×
Ad

ಬಂಡವಾಳಶಾಹಿಗಳ ಜೊತೆ ಒಪ್ಪಂದ ಮಾಡಿ ದೇಶ ಮಾರಾಟ ಮಾಡಲು ಹೊರಟ ಸರ್ಕಾರ: ಯುದ್ಧವೀರ್ ಸಿಂಗ್

Update: 2021-03-21 23:18 IST

ಹಾವೇರಿ, ಮಾ.21: ಮೋದಿ ನೇತೃತ್ವದ ಸರ್ಕಾರಕ್ಕೆ ರೈತರ ಏಳಿಗೆ ಬಗೆಗಿನ ಚಿಂತನೆ, ವಿಕಾಸದ ಗುರಿ ಇಲ್ಲ. ಬಂಡವಾಳಶಾಹಿಗಳ ನಡುವೆ ಗುಪ್ತ ಒಪ್ಪಂದ ಮಾಡಿಕೊಂಡು ದೇಶವನ್ನು ಮಾರಾಟ ಮಾಡಲು ಹೊರಟಿದೆ ಎಂದು ಭಾರತೀಯ ಕಿಸಾನ್ ಯುನಿಯನ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯುದ್ಧವೀರ್ ಸಿಂಗ್ ಹೇಳಿದರು.

ನಗರ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕಿಸಾಸ್ ಮೋರ್ಚಾ ಹಾಗೂ ಐಕ್ಯ ಹೋರಾಟ ಸಮಿತಿ ಆಶ್ರಯದಲ್ಲಿ ರವಿವಾರ ಏರ್ಪಡಿಸಿದ್ದ ರೈತ ಮಹಾ ಪಂಚಾಯತ್ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ರೈತ ವಿರೋಧಿಯಾಗಿರುವ ಮೂರು ಕಾನೂನುಗಳನ್ನು ಜಾರಿಗೆ ತರುವ ಮೂಲಕ ರೈತರ ವ್ಯವಸ್ಥೆಯನ್ನೇ ಹಾಳು ಮಾಡಲು ಹೊರಟಿದೆ. ರಾಷ್ಟ್ರದಲ್ಲಿ ಸಧ್ಯ ಈ ವಿಚಾರದಲ್ಲಿ ದೊಡ್ಡ ಯುದ್ಧ ಆರಂಭಗೊಂಡಿದೆ. ಈ ಯುದ್ಧ ಕೇವಲ ಉತ್ತರಕ್ಕೆ ಸಿಮೀತವಾಗಿದೆ ದಕ್ಷಿಣಕ್ಕೂ ಪಸರಿಸುತ್ತಿದೆ. ಸರ್ಕಾರ ಜಾರಿಗೊಳಿಸುವ ಹೊಸ ಕಾನೂನುಗಳ ಭದ್ರ ಬುನಾದಿಯೇ ತಪ್ಪಾಗಿದೆ. ಈ ಕರಾಳ ಶಾಸನವನ್ನು ಕೊರೋನ ಮಹಾಮಾರಿಯಿಂದ ದೇಶ ಸ್ತಬ್ಧವಾಗಿರುವ ಸಮಯದಲ್ಲಿ ಜಾರಿಗೆ ತಂದಿದೆ. ಇದು ಬಂಡವಾಳಶಾಹಿಗಳ ಪರವಾದ ಕಾನೂನು ಲೋಕಸಭೆ, ರಾಜ್ಯಸಭೆಯಲ್ಲಿ ಸಮರ್ಪಕ ಚರ್ಚೆ ನಡೆಯದೇ ಜಾರಿಗೆ ತರಲು ಮುಂದಾಗಿದೆ ಎಂದರು.

ಕಾನೂನು ಜಾರಿಗೊಳಿಸುವ ಪೂರ್ವದಲ್ಲಿ ಸ್ಟ್ಯಾಂಡಿಂಗ್ ಕಮಿಟಿ ವಿಮರ್ಷೆ ಮಾಡಿ ತನ್ನ ಅಭಿಪ್ರಾಯವನ್ನು ತಿಳಿಸಬೇಕಿತ್ತು. ಸಾಮಾನ್ಯವಾಗಿ ರಾಷ್ಟ್ರಕ್ಕೆ ಅಪಾಯವಿರುವ ಸಂದರ್ಭದಲ್ಲಿ ಸುರ್ಗೀವಾಜ್ಞೆ ಜಾರಿಗೊಳಿಸಲಾಗುತ್ತೆ. ಆದರೆ ಮೋದಿ ಸರ್ಕಾರ ರೈತರನ್ನು ಬಗ್ಗು ಬಡೆಯಲು ಸುರ್ಗೀವಾಜ್ಞೆ ಜಾರಿಗೆ ತಂದಿದೆ ಎಂದರು.

