ಓ ಮೆಣಸೇ...

Update: 2021-03-21 19:30 GMT

ರಾಜ್ಯದ ಜನರು ಬಯಸಿದರೆ ಮತ್ತೆ ಮುಖ್ಯಮಂತ್ರಿಯಾಗುವೆ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಆದರೆ ಕಾಂಗ್ರೆಸ್‌ನೋರು ಬಯಸುವುದು ಕಷ್ಟ.


ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಅವಸರ ಬೇಡ, ತಾಳ್ಮೆಯಿಂದ ಕಾದರೆ ಸತ್ಯ ಹೊರಬರುತ್ತದೆ - ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ
ತಾಳ್ಮೆಯಿಂದ ಕಾದರೆ ಜನರಿಗೆ ಮರೆತು ಹೋಗುತ್ತದೆ ಎಂದು ಸಲಹೆ ನೀಡುತ್ತಿರಬೇಕು.


ಸುದ್ದಿ ಮಾಧ್ಯಮಗಳಲ್ಲಿ ಕುಳಿತ ಟಿಆರ್‌ಪಿ ಬಾಕರು ನನ್ನನ್ನು ಟಿವಿ ಪರದೆ ಮೇಲೆ ಅಪರಾಧಿಯನ್ನಾಗಿಸಿದರು - ದಿಶಾರವಿ, ಸಾಮಾಜಿಕ ಕಾರ್ಯಕರ್ತೆ
ಅಪರಾಧಿಗಳೆಲ್ಲ ಸುದ್ದಿ ಮಾಧ್ಯಮಗಳಲ್ಲಿ ಮುಖ್ಯಸ್ಥರಾಗಿರುವವರೆಗೆ ಇದು ನಡೆಯುತ್ತಲೇ ಇರುತ್ತದೆ.


ಸರಕಾರದಿಂದಲೇ ಚಿನ್ನಾಭರಣ ಮಳಿಗೆ ತೆರೆಯುವ ಕುರಿತು ಚಿಂತನೆ ನಡೆಯುತ್ತಿದೆ - ಮುರುಗೇಶ್ ನಿರಾಣಿ, ಸಚಿವ
ಚಿನ್ನದ ಅಸಲಿಯತ್ತಿನ ಕುರಿತಂತೆ ಜನರಿಗೆ ನಂಬಿಕೆ ಬರುವುದು ಕಷ್ಟ.


ದೇವರು ಬಂದು ಸಾಕ್ಷಾತ್ ನಡೆದಾಡಿದ ವಿಶ್ವದ ಏಕೈಕ ದೇಶ ಭಾರತ - ಡಾ.ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ನಾಯಕA
ದೇವರ ಜೊತೆಗೆ ದೆವ್ವಗಳು ಕೂಡ.


ನಾಡಗೀತೆ ಸುದೀರ್ಘವಾಗಿದ್ದು ಅದನ್ನು ಹಾಡುವ ಅವಧಿ ಕಡಿತಕ್ಕೆ ಚಿಂತನೆ ಮಾಡಲಾಗುತ್ತಿದೆ - ಅರವಿಂದ ಲಿಂಬಾವಳಿ, ಸಚಿವ
ಎಲ್ಲಾ ವಲಯಗಳಲ್ಲೂ ಕಡಿತ ಆಯಿತು. ಈಗ ಕಡಿಯುವುದಕ್ಕಿರುವುದು ನಾಡಗೀತೆ ಮಾತ್ರ.


ಮಾಜಿ ಸಚಿವರ ಸಿಡಿ ಪ್ರಕರಣದಲ್ಲಿ ಯಾರನ್ನು ಯಾರೂ ಸಿಲುಕಿಸಲು ಸಾಧ್ಯವಿಲ್ಲ -ಸತೀಶ್ ಜಾರಕಿಹೊಳಿ ,ಕೆಪಿಸಿಸಿ ಕಾರ್ಯಾಧ್ಯಕ್ಷ
ಹೌದು, ಇದು ಅವರೇ ಹೋಗಿ ಸಿಲುಕಿಕೊಂಡಿರುವ ಪ್ರಕರಣ.


