ಹನೂರು: ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ: ಬೈಕ್ ಸವಾರ ಮೃತ್ಯು
Update: 2021-03-22 13:03 IST
ಹನೂರು, ಮಾ.22: ಬೈಕಿಗೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಚೆನ್ನಲಿಂಗನಹಳ್ಳಿ ಗ್ರಾಮದ ಸಮೀಪ ಇಂದು ಬೆಳಗ್ಗೆ ನಡೆದಿದೆ.
ತಾಲೂಕಿನ ಅಣಗಳ್ಳಿ ದೊಡ್ಡಿ ಗ್ರಾಮದ ನಿವಾಸಿ ಪ್ರಕಾಶ್ (26) ಮೃತಪಟ್ಟವರಾಗಿದ್ದಾರೆ.
ಖಾಸಗಿ ಬ್ಯಾಂಕ್‌ನ ಕೇಂದ್ರೀಯ ಸಂಘದಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಸೋಮವಾರ ಮಂಗಲ, ಚೆನ್ನಲಿಂಗನಹಳ್ಳಿ ಗ್ರಾಮದಲ್ಲಿನ ಕೇಂದ್ರೀಯ ಸಂಘದ ಸದಸ್ಯರಿಂದ ಹಣ ಪಡೆದು ಲೋಕನಹಳ್ಳಿ ಗ್ರಾಮಕ್ಕೆ ಬೈಕಿನಲ್ಲಿ ತೆರಳುತ್ತಿದ್ದಾಗ ಒಡೆಯರಪಾಳ್ಯ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದಿದೆಯೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ಪ್ರಕಾಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.