ಮೀಸಲಾತಿಯನ್ನು ಕಿತ್ತು ಹಾಕುವ ದಿನ ಬೇಗ ಬರಲಿ

Update: 2021-03-22 06:37 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಮೀಸಲಾತಿ ಇನ್ನೂ ಎಷ್ಟು ತಲೆಮಾರುಗಳಿಗೆ ಮುಂದುವರಿಯಲಿದೆ?’ ಎಂದು ಸುಪ್ರೀಂಕೋರ್ಟ್ ಕೇಳಿದೆ. ಮರಾಠರಿಗೆ ಮೀಸಲಾತಿ ನೀಡುವ ಕುರಿತ ವಿಚಾರಣೆಯ ಸಂದರ್ಭದಲ್ಲಿ ಇಂತಹದೊಂದು ಪ್ರಶ್ನೆ ಹುಟ್ಟಿಕೊಂಡಿದೆ. ಮೀಸಲಾತಿಯ ಗರಿಷ್ಠ ಮಿತಿಯನ್ನು ತೆಗೆದು ಹಾಕಬೇಕು ಎನ್ನುವ ವಾದದ ಕುರಿತಂತೆ ನ್ಯಾಯಾಲಯ ಕಳವಳವನ್ನೂ ವ್ಯಕ್ತಪಡಿಸಿದೆ. ಮಹಾರಾಷ್ಟ್ರದಲ್ಲಿ ಮರಾಠರು ಅಸ್ಪಶ್ಯರಲ್ಲ. ಧಾರ್ಮಿಕ, ರಾಜಕೀಯ, ಆರ್ಥಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಇವರು ಆದ್ಯತೆಯ ಪ್ರಾತಿನಿಧ್ಯವನ್ನು ಪಡೆದುಕೊಂಡಿದ್ದಾರೆ. ಆದರೂ ಇವರು ತನ್ನ ಜನ, ಧನ, ರಾಜಕೀಯ ಶಕ್ತಿಯನ್ನು ಬಳಸಿಕೊಂಡು ಮೀಸಲಾತಿಗಾಗಿ ಬೇಡಿಕೆಯಿಟ್ಟಿದ್ದಾರೆ. ಈ ಬೇಡಿಕೆಯ ನೇರ ಸಂತ್ರಸ್ತರು, ಮೀಸಲಾತಿಗೆ ಅರ್ಹರಾಗಿರುವ ದಲಿತ ಸಮುದಾಯ ಮತ್ತು ಹಿಂದುಳಿದ ವರ್ಗದ ತಳಸ್ತರದ ಜನರು ಎನ್ನುವುದರಲ್ಲಿ ಎರಡು ಮಾತಿಲ್ಲ. ಮರಾಠಿಗರು ಸೇರಿದಂತೆ ದೇಶದ ಮೇಲ್ಜಾತಿಗಳು ಮೀಸಲಾತಿಯ ಬೇಡಿಕೆಯಿಡುವಾಗ ನ್ಯಾಯಾಲಯ ಕೇಳಬೇಕಾದ ಮೊದಲ ಪ್ರಶ್ನೆ ‘ನೀವು ಜಾತಿ ಅಸ್ಪಶ್ಯತೆಯನ್ನು ಸಮಾಜದಲ್ಲಿ ಅನುಭವಿಸುತ್ತಿದ್ದೀರಾ’, ‘ಜಾತಿ ಅಸ್ಪಶ್ಯತೆಯ ಕಾರಣದಿಂದಾಗಿ ರಾಜಕೀಯ, ಶಿಕ್ಷಣ ವಲಯಗಳಲ್ಲಿ ಕಡಿಮೆ ಪ್ರಾತಿನಿಧ್ಯವನ್ನು ಪಡೆದಿದ್ದೀರಾ’ ಈ ಎರಡು ಪ್ರಶ್ನೆಗಳೇ ಅವರು ಮೀಸಲಾತಿಗೆ ಅನರ್ಹರು ಎನ್ನುವುದನ್ನು ಸಾಬೀತು ಪಡಿಸುತ್ತವೆ. ಆದರೆ ಯಾವ ನ್ಯಾಯಾಧೀಶರಾಗಲಿ, ಸಂವಿಧಾನ ತಜ್ಞರಾಗಲಿ ಮುಂದುವರಿದ ಜಾತಿಗಳ ಬಳಿ ಇಂತಹದೊಂದು ಪ್ರಶ್ನೆಯನ್ನು ಕೇಳುತ್ತಿಲ್ಲ. ಅಷ್ಟೇ ಅಲ್ಲ, ಮೇಲ್ವರ್ಗದ ಬಡವರಿಗೆ 10 ಶೇಕಡ ಮೀಸಲಾತಿಯನ್ನು ನೀಡಿದಾಗಲೂ ನಿಜಕ್ಕೂ ಮೀಸಲಾತಿಗೆ ಅರ್ಹರಾಗಿರುವ ಸಮುದಾಯಗಳು ಬಾಯಿ ಮುಚ್ಚಿ ಅದಕ್ಕೆ ಅನುಮತಿ ನೀಡಿದವು. ಇಷ್ಟಕ್ಕೂ ಇತ್ತೀಚಿನ ದಿನಗಳಲ್ಲಿ, ಅಭಿವೃದ್ಧಿ ಹೊಂದಿದ ಸಮಾಜದಿಂದ ಮೀಸಲಾತಿಗಾಗಿ ಆಗ್ರಹಗಳು ಹೆಚ್ಚುತ್ತಿವೆ. ಆ ಸಮುದಾಯಕ್ಕೆ ಮೀಸಲಾತಿ ಅಗತ್ಯವಿಲ್ಲದೇ ಇದ್ದರೂ ಬೇರೆ ಬೇರೆ ಶಕ್ತಿಗಳು ಮೀಸಲಾತಿಗಾಗಿ ಹೋರಾಡಲು ಅವರಿಗೆ ಕುಮ್ಮಕ್ಕು ನೀಡುತ್ತಿವೆ. ಇದು ಮೀಸಲಾತಿಯನ್ನು ತೆಗೆದುಹಾಕಲು ಆರೆಸ್ಸೆಸ್ ನಡೆಸುತ್ತಿರುವ ಸಂಚಿನ ಒಂದು ಭಾಗವಾಗಿದೆಯೇ ಹೊರತು, ಆಯಾ ಜಾತಿಗಳ ಮೇಲಿನ ಕಾಳಜಿಯಿಂದ ಈ ಹೋರಾಟ ನಡೆಯುತ್ತಿಲ್ಲ ಎನ್ನುವುದೂ ಅಷ್ಟೇ ಸತ್ಯ.

 ‘ಮೀಸಲಾತಿ ಇನ್ನೂ ಎಷ್ಟರವರೆಗೆ ಮುಂದುವರಿಯಲಿದೆ’ ಎಂಬ ಪ್ರಶ್ನೆಯನ್ನು ನ್ಯಾಯಾಧೀಶರು ಕೇಳಿದ್ದಲ್ಲ, ಅವರ ಮೂಲಕ ಕೇಳಿಸಲಾಗಿದೆ. ಈಗಾಗಲೇ ಶೇ. 10 ಮೀಸಲಾತಿಯನ್ನು ಮೇಲ್ಜಾತಿಯ ಬಡವರಿಗೆ ನೀಡುವ ಮೂಲಕ ಮೀಸಲಾತಿ ತನ್ನ ಉದ್ದೇಶ, ಗುರಿಯನ್ನೇ ಕಳೆದುಕೊಂಡಿದೆ. ಮೀಸಲಾತಿ ಜಾರಿಗೆ ಬಂದು ಈ ವರೆಗೂ ಅದು ತನ್ನ ಉದ್ದೇಶವನ್ನು ಸಾಧಿಸಿಕೊಂಡಿಲ್ಲ ಅಥವಾ ಅದು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವುದಕ್ಕೆ ವ್ಯವಸ್ಥೆಯೊಳಗಿರುವ ಮೇಲ್ಜಾತಿಯ ಅಧಿಕಾರಶಾಹಿ ಅವಕಾಶ ನೀಡಿಲ್ಲ. ಇಂದಿಗೂ ಮಲಹೊರುವ, ಮ್ಯಾನ್‌ಹೋಲ್‌ಗಳನ್ನು ಶುಚಿಗೊಳಿಸುವ, ಶೌಚಾಲಯ ಕಾಯುವ ಕೆಲಸಗಳನ್ನು ಕೆಳಜಾತಿಗಳ ಜನರೇ ಮಾಡುತ್ತಿದ್ದಾರೆ. ಮೀಸಲಾತಿಯನ್ನು ಪಡೆದು ಒಂದಿಷ್ಟು ದಲಿತರು ವಿದ್ಯಾವಂತರಾಗಿ ಅತ್ಯುತ್ತಮ ಉದ್ಯೋಗಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವಿದ್ಯಾವಂತ ದಲಿತರು ಉಳಿದ ದಲಿತರನ್ನು ಮೇಲೆತ್ತುವುದಕ್ಕೆ, ಮೀಸಲಾತಿಯನ್ನು ಅವರ ನಡುವೆ ಅನುಷ್ಠಾನಗೊಳಿಸುವುದಕ್ಕೆ ಪ್ರಯತ್ನಿಸಿದ್ದು ತೀರಾ ಕಡಿಮೆ. ಮೇಲ್ದರ್ಜೆಯ ಬದುಕು ದಕ್ಕಿದಾಕ್ಷಣ, ದಲಿತ ಸಮುದಾಯದ ಜೊತೆಗೆ ಅಂತರ ಕಾಯ್ದುಕೊಂಡವರು ಹೆಚ್ಚು. ಮೀಸಲಾತಿಯ ಸವಲತ್ತಿನಿಂದ ಜೀವನದಲ್ಲಿ ಸುಧಾರಣೆಗೊಂಡವರು ಉಳಿದ ದಲಿತರ ಬಗ್ಗೆ ಕಾಳಜಿ ವಹಿಸುತ್ತಿದ್ದರೆ ಪರಿಸ್ಥಿತಿ ಇಂದು ಈ ಮಟ್ಟಕ್ಕೆ ತಲುಪುತ್ತಿರಲಿಲ್ಲ.