ಅಂಬಾನಿ, ಆದಾನಿ ಅಂತಹ ಬಂಡವಾಳಶಾಹಿಗಳು ಕೃಷಿ ಕ್ಷೇತ್ರಕ್ಕೆ ಲಗ್ಗೆ ಇಡಲು ಮುಂದಿದ್ದಾರೆ. ಭವಿಷ್ಯದ ದಿನಗಳಲ್ಲಿ ಪಾನ್‍ಕಾರ್ಡ್ ಹೊಂದಿದವರೆಲ್ಲ ವ್ಯಾಪಾರಿಗಳಾಗಿ ರೈತರಿಗೆ ಮೋಸ ಮಾಡುವ ಸಾಧ್ಯತೆ ಇದೆ. ಮಧ್ಯಪ್ರದೇಶದಲ್ಲಿ ಓರ್ವ ವ್ಯಕ್ತಿ 2 ಕೋಟಿ ಹಣವನ್ನು ವ್ಯಾಪಾರದ ನೆಪದಲ್ಲಿ ಲೂಟಿ ಹೊಡೆದಿದ್ದಾನೆ ಎಂದರು. 

ರಾಷ್ಟ್ರದಲ್ಲಿಂದು ಧರ್ಮ, ಜಾತಿಯ ಅಫೀಮನ್ನು ಜನರಲ್ಲಿ ತುಂಬಲಾಗುತ್ತಿದೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ರಾಮನ ಹೆಸರಿನಲ್ಲಿ ಇಂದು ಒಂದು ಮುಷ್ಠಿ ಅಕ್ಕಿ ಕೇಳಾಗುತ್ತಿದೆ. ಆದರೆ ರಾಮ ರೈತನ ಮನ, ಮನೆ ಹಾಗೂ ಕೃಷಿ ಭೂಮಿಯಲ್ಲಿದ್ದಾನೆ. ಇದನ್ನು ಆಡಳಿತ ನಡೆಸುವವರು ತಿಳಿದುಕೊಳ್ಳಬೇಕು ಎಂದು ಹೇಳಿದರು.

ರೈತ ಸಂಘಟನೆ ಮುಖಂಡ ಕೆ.ಟಿ.ಗಂಗಾಧರ ಮಾತನಾಡಿ, ರಾಜಕಾರಣಿಗಳ ಹಂಗಿನ ರಾಜಕೀಯ ಘೋಷಣೆಗಳು ರೈತರಿಗೆ ಬೇಡವಾಗಿದ್ದು, ಸೂಕ್ತ ಬೆಲೆ ಕೊಡಿಸುವ ಕಾನೂನು ಜಾರಿಗೆ ತರುವ ಅಗತ್ಯತೆ ಇದೆ. ನಿಮ್ಮ ಸಾಲ ಮನ್ನಾ ರೈತರಿಗೆ ಅಗತ್ಯತೆ ಇಲ್ಲ. ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಕೊಡಿ, ನಿಮ್ಮ ಸಾಲವನ್ನು ಮರುಪಾವತಿ ಮಾಡುವ ಹೊಣೆ ರೈತನದ್ದಾಗಿದೆ. ಗುತ್ತಿಗೆ ಕೃಷಿ ಪದ್ಧತಿ, ಅಗತ್ಯ ವಸ್ತುಗಳ ನಿಯಂತ್ರಣ ಕಾನೂನು ಇವುಗಳೆಲ್ಲ ರೈತರಿಗೆ ಮಾರಕವಾಗಿವೆ. ರೈತ ಹೋರಾಟ ಕುರಿತಾಗಿ ಪಂಡಿತಾರಾಧ್ಯ ಶ್ರೀಗಳು ಮಾತ್ರ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಆದರೆ ಇನ್ನುಳಿದ ಸ್ವಾಮಿಗಳು ಮೌನ ವಹಿಸಿರುವುದು ರೈತರ ಸಂಶಯಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಮಠಗಳು ಯಾರಪರ ಎಂಬುದರ ಬಗ್ಗೆ ರೈತರು ಚಿಂತನೆ ಮಾಡಬೇಕಾಗುತ್ತದೆ ಎಂದರು.

