್ಕಮಗಳೂರು: ರಾಜ್ಯಮಟ್ಟದ ಪಂಜಾ ಕುಸ್ತಿ; ಅಂಗವೈಕಲ್ಯ ಮೀರಿ ತೋಳ್ಬಲ ಪ್ರದರ್ಶಿಸಿದ ಸ್ಪರ್ಧಿಗಳು

Update: 2021-03-21 17:39 GMT

ಚಿಕ್ಕಮಗಳೂರು, ಮಾ.21: ಕಾಫಿನಾಡಿನಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಪಂಜ ಕುಸ್ತಿ ಪಂದ್ಯಾವಳಿಯಲ್ಲಿ ಅಂಗವಿಕಲರು, ದೈಹಿಕವಾಗಿ ನ್ಯೂನತೆ ಹೊಂದಿದ್ದವರು, ದೃಢಕಾಯದ ಪುರುಷರು, ಮಹಿಳೆಯರು ಸೇರಿದಂತೆ 18 ವರ್ಷ ಮೇಲ್ಪಟ್ಟ ಯುವಕ, ಯುವತಿಯರು ತಮ್ಮ ತೋಳ್ಬಲದ ಸತ್ವ ಪರೀಕ್ಷೆ ನಡೆಸಿದರು.

ರವಿವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ಚಿಕ್ಕಮಗಳೂರು ಜಿಲ್ಲಾ ಪಂಜಕುಸ್ತಿ ಸಂಘ ಆಯೋಜಿಸಿದ್ದ 8ನೇ ವರ್ಷದ ರಾಜ್ಯಮಟ್ಟದ ಪಂಜಕುಸ್ತಿ ಹಾಗೂ ಜಿಲ್ಲಾಮಟ್ಟದ ದೇಹದಾರ್ಡ್ಯ ಸ್ಫರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸ್ಪರ್ಧಿಗಳು ತಮ್ಮ ತೋಳ್ಬಲದೊಂದಿಗೆ ದೈಹಿಕ ಸಾಮರ್ಥ್ಯವನ್ನು ಪ್ರದರ್ಶಿಸಿದರು.

ಪಂಜಕುಸ್ತಿಯಲ್ಲಿ ಹಿರಿಯ ಪುರಷರ ವಿಭಾಗದಲ್ಲಿ 55ರಿಂದ 110 ಕೆಜಿ ದೇಹ ತೂಕ ಹೊಂದಿದವರ ವಿಭಾಗದಲ್ಲಿ 11 ಗುಂಪು ಸ್ಫರ್ಧಿಗಳು ಪಾಲ್ಗೊಂಡಿದ್ದರು. ಹಿರಿಯ ಮಹಿಳಾ ವಿಭಾಗದಲ್ಲಿ 50, 80 ಕೆ.ಜಿ. ವಿಭಾಗದಲ್ಲಿ 7 ಗುಂಪು ಸ್ಫರ್ಧಿಸಿದ್ದರು. 18 ವರ್ಷ ಮೇಲ್ಪಟ್ಟವರ ಪುರುಷರ ವಿಭಾಗದಲ್ಲಿ 45ರಿಂದ 80ಕೆ.ಜಿ. ದೇಹತೂಕ ಒಳಗೊಂಡ 7 ತಂಡಗಳು ಹಾಗೂ ಮಹಿಳಾ ವಿಭಾಗದಲ್ಲಿ 45 ರಿಂದ 80 ಕೆ.ಜಿ. ದೇಹ ತೂಕವುಳ್ಳ 8 ಗುಂಪುಗಳು ಪಾಲ್ಗೊಂಡಿದ್ದವು. 21ವರ್ಷ ಮೇಲ್ಪಟ್ಟ ಯುವಕರ ಬಲಗೈ ಮತ್ತು ಎಡಗೈ ವಿಭಾಗದಲ್ಲಿ 55 ರಿಂದ 90 ಕೆ.ಜಿ ದೇಹತೂಕ ಹಾಗೂ ಮಹಿಳಾ ವಿಭಾದಲ್ಲಿ 50ರಿಂದ 70ಕೆ.ಜಿ ದೇಹ ತೂಕವುಳ್ಳ ಸ್ಫರ್ಧಿಗಳು ಪಾಲ್ಗೊಂಡಿದ್ದರು.