ನಾನು ಬೇರೆ ಪಕ್ಷದಲ್ಲಿದ್ದರೂ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರನ್ನು ಆರಾಧಿಸುತ್ತೇನೆ, ಯಾಕೆಂದರೆ ಅವರು ಬದ್ಧತೆಗೆ ಅಂಟಿಕೊಂಡಿರುವ ಶ್ರೇಷ್ಠ ರಾಜಕಾರಣಿ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಆದುದರಿಂದಲೇ ಅವರು ಮೂರು ಬಾರಿ ಸೋಲಬೇಕಾಯಿತು. ನಿಮ್ಮಂತೆ ಅಂಟಿಕೊಳ್ಳದೇ ಇದ್ದರೆ ಅವರಿಗೆ ಈ ಗತಿ ಬರುತ್ತಿರಲಿಲ್ಲವೇನೋ?


ನಾನು ಮುಜರಾಯಿ ಸಚಿವನಾದ ಮೇಲೆ ದೈವಸ್ಥಾನ, ದೇವಸ್ಥಾನಗಳಲ್ಲಿ ತಾರತಮ್ಯ ದೂರವಾಗಿದೆ - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಪೇಜಾವರಶ್ರೀಗಳ ಪತ್ರಿಕಾ ಹೇಳಿಕೆಗಳೇ ಇದಕ್ಕೆ ಸಾಕ್ಷಿ.


ಪ್ರಧಾನಿ ಮೋದಿಯ ಸ್ವಾಭಿಮಾನಿ, ಸ್ವಾವಲಂಬಿ ಭಾರತಕ್ಕೆ ಯುವ ಶಕ್ತಿಯ ಅಗತ್ಯವಿದೆ - ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ
ಬಹುಶಃ ಐಟಿ ಸೆಲ್‌ನಲ್ಲಿ ಫೇಕ್ ಐಡಿ ತೆರೆದು ಕಮೆಂಟ್ ಹಾಕುವುದಕ್ಕೆ ಇರಬಹುದು.


ರಾಜ್ಯದಲ್ಲಿ ಲಾಕ್‌ಡೌನ್ ಬೇಡವೆಂದಾದರೆ ಕೊರೋನ ನಿಯಮಗಳನ್ನು ಜನರು ಕಟ್ಟುನಿಟ್ಟಾಗಿ ಪಾಲಿಸಬೇಕು - ಯಡಿಯೂರಪ್ಪ, ಮುಖ್ಯಮಂತ್ರಿ
ಜನರಿಗೆ ಬಿಜೆಪಿಯೇ ಬೇಡವೆಂದಾದರೆ ಏನು ಮಾಡಬೇಕು?


ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ತಾತ್ಕಾಲಿಕ, ಕ್ರಮೇಣ ಬೆಲೆಗಳು ಇಳಿಕೆಯಾಗಲಿವೆ - ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ
ಈಗ ಸಹಿಸಿಕೊಳ್ಳಿ. ಮುಂದೆ ಅಭ್ಯಾಸವಾಗುತ್ತದೆ ಎನ್ನುತ್ತಿರಬೇಕು.


ಸಾರ್ವಜನಿಕ ಜೀವನದಲ್ಲಿರುವವರಿಗೆ ಮನಲಜ್ಜೆ ಮತ್ತು ಜನಲಜ್ಜೆ ಇರಬೇಕು - ಸಿ.ಟಿ.ರವಿ, ಶಾಸಕ
ಅದಿಲ್ಲ ಎಂದ ಮೇಲೆ ಸಾರ್ವಜನಿಕ ಜೀವನದಲ್ಲಿ ಯಾಕೆ ಇದ್ದೀರಿ?