ಕೇಂದ್ರ ಮಾಜಿ ಸಚಿವ, ರೈತ ಮುಖಂಡ ಬಾಬಾಗೌಡ ಪಾಟೀಲ ಮಾತನಾಡಿ, ರೈತರು ಬೇಡುವ ಕೈಗಳನ್ನು ಹೊಂದಿಲ್ಲ, ದೇಶಕ್ಕೆ ನೀಡುವ ಕೈಗಳನ್ನು ಹೊಂದಿವೆ. ಕೇವಲ ರೈತರ ಹೆಸರಿನಿಂದ ಅಧಿಕಾರಕ್ಕೆ ಬರುವುದು ತರವಲ್ಲ. ರೈತರ ಏಳಗೆ ಹಿನ್ನೆಲೆಯಲ್ಲಿ ದೇಶದ ಅಭಿವೃದ್ಧಿ ಇದೆ ಎಂಬುದನ್ನು ಸರ್ಕಾರ ನಡೆಸುವವರು ಅರ್ಥ ಮಾಡಿಕೊಳ್ಳಬೇಕು ಎಂದರು.

ರೈತ ಕುಲಕ್ಕೆ ಧಕ್ಕೆ ಬಂದರೆ ರೈತ ಸೈನಿಕನಾಗುತ್ತಾನೆ. ಮನೆಯಲ್ಲಿ ಹೈನುಗಾರಿಕೆ ಮಾಡಿ ಮಕ್ಕಳಿಗೆ ಹಾಲುಣಿಸಿ ದೊಡ್ಡವರನ್ನಾಗಿ ಮಾಡಿ ಹರಸುವ ತಾಯಿಯೇ ಭಾರತ ಮಾತೆ ಎಂಬುದನ್ನು ಅರಿಯಬೇಕು. ಆಡಳಿತ ನಡೆಸುವವನ ನಕಲಿ ಮಾತು, ವೇಷಧಾರಿಗಳ ವೇಷ, ಮಾತಿನ ಮೋಡಿ ಮುಂದಿನ ದಿನಗಳಲ್ಲಿ ನಡೆಯುವುದಿಲ್ಲ. ಅಧಿಕಾರಕ್ಕೆ ಯಾರಿಂದ ಬಂದಿದ್ದೀರಿ ಎಂಬುದನ್ನು ಅರಿಯಬೇಕು. ತಾವು ಅಧಿಕಾರದಲ್ಲಿದ್ದಾಗ ಆಚಾರ್ಯ ಕಮಿಟಿ ವರದಿಯನ್ನು ಸಿದ್ಧ ಪಡಿಸಲಾಗಿತ್ತು. ಆ ವರದಿ ಎಲ್ಲಿ ಬಿದ್ದಿದೆ ಎಂಬುದನ್ನು ಹುಡುಕಿ ಎಂದು ಕೇಂದ್ರ ಸರ್ಕಾರಕ್ಕೆ ತಿವಿದರು. 

ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಸರ್ಕಾರಗಳು ಜೀವಂತವಿಲ್ಲ. ರೈತನ ಆಶಯವನ್ನು ಹುಸಿಗೊಳಿಸಿದ್ದು, ರೈತ ಸಾಲದ ಸುಳಿಯಲ್ಲಿ ಸಿಕ್ಕು ನರಳುವಂತೆ ಮಾಡಿವೆ. ದೇಶವನ್ನು ಸಹ ಸಾಲದ ಶೂಲಕ್ಕೆ ಸಿಲುಕುವಂತೆ ಮಾಡಿದ ಶ್ರೇಯಸ್ಸು ಇಂದಿನ ಕೇಂದ್ರ ಸರ್ಕಾಕ್ಕೆ ಇದೆ ಎಂದರು. 

ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಸರ್ಕಾರಗಳು ಅನ್ನದಾನನ್ನು ನಿರ್ಲಕ್ಷಿಸುತ್ತಿವೆ. ಸುಳ್ಳು ಹೇಳಿಕೆ ನೀಡಿ ರೈತರನ್ನು ಮರಳು ಮಾಡುತ್ತಿವೆ. ಮೋದಿ ಅವರು ಕೇವಲ ವಿದೇಶ ಯಾತ್ರೆ ಮಾಡುತ್ತ ರಾಷ್ಟ್ರದ ರೈತರನ್ನೇ ಮರೆತಿದ್ದಾರೆ ಎಂದರು.

ರೈತ ಮುಖಂಡರಾದ ಶಶಿಕಾಂತ ಪಡಸಲಗಿ, ಕುರಬೂರ ಶಾಂತಕುಮಾರ, ಕೋಡಿಹಳ್ಳಿ ಚಂದ್ರಶೇಖರ, ಚೂನಪ್ಪ ಪೂಜಾರ, ನಂದಿನಿ ಜಯರಾಮ, ಎಚ್.ಆರ್.ಬಸವರಾಜಪ್ಪ, ಪ್ರಶಾಂತ ನಾಯಕ, ವಿಜಯಕುಮಾರ, ಹರಿಯಾಣದ ಬೆಂಪಿ ಪೈಲ್ವಾನ್, ವೀರೇಂದ್ರ ನಲವಾಗ ಮಾಲತೇಶ ಪೂಜಾರ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News