ಬಾಂಬೆಗೆ ಹೋದವರು ಮಾತ್ರ ಯಾಕೆ ಷಡ್ಯಂತ್ರ ಎಂದು ಕೋರ್ಟ್ ಗೆ ಹೋದರು: ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು, ಮಾ. 22: ರಾಜ್ಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿರುವ, ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ 'ಅಶ್ಲೀಲ ಸಿಡಿ ಪ್ರಕರಣ' ವಿಧಾನಸಭೆಯಲ್ಲಿ ಇಂದು ಮತ್ತೊಮ್ಮೆ ಪ್ರತಿಧ್ವನಿಸಿತು.
‘ಸಿಡಿ ಪ್ರಕರಣ' ಸಂಬಂಧ ಚರ್ಚೆಗೆ ಅವಕಾಶ ಕೋರಿ ‘ನಿಲುವಳಿ ಸೂಚನೆ' ಮಂಡಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸ್ಪೀಕರ್ ಕಾಗೇರಿ ಆಹ್ವಾನಿಸಿದರು. ಈ ಸಂದರ್ಭ ಗೃಹ ಸಚಿವ ಬೊಮ್ಮಾಯಿ, ಇದು 'ನಿಲುವಳಿ ಸೂಚನೆ' ಅಡಿಯಲ್ಲಿ ಬರುವುದಿಲ್ಲ ಎಂದು ತಿಳಿಸಿದರು. ಬಳಿಕ ಬಳಿಕ ಸ್ಪೀಕರ್ ಕಾಗೇರಿ ಅವರು ಈ ಬಗ್ಗೆ ನಿಯಮ 69ರ ಅಡಿಯಲ್ಲಿ ಚರ್ಚಿಸಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿ, ಸದನವನ್ನು 3 ಗಂಟೆಗೆ ಸೇರುವಂತೆ ಮುಂದೂಡಿದರು.
ಬಳಿಕ ಸದನ ಸೇರಿದಾಗ ಸಿದ್ದರಾಮಯ್ಯ ಮಾತನಾಡಿ ಸಿಡಿ ಬಿಡುಗಡೆ ಪ್ರಕರಣವನ್ನು ಉಲ್ಲೇಖಿಸಿದರು. ಮಾರ್ಚ್ 2ರಂದು ಅಶ್ಲೀಲ ಸಿಡಿ ಬಿಡುಗಡೆಯಾಗಿದೆ. ಇದು ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಸಿಡಿ ಬಗ್ಗೆ ದಿನೇಶ್ ಕಲ್ಲಹಳ್ಳಿ ಎಂಬವರು ದೂರು ನೀಡಿದರೂ, ಎಫ್ಐಆರ್ ದಾಖಲಾಗಿಲ್ಲ. ಕೆಲಸ ಕೇಳಿ ಬಂದ ಯುವತಿಯನ್ನು ಜೊತೆ ಜಾರಕಿಹೊಳಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಘಟನೆ ಬಗ್ಗೆ ಮೊದಲು ಇದು ಷಡ್ಯಂತ್ರ ಎಂದಿದ್ದ ರಮೇಶ್ ಜಾರಕಿಹೊಳಿ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ತಿಳಿಸಿದರು.
ಇದಾದ ಬಳಿಕ ಮಾರ್ಚ್ 6ರಂದು ಡಾ.ಸುಧಾಕರ್, ಬಿ.ಸಿ.ಪಾಟೀಲ್, ಬೈರತಿ ಬಸವರಾಜು, ನಾರಾಯಣಗೌಡ, ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಸಹಿತ ಆರು ಮಂದಿ ಸಚಿವರು ಕೋರ್ಟ್ ಮೆಟ್ಟಿಲೇರಿ, ತಮ್ಮ ವಿರುದ್ಧ ಮಾನಹಾನಿಕರ, ಆಕ್ಷೇಪಾರ್ಹ ಸುದ್ಧಿ ಬಿತ್ತರಿಸದಂತೆ ತಡೆಯಾಜ್ಞೆ ತಂದಿದ್ದಾರೆ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿದರು ಎಂದು ಸಿದ್ದರಾಮಯ್ಯ ಹೇಳಿದರು.
ಈ ಸಂದರ್ಭ ಗೃಹ ಸಚಿವ ಬೊಮ್ಮಾಯಿ ಎದ್ದು ನಿಂತು ಷಡ್ಯಂತ್ರದಿಂದ ರಕ್ಷಣೆ ಹೊಂದಲು ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ ಎಂದು ಸಮರ್ಥಿಸಿದರು. ಮಧ್ಯಪ್ರವೇಶಿಸಿದ ಡಿ.ಕೆ ಶಿವಕುಮಾರ್ ಮಾತನಾಡಲು ಅವಕಾಶ ನೀಡಿ, ಬಳಿಕ ನೀವು ಉತ್ತರ ನೀಡುವಂತೆ ತಿಳಿಸಿದರು.
ಬಳಿಕ ಸಿದ್ದರಾಮಯ್ಯ ಮಾತನಾಡಿ, ತಮಗೆ ಭಯ, ಆತಂಕ ಇದೆ, ಸಿಡಿ ಬಿಡುಗೆಯಾಗುವ ಬಗ್ಗೆ ಭಯವಿದೆ ಎಂದು ಕೋರ್ಟ್ ಮೊರೆ ಹೋದದ್ದು ಕರ್ನಾಟಕದ ಇತಿಹಾಸದಲ್ಲಿ ಮೊದಲು. ಇದುವರೆಗೂ ಯಾರೂ ಹೀಗೆ ನ್ಯಾಯಲಯಕ್ಕೆ ಹೋಗಿಲ್ಲ. 19 ಸಿಡಿಗಳಿರಬಗಹುದು ಎಂದು ಯಾರೋ ಹೇಳಿದಾಗ ಇವರೇಕೆ ನ್ಯಾಯಾಲಯಕ್ಕೆ ಹೋದರು ? ಆದರೆ ಬೋಪಯ್ಯ, ಗೋಪಾಲಯ್ಯ ಯಾಕೆ ಹೋಗಿಲ್ಲ ? ಬಾಂಬೆಗೆ ಹೋದವರು ಮಾತ್ರ ಯಾಕೆ ಈ ಷಡ್ಯಂತ್ರವಾಗುತ್ತದೆ ಎಂದು ಭಾವಿಸಿದರು. ಈಶ್ವರಪ್ಪ, ಶೆಟ್ಟರ್, ಕತ್ತಿ ಯಾಕೆ ತಮ್ಮ ವಿರುದ್ಧ ಷಡ್ಯಂತ್ರವಾಗುತ್ತದೆ ಎಂದು ಭಾವಿಸಿಲ್ಲ ಎಂದು ಪ್ರಶ್ನಿಸಿದರು.