ಜನಾಂಗೀಯ ನಿಂದನೆಯನ್ನು ಭಾರತ ಎಂದಿಗೂ ಸಹಿಸುವುದಿಲ್ಲ - ಎಸ್.ಜೈಶಂಕರ್, ಕೇಂದ್ರ ಸಚಿವ
ಜನಾಂಗೀಯ ನಿಂದನೆ ಮಾಡುವ ಕಾಪಿರೈಟ್ ಭಾರತದ ಕೈಯಲ್ಲಿದೆಯಂತೆ.


ಮತ್ತೆ ಕಾಂಗ್ರೆಸ್ ಜೊತೆ ಮೈತ್ರಿ ಸಂದರ್ಭ ಎದುರಾದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ -ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಅಂದರೆ ಈ ಬಾರಿ ಬಿಜೆಪಿ ಜೊತೆ ಮೈತ್ರಿಗೆ ಸಿದ್ಧತೆ ನಡೆಸುತ್ತಿದ್ದೀರಿ ಎಂದಾಯಿತು.


ತ್ರಿವಳಿ ತಲಾಖ್‌ನ್ನು ನಿಷೇಧಿಸುವ ಧೈರ್ಯ ಹಿಂದಿನ ಯಾವ ಸರಕಾರಕ್ಕೂ ಇರಲಿಲ್ಲ - ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ
ತ್ರಿವಳಿ ತಲಾಖ್ ಹೇಳದೆಯೇ ಹೆಂಡತಿಯನ್ನು ತೊರೆಯುವ ಪ್ರಧಾನಿಯ ಧೈರ್ಯದ ಮುಂದೆ ಇದು ಏನೇನೂ ಅಲ್ಲ ಬಿಡಿ.


ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನ ವಿರೋಧಿ ನೀತಿಗಳಿಂದ ಯುವಜನತೆ ಪ್ರಾದೇಶಿಕ ಪಕ್ಷವನ್ನು ಸೇರುತ್ತಿದ್ದಾರೆ -ವೈ.ಎಸ್.ವಿ.ದತ್ತಾ, ಮಾಜಿ ಶಾಸಕ
ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವೇ ರಾಷ್ಟ್ರೀಯ ಪಕ್ಷದ ಜೊತೆಗೆ ಸೇರಿಕೊಂಡಿದೆ.


ಯಾವುದೇ ಕಾರಣಕ್ಕೂ ಭಾರತೀಯ ರೈಲ್ವೆಯನ್ನು ಖಾಸಗೀಕರಣ ಗೊಳಿಸುವುದಿಲ್ಲ - ಪಿಯುಷ್ ಗೋಯೆಲ್, ಕೇಂದ್ರ ಸಚಿವ
ಕಾರಣಗಳಿಲ್ಲದೆಯೇ ಅದನ್ನು ಖಾಸಗೀಕರಣಗೊಳಿಸುವ ಉದ್ದೇಶ ಇರಬೇಕು.


ಬಿಜೆಪಿ ಆಡಳಿತದ ಉತ್ತರಪ್ರದೇಶದಲ್ಲಿ ಈಗ ಶಾಂತಿ ನೆಲೆಸಿದೆ - ರಾಜನಾಥ್ ಸಿಂಗ್, ಕೇಂದ್ರ ಸಚಿವ
ಸ್ಮಶಾನದಲ್ಲಿರುವ ಶಾಂತಿಯಿರಬೇಕು.


ಯಡಿಯೂರಪ್ಪ ಸರಕಾರ ‘ಲಿವಿಂಗ್ ಟುಗೆದರ್’ನಲ್ಲಿದ್ದಾಗ ಜನಿಸಿದ ಅನೈತಿಕ ಶಿಶು - ಎಸ್.ಆರ್.ಪಾಟೀಲ್, ವಿ.ಪರಿಷತ್ ವಿಪಕ್ಷ ನಾಯಕ
ಅನೈತಿಕ ಸಿಡಿಗಳೇ ಅದನ್ನು ಹೇಳುತ್ತಿವೆ.


