ಸದನದಲ್ಲಿ 'ಸಿಡಿ' ಸಮರ: ಹೈಕೋರ್ಟ್ ಸಿಜೆ ಮೂಲಕ ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್ ಧರಣಿ

Update: 2021-03-22 14:57 GMT

ಬೆಂಗಳೂರು, ಮಾ.22: ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾದ ಲೈಂಗಿಕ ಹಗರಣದ ಸಿಡಿ ಪ್ರಕರಣ ವಿಚಾರವು ನಿಯಮ 69ರಡಿಯಲ್ಲಿ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ, ಆಡಳಿತ, ವಿರೋಧ ಪಕ್ಷದ ಶಾಸಕರ ನಡುವೆ ಪರಸ್ಪರ ವಾಗ್ವಾದ, ಆರೋಪ-ಪ್ರತ್ಯಾರೋಪಗಳಿಗೆ ಸಾಕ್ಷಿಯಾಯಿತು.

ಎಸ್‍ಐಟಿ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿದ ಮೂರು ಎಫ್‍ಐಆರ್ ಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಯುವತಿಯನ್ನು ಪತ್ತೆ ಹಚ್ಚಲು ದಿಲ್ಲಿ, ಭೋಪಾಲ್, ಗೋವಾ ಹಾಗೂ ಬೆಳಗಾವಿಯಲ್ಲಿ ಪರಿಶೀಲನೆ ನಡೆಸಲಾಗಿದೆ. ಆಕೆಯ ಸಾಮಾಜಿಕ ಜಾಲತಾಣಗಳ ಅಕೌಂಟ್‍ಗಳ ಮೂಲಕ ನೋಟಿಸ್ ಜಾರಿ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ರಮೇಶ್ ಜಾರಕಿಹೊಳಿಯನ್ನು ಕರೆದು ದಿನೇಶ್ ಕಲ್ಲಹಳ್ಳಿ ನೀಡಿರುವ ದೂರು, ವಿಡಿಯೋದಲ್ಲಿರುವ ಅಂಶಗಳ ಬಗ್ಗೆ ತನಿಖೆ ನಡೆಸಲಾಗಿದೆ. ಸರಕಾರ ಈ ವಿಚಾರದಲ್ಲಿ ಯಾರನ್ನೂ ರಕ್ಷಿಸುತ್ತಿಲ್ಲ. ಆಕೆಗೆ ಅಗತ್ಯ ಭದ್ರತೆ ನೀಡಲು ಹೇಳಿದ್ದೇವೆ. ನಾವು ಯಾರ ಪರ, ವಿರೋಧವು ಇಲ್ಲ ಎಂದು ಗೃಹ ಸಚಿವರು ನೀಡಿದ ಉತ್ತರವನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾವ ಮಾಡಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಸರಕಾರವು ಎಸ್‍ಐಟಿ ಮೂಲಕ ಈ ಪ್ರಕರಣವನ್ನು ಮುಚ್ಚಿ ಹಾಕಲು ಹೊರಟಿದೆ. ತನಿಖೆಯನ್ನು ಸ್ವತಂತ್ರವಾಗಿ ಮಾಡಲು ಅವಕಾಶ ಕೊಟ್ಟಿಲ್ಲ. ಈ ಪ್ರಕರಣದ ಹಿಂದಿನ ಷಡ್ಯಂತ್ರದ ಬಗ್ಗೆಯಷ್ಟೆ ತನಿಖೆ ಸಾಗುತ್ತಿದೆಯೇ ಹೊರತು, ಸಂತ್ರಸ್ತ ಯುವತಿಗೆ ನ್ಯಾಯ ಕೊಡಿಸುವ ಪ್ರಯತ್ನ ಆಗುತ್ತಿಲ್ಲ ಎಂದು ಆರೋಪಿಸಿದರು.