ದಲಿತ ಸಂಘಟನೆಗಳು ದುರ್ಬಲಗೊಳ್ಳುತ್ತಾ ಬಂದಂತೆಯೇ, ಹಂತ ಹಂತವಾಗಿ ಬಲಿಷ್ಠ ಸಮುದಾಯಗಳು ಮೀಸಲಾತಿಯಲ್ಲಿ ಪಾಲುಕೇಳುತ್ತಾ ಬಂದವು. ಇದು ಕಟ್ಟಕಡೆಗೆ ಮೇಲ್ಜಾತಿಯ ಬಡವರಿಗೆ ಶೇ. 10 ಮೀಸಲಾತಿ ನೀಡುವವರೆಗೆ ತಲುಪಿತು. ಹೀಗೆ ಮೀಸಲಾತಿಯಲ್ಲಿ ಬಲಿಷ್ಠ ಸಮಾಜ ಪಾಲು ಪಡೆದಂತೆ, ದುರ್ಬಲ ಸಮುದಾಯಕ್ಕೆ ಸಿಕ್ಕಿರುವ ಮೀಸಲಾತಿ ಇನ್ನಷ್ಟು ದುರ್ಬಲವಾಗುತ್ತಾ ಹೋಗುತ್ತದೆ. ಹಲ್ಲಿಲ್ಲದ ಕುರಿಗಳಿಗೆ ಹಲ್ಲು ಜೋಡಿಸುವ ಕೆಲಸವನ್ನು ಮೀಸಲಾತಿ ಮಾಡಿದರೆ, ಈ ಕುರಿಯನ್ನು ಶೋಷಿಸುವ ತೋಳಗಳಿಗೆ ಇರುವ ಕೋರೆಹಲ್ಲಿನ ಜೊತೆಗೆ ಇನ್ನೆರಡು ಕೋರೆ ಹಲ್ಲುಗಳನ್ನು ಜೋಡಿಸುವ ಸಮಾನತೆಯ ಕಲ್ಪನೆಯೊಂದು ದೇಶದಲ್ಲಿ ಜಾರಿಯಲ್ಲಿದೆ. ಸಮಾಜ ಇದನ್ನು ವೌನವಾಗಿ ಒಪ್ಪಿಕೊಂಡಿದೆ. ಮೀಸಲಾತಿಗಾಗಿ ಎಲ್ಲ ಜಾತಿಗಳು ಬೀದಿಗಿಳಿದು ಗೊಂದಲ ಸೃಷ್ಟಿಸಿದಾಗ ಮುನ್ನೆಲೆಗೆ ಬರುವ ಚರ್ಚೆಯೇ ‘ಯಾರಿಗೂ ಮೀಸಲಾತಿ ಬೇಡ’ ಎನ್ನುವುದು. ನಿಧಾನಕ್ಕೆ ಈ ಎಲ್ಲ ಗೊಂದಲಗಳಿಗೆ ಮೀಸಲಾತಿಯೇ ಕಾರಣವೆಂದು ತೀರ್ಪು ನೀಡಿ, ಅಂತಿಮವಾಗಿ ಮೀಸಲಾತಿಯನ್ನು ಇಲ್ಲವಾಗಿಸುವ ದೊಡ್ಡ ಸಂಚೊಂದು ನಡೆಯುತ್ತಿದೆ.