ಸಿಡಿ ಇದೆ ಎಂದಲ್ಲ, ತೇಜೋವಧೆ ತಪ್ಪಿಸಲು ಕೋರ್ಟ್ ಮೊರೆ ಹೋಗಿದ್ದೇವೆ - ಎಸ್.ಟಿ.ಸೋಮಶೇಖರ್ , ಸಚಿವ
ಸಿಡಿಯಲ್ಲಿ ನೀವು ಮಾಡಿರುವ ಒಳ್ಳೆಯ ಕೆಲಸಗಳಿದ್ದರೆ, ತೇಜೋವಧೆ ಹೇಗಾಗುತ್ತದೆ?


ಬಿಜೆಪಿಯಿಂದಾಗಿ ಮಮತಾ ದೀದಿ(ಪ.ಬಂಗಾಳ ಮುಖ್ಯಮಂತ್ರಿ) ಈಗ ದೇವಸ್ಥಾನಗಳಿಗೆ ಹೋಗಲು ಆರಂಭಿಸಿದ್ದಾರೆ - ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ನಿಮ್ಮ ರಾಜ್ಯದಲ್ಲಿ ದೇವಸ್ಥಾನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದರಿಂದ, ಮುಂಜಾಗೃತೆಗಾಗಿ ಇರಬೇಕು.


ರಾಮ ಮಂದಿರ ನಿರ್ಮಾಣ ದೊಡ್ಡ ಸವಾಲೇ ಅಲ್ಲ, ಅದನ್ನು ಮಂದಿರವಾಗಿ ಉಳಿಸಿಕೊಳ್ಳುವುದೇ ನಮ್ಮ ಮುಂದಿರುವ ದೊಡ್ಡ ಸವಾಲು - ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ

ಅದಕ್ಕಾಗಿ ಸಂಗ್ರಹಿಸಿರುವ ಹಣವನ್ನು ಹಂಚುಕೊಳ್ಳುವುದೂ ಒಂದು ಸವಾಲೇ ಅಲ್ಲವೇ?


ಹರಿದ ಜೀನ್ಸ್ ಬಟ್ಟೆಯನ್ನು ಧರಿಸುವುದರಿಂದ ಮಕ್ಕಳ ಮೇಲೆ ಪರಿಣಾಮ ಉಂಟಾಗುತ್ತದೆ - ತೀರಥ್ ಸಿಂಗ್ ರಾವತ್, ಉತ್ತರಾಖಂಡ ಮುಖ್ಯಮಂತ್ರಿ
ಗುಡಿಸಲುಗಳಲ್ಲಿ ಚಿಂದಿ ಬಟ್ಟೆ ಧರಿಸಿದ ಮಕ್ಕಳ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಕಾಳಜಿಯಿಲ್ಲವೇ?


ನಮ್ಮ ದೇಶದೊಂದಿಗೆ ಶಾಂತಿ ಕಾಯ್ದುಕೊಂಡರೆ ಭಾರತಕ್ಕೆ ಆರ್ಥಿಕವಾಗಿ ಹೆಚ್ಚು ಲಾಭವಾಗಲಿದೆ - ಇಮ್ರಾನ್‌ಖಾನ್, ಪಾಕ್ ಪ್ರಧಾನಿ
ಮೊದಲು ಭಾರತದೊಳಗೆ ಶಾಂತಿ ಕಾಪಾಡುವ ಬಗ್ಗೆ ನಮ್ಮ ನಾಯಕರು ಯೋಚಿಸಬೇಕಾಗಿದೆ.


 ನಾನು ವಿಧಾನ ಪರಿಷತ್ ಸಭಾಪತಿಯಾಗಲು ಮಾಜಿ ಪ್ರಧಾನಿ ದೇವೇಗೌಡರು ಕಾರಣ - ಬಸವರಾಜ ಹೊರಟ್ಟಿ, ವಿ.ಪ.ಸಭಾಪತಿ

ಮತದಾರರ ಪಾತ್ರವೇನೂ ಇಲ್ಲವೇ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...