ರಾಜ್ಯಮಟ್ಟದ ಪಂಜಕುಸ್ತಿ ಪಂದ್ಯಾವಳಿಗೆ ರಾಜ್ಯದ ಬೆಳಗಾವಿ, ದಾವಣಗೆರೆ, ಹಾಸನ, ಉತ್ತರ ಕನ್ನಡ, ಉಡುಪಿ, ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ 250ಕ್ಕೂ ಹೆಚ್ಚು ಸ್ಫರ್ಧಿಗಳು ಭಾಗವಹಿಸಿದ್ದರು. ಇನ್ನು ಅಂಗವಿಕಲರ ವಿಭಾಗದ ಪಂಜಕುಸ್ತಿಗೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 60ಕ್ಕೂ ಹೆಚ್ಚು ಸ್ಫರ್ಧಿಗಳು ಪಾಲ್ಗೊಂಡಿದ್ದರು.

ಅಂಗವಿಕಲರ ವಿಭಾಗದಲ್ಲಿ ನಡೆದ ಪಂಜಕುಸ್ತಿ ಸ್ಪರ್ಧೆಯಲ್ಲಿ ವೀಲ್ ಚೇರ್ ಗಳಲ್ಲಿ ಕುಳಿತು ಕಣಕ್ಕಿಳಿದ ಪುರುಷ, ಮಹಿಳಾ ಸ್ಪರ್ಧೆಗಳು ತಾವು ಅಂಗವಿಕಲರೆಂಬುದನ್ನು ಮರೆತು ತಮ್ಮ ಶಕ್ತಿ ಪ್ರದರ್ಶಿಸಿದರು. ಮೇಜಿನ ಮೇಲೆ ಕೈಕೈ ಮಿಲಾಯಿಸಿ ಮುಷ್ಟಿ ಹಿಡಿದು ಶಕ್ತಿ ಪ್ರದರ್ಶನಕ್ಕೆ ಮುಂದಾಗುತ್ತಿದ್ದಂತೆ ನೆರೆದಿದ್ದ ಪಂಜಕುಸ್ತಿ ಪ್ರೇಮಿಗಳು ಶಿಳ್ಳೆ, ಚಪ್ಪಾಳೆ ಮೂಲಕ ಸ್ಪರ್ಧಿಗಳನ್ನು ಹುರಿದುಂಬಿಸಿದರು. ವಿವಿಧ ವಿಭಾಗದಲ್ಲಿ ದೈತ್ಯದೇಹ ಹಾಗೂ ದೈತ್ಯ ಬಾಹುಬಲವನ್ನು ಹೊಂದಿದ್ದ ಮಹಿಳೆಯರು ತಮ್ಮ ವಯಸ್ಸು ಮತ್ತು ದೇಹತೂಕಕ್ಕೆ ಸರಿ ಸಮಾನವಾದವರೊಂದಿಗೆ ಸೆಣಸಾಡಿದರು. ಪುರುಷರು ತಮ್ಮ ವಯೋಮಾನ ತೂಕಕ್ಕೆ ಸರಿಸಾಟಿಯಾಗುವ ಎದುರಾಳಿಗಳೊಂದಿಗೆ ತೋಳ್ಬಲ ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ವಕೀಲ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್, ಕಾಫಿ ಉದ್ಯಮಿ ಗೋಪಾಲಕೃಷ್ಣ, ಪ್ರಸನ್ನಕುಮಾರ ಶೆಟ್ಟಿ, ಮೇಸ್ಕಾಂ ಇಲಾಖೆಯ ನವೀನಚಂದ್ರ, ವಿರೂಪಾಕ್ಷಪ್ಪ, ಕಿಶನ್ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪಂದ್ಯಾವಳೀ ಉದ್ಘಾಟಿಸಿ ಮಾತನಾಡಿದ ಇಂಜಿನಿಯರ್ ಬಸವರಾಜ್, ಪಂಜಕುಸ್ತಿ ಅತ್ಯಂತ ಪುರಾತನ ಕಲೆಗಳಲ್ಲಿ ಒಂದಾಗಿದ್ದು, ಇಂತಹ ಕಲೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಜಿಲ್ಲಾ ಪಂಜಕುಸ್ತಿ ಸಂಘ ಮಾಡುತ್ತಿರುವುದು ಶ್ಲಾಘನೀಯ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಸ್ಫರ್ಧಿಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಪಂದ್ಯದಲ್ಲಿ ಸೋಲು ಗೆಲುವು ಸಾಮಾನ್ಯ, ಪಂದ್ಯದಲ್ಲಿ ಪಾಲ್ಗೊಳ್ಳುವುದೇ ಮುಖ್ಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News