 ನ್ಯಾಯಾಲಯ ಕೇಳಬೇಕಾದ ಮೊದಲ ಪ್ರಶ್ನೆ, ‘ಸಮಾಜದಲ್ಲಿ ಜಾತೀಯ ಶೋಷಣೆ ಇನ್ನೂ ಇದೆಯೇ?’ ಎಂದಾಗಿದೆ. ಈ ಪ್ರಶ್ನೆಗೆ ಉತ್ತರ ದೊರಕಿದರೆ, ಮೀಸಲಾತಿ ಮುಂದುವರಿಯಬೇಕೇ ಬೇಡವೇ ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತದೆ. ಇಂದಿಗೂ ಈ ದೇಶದಲ್ಲಿ ದಲಿತ ಕೇರಿಗಳಿವೆ. ದಲಿತರನ್ನು ದಯನೀಯವಾಗಿ ಶೋಷಿಸಲಾಗುತ್ತಿದೆ, ಅವರು ಮದುವೆ ಸಮಾರಂಭದಲ್ಲಿ ಕುದುರೆ ಏರಿದರೆ ಹಲ್ಲೆ ನಡೆಸುವ ಪರಿಸ್ಥಿತಿಯಿದೆ. ಇದು ನ್ಯಾಯಾಧೀಶರಿಗೆ ಗೊತ್ತಿಲ್ಲದ್ದೇನೂ ಅಲ್ಲ. ಮೀಸಲಾತಿ ಜಾರಿಗೊಂಡ ದಿನಗಳಿಂದ ದಲಿತರ ಬದುಕು ಎಷ್ಟರ ಮಟ್ಟಿಗೆ ಸುಧಾರಣೆಗೊಂಡಿದೆ? ಎನ್ನುವ ವರದಿಯೊಂದನ್ನು ನ್ಯಾಯಾಲಯ ತರಿಸಿಕೊಳ್ಳಲಿ ಮತ್ತು ಒಂದು ವೇಳೆ ಸುಧಾರಣೆಗೊಂಡಿಲ್ಲ ಎಂದಾದರೆ ಅದು ಯಾಕೆ ಸುಧಾರಣೆಗೊಂಡಿಲ್ಲ ಎನ್ನುವ ಪ್ರಶ್ನೆಯನ್ನು ಕೇಳಬೇಕು.ಆಗ ಸತ್ಯಗಳು ಹೊರ ಬರುತ್ತವೆ.

ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ದಾರಿಯನ್ನು ಹುಡುಕುವುದು ಇಂದಿನ ಹೊಣೆಗಾರಿಕೆಯೇ ಹೊರತು, ‘ಮೀಸಲಾತಿಯ ಅವಧಿ ಮುಗಿದಿದೆ’ ಎಂದು ಮೀಸಲಾತಿಯನ್ನು ಸಂಪೂರ್ಣ ಕಿತ್ತು ಹಾಕುವುದಲ್ಲ. ಇನ್ನು ಪಟೇಲ್, ಜಾಟ್ ಮೊದಲಾದ ಜಾತಿಗಳು ತಮಗೆ ಮೀಸಲಾತಿ ಬೇಕು ಎಂದು ಒತ್ತಡ ತಂದಾಗ, ಉಳಿದ ಸಮುದಾಯಗಳಿಗೆ ಹೋಲಿಸಿದರೆ ಆ ಮೇಲ್ಜಾತಿಗಳು ವಿವಿಧ ಕ್ಷೇತ್ರಗಳಲ್ಲಿ ಪಡೆದುಕೊಂಡ ಪ್ರಾತಿನಿಧ್ಯವನ್ನು ಪರಿಶೀಲಿಸಬೇಕು. ಅದರ ಆಧಾರದ ಮೇಲೆ ಮೀಸಲಾತಿ ನೀಡಬೇಕೋ, ಬೇಡವೋ ಎಂಬ ತೀರ್ಮಾನಕ್ಕೆ ಬರಬೇಕು. ‘ಮೀಸಲಾತಿ ಎಷ್ಟು ತಲೆಮಾರುಗಳಿಗೆ ಮುಂದುವರಿಯಲಿದೆ’ ಎನ್ನುವ ಪ್ರಶ್ನೆಗೆ ಒಂದೇ ಉತ್ತರ ‘ಈ ದೇಶದಲ್ಲಿ ಜಾತೀಯತೆಯ ಶೋಷಣೆ ಎಷ್ಟು ತಲೆಮಾರುಗಳವರೆಗೆ ಇರುತ್ತದೆಯೋ ಅಲ್ಲಿವರೆಗೆ ಮೀಸಲಾತಿ ಮುಂದುವರಿಯಲಿದೆ’. ಯಾವಾಗ ಈ ದೇಶದಲ್ಲಿ ಜಾತಿ ಕಾರಣದಿಂದ ಶೋಷಿತರಾದವರು ರಾಜಕೀಯ, ಉದ್ಯಮ, ಶಿಕ್ಷಣ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಪ್ರಾತಿನಿಧ್ಯವನ್ನು ಪಡೆಯುತ್ತಾರೋ ಆಗ ಮೀಸಲಾತಿಯನ್ನು ಕಿತ್ತು ಹಾಕಬೇಕು. ಅಂತಹ ದಿನ ಬೇಗ ಬರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News