ಅಂತ್ಯಕ್ರಿಯೆ ಮಾಡಿದ್ದ ಮಗುವಿನ ಮೃತದೇಹ ಹೊರತೆಗೆಸಿದ ಖಾಸಗಿ ಕಂಪೆನಿ ಸೆಕ್ಯುರಿಟಿಗಾರ್ಡ್: ಆರೋಪ
ಎತ್ತಿನಹೊಳೆ ಕಾಮಗಾರಿ ವೇಳೆ ಸ್ಫೋಟದಿಂದ ಹಸುಳೆ ಮೃತ್ಯು
ತುಮಕೂರು, ಮಾ.22: ಎತ್ತಿನಹೊಳೆ ಕಾಮಗಾರಿಯ ವೇಳೆ ಕಲ್ಲುಗಳನ್ನು ಸ್ಫೋಟಿಸುವ ಶಬ್ದದಿಂದ ಅನಾರೋಗ್ಯಕ್ಕೀಡಾಗಿ ಮೃತಪಟ್ಟ 3 ತಿಂಗಳ ಮಗುವಿನ ಮೃತದೇಹವನ್ನು ದಫನ ಮಾಡಿದ್ದ ಸ್ಥಳದಿಂದ ಖಾಸಗಿ ಕಂಪೆನಿಯೊಂದು ಹೊರತೆಗೆಸಿದ ಅಮಾನವೀಯ ಕೃತ್ಯವೊಂದು ಕೊರಟಗೆರೆ ತಾಲೂಕಿನಲ್ಲಿ ಜಂಪೇನಹಳ್ಳಿ ಎಂಬ ಗ್ರಾಮದಲ್ಲಿ ರವಿವಾರ ನಡೆದಿರುವುದು ವರದಿಯಾಗಿದೆ. ಸರಕಾರಿ ಜಾಗದಲ್ಲಿ ಮಗುವಿನ ಅಂತ್ಯ ಸಂಸ್ಕಾರ ನೆರವೇರಿಸಿದ್ದರೂ ಅಲ್ಲೆ ಪಕ್ಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಗಾರ್ಮೆಂಟ್ಸ್ ಕಂಪೆನಿಯೊಂದರ ಸೆಕ್ಯುರಿಟಿಗಾರ್ಡ್ ಮೃತದೇಹವನ್ನು ಹೊರ ತೆಗೆಸಿದ್ದಾನೆ ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ.
ಕೈಮರ ಗ್ರಾಮದಲ್ಲಿ ವಾಸವಾಗಿರುವ ರಂಗನಾಥ್ ಮತ್ತು ಪವಿತ್ರಾ ಎಂಬ ಬಡ ದಲಿತ ದಂಪತಿಯ 3 ತಿಂಗಳ ಹೆಣ್ಣು ಮಗು ಎತ್ತಿನಹೊಳೆ ಕಾಮಗಾರಿಯ ವೇಳೆ ಕಲ್ಲುಗಳನ್ನು ಸ್ಫೋಟಿಸುವ ಶಬ್ದದಿಂದ ಅನಾರೋಗ್ಯಕ್ಕೀಡಾಗಿತ್ತೆನ್ನಲಾಗಿದೆ. ಬಳಿಕ ಮಗು ಮೃತಪಟ್ಟಿತ್ತು. ಹತ್ತಿರದಲ್ಲಿ ಸ್ಮಶಾನವಿಲ್ಲದ ಕಾರಣ ಮಗುವಿನ ಮೃತದೇಹದ ಅಂತ್ಯಕ್ರಿಯೆಯನ್ನು ಮನೆ ಪಕ್ಕದ ಸರಕಾರಿ ಹಳ್ಳದಲ್ಲಿ ನೆರವೇರಿಸಲಾಗಿತ್ತು. ಆದರೆ ಹಳ್ಳದ ಪಕ್ಕದಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಗಾರ್ಮೆಂಟ್ಸ್ ಕಂಪೆನಿಯೊಂದರ ಸೆಕ್ಯುರಿಟಿ ಸಿಬ್ಬಂದಿ 'ಇದು ಕಂಪೆನಿಯ ಜಾಗ, ಇಲ್ಲಿ ಅಂತ್ಯ ಸಂಸ್ಕಾರ ನೆರವೇರಿಸುವಂತಿಲ್ಲ' ಎಂದು ದಫನ ಮಾಡಿದ್ದ ಮೃತದೇಹವನ್ನು ಬಲವಂತದಿಂದ ಹೊರತೆಗೆಸಿದ್ದಾನೆ ಮಗುವಿನ ಪೋಷಕರು ಆರೋಪಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕೊರಟಗೆರೆ ತಹಶೀಲ್ದಾರ್ ಗೋವಿಂದರಾಜು, ಈ ಹಳ್ಳ ನಿಮ್ಮದು ಎನ್ನುವುದಕ್ಕೆ ದಾಖಲೆ ತೋರಿಸಿ ಎಂದು ಗಾರ್ಮೆಂಟ್ಸ್ ಕಂಪೆನಿಯ ಸಿಬ್ಬಂದಿಗೆ ತಾಕೀತು ಮಾಡುತ್ತಿದ್ದಂತೆ ಅವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಬಳಿಕ ಮಗುವಿನ ಮೃತದೇಹವನ್ನು ಬೇರೆ ಸ್ಥಳಕ್ಕೆ ತಂದು ತಹಶೀಲ್ದಾರರ ಸಮ್ಮುಖದಲ್ಲಿಯೇ ದಫನ ಮಾಡಲಾಯಿತು.
ಎತ್ತಿನಹೊಳೆ ಕಾಮಗಾರಿಯಿಂದ ಸಮಸ್ಯೆ?
ಜಂಪೇನಹಳ್ಳಿಯಲ್ಲಿ ಎತ್ತಿಹೊಳೆ ಯೋಜನೆಯ ಕಾಮಗಾರಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿದೆ. ಇಲ್ಲಿ ಪೈಪ್ಲೈನ್ ಅಳವಡಿಸಲು ಅಡ್ಡಿಯಾಗಿದ್ದ ಕಲ್ಲುಬಂಡೆಗಳನ್ನು ಕಳೆದ 2-3 ದಿನಗಳ ಹಿಂದೆ ಸ್ಫೋಟಿಸಲಾಗಿತ್ತು. ಈ ಸ್ಫೋಟ ಸ್ಥಳದಿಂದ ಕೇವಲ 50 ಮೀಟರ್ ನಷ್ಟು ದೂರದಲ್ಲಿ ರಂಗನಾಥ್-ಪವಿತ್ರ ದಂಪತಿಯು ಜೋಪಡಿಯಂತಹ ಗುಡಿಸಲಿನಲ್ಲಿ ವಾಸವಿದೆ. ಸ್ಫೋಟದ ಸದ್ದಿಗೆ ಮಗುವಿನಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತೆನ್ನಲಾಗಿದೆ. ಇದೇ ಕಾರಣಕ್ಕೆ ಮಗು ಸಾವನ್ನಪ್ಪಿದೆ ಎಂದು ಮಗುವಿನ ಹೆತ್ತವರು ಆರೋಪಿಸಿದ್ದಾರೆ.
ಮಗುವಿನ ಸಾವಿಗೆ ಎತ್ತಿನಹೊಳೆ ಕಾಮಗಾರಿಗಾಗಿ ನಡೆದ ಸ್ಫೋಟವೇ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ, ಕುಟುಂಬಕ್ಕೆ ಪರಿಹಾರ ಕೊಡಿಸುವ ಭರವಸೆಯನ್ನು ತಹಶೀಲ್ದಾರ್ ನೀಡಿದ್ದಾರೆ ಎಂದು ತಿಳಿದುಬಂದಿದೆ.