ಮಾ.2ರಂದು ಸಿಡಿ ಬಿಡುಗಡೆಯಾಗಿದೆ. ಇದು ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಸಿಡಿ ಬಗ್ಗೆ ದಿನೇಶ್ ಕಲ್ಲಹಳ್ಳಿ ಎಂಬವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರೂ ಎಫ್‍ಐಆರ್ ದಾಖಲಾಗಿಲ್ಲ. ನಂತರ ಅದನ್ನು ಕಬ್ಬನ್‍ಪಾಕ್ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ. ಆದರೆ, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡರು ಎಂಬ ಗಾದೆ ಮಾತಿನಂತೆ ಮಾ.6ರಂದು ಆರು ಜನ ಸಚಿವರಾದ ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಡಾ.ಸುಧಾಕರ್, ನಾರಾಯಣಗೌಡ, ಭೈರತಿ ಬಸವರಾಜ ಸಿಟಿ ಸಿವಿಲ್ ಕೋರ್ಟ್ ಮೊರೆ ಹೋಗಿ ತಮ್ಮ ವಿರುದ್ಧ ಇಂತಹ ಯಾವುದೆ ಸಿಡಿಗಳು ಹೊರ ಬಂದರೆ ಅದನ್ನು ಪ್ರಸಾರ ಮಾಡದಂತೆ 67 ಮಾಧ್ಯಮ ಸಂಸ್ಥೆಗಳು ಹಾಗೂ ಒಬ್ಬ ರಾಜಶೇಖರ್ ಮಲಾಲಿ ವಿರುದ್ಧ ತಡೆಯಾಜ್ಞೆ ತಂದಿದ್ದಾರೆ ಎಂದು ಅವರು ಹೇಳಿದರು.

ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲದವರು, ರಾಜ್ಯದ ಜನತೆಯನ್ನು ಹೇಗೆ ರಕ್ಷಣೆ ಮಾಡುತ್ತಾರೆ. ಇವರು ತಮ್ಮ ಸ್ಥಾನದಲ್ಲಿ ಮುಂದುವರಿಯಲು ಅರ್ಹತೆಯನ್ನು ಕಳೆದುಕೊಂಡಿದ್ದು, ಅವರೆಲ್ಲ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಸಿದ್ದರಾಮಯ್ಯ ಆಗ್ರಹಿಸಿದರು.

ಈ ಪ್ರಕರಣದ ಸಮಗ್ರ ತನಿಖೆ ನಡೆದು, ಸತ್ಯಾಸತ್ಯತೆ ಹೊರಗೆ ಬರಬೇಕಾದರೆ, ಸಂತ್ರಸ್ತೆಗೆ ನ್ಯಾಯ ಸಿಗಬೇಕಾದರೆ, ಹೈಕೋರ್ಟ್‍ನ ಹಾಲಿ ಮುಖ್ಯ ನ್ಯಾಯಮೂರ್ತಿಯ ನೇತೃತ್ವದಲ್ಲೆ ತನಿಖೆ ನಡೆಸಬೇಕು. ಎಸ್‍ಐಟಿ ಕೇವಲ ಕಣ್ಣೀರು ಒರೆಸುವ ತಂತ್ರ ಅಷ್ಟೇ. ಪ್ರಕರಣ ಬೆಳಕಿಗೆ ಬಂದು 20 ದಿನ ಆಗಿದ್ದರೂ ಈವರೆಗೆ ಸಂತ್ರಸ್ತೆಯನ್ನು ಪತ್ತೆ ಮಾಡಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.

ಸಿಡಿಯು ಸಾಮಾಜಿಕ ಜಾಲತಾಣ, ಯೂಟ್ಯೂಬ್‍ನಲ್ಲಿ ಪ್ರಸಾರ ಆಗಿದೆ. ಆ ಹೆಣ್ಣು ಮಗಳು ರಮೇಶ್ ಜಾರಕಿಹೊಳಿ ತನ್ನನ್ನು ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ಸಿಡಿ ತಯಾರು ಮಾಡಲು 20 ಕೋಟಿ ರೂ.ಖರ್ಚು ಆಗಿರುವುದಾಗಿ ಹೇಳಿಕೆ ಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಿಮ್ಮ ಸರಕಾರ ಇದ್ದಾಗಲೂ ಒಬ್ಬ ಸಚಿವರಿಗೆ ಸಂಬಂಧಿಸಿದ ಲೈಂಗಿಕ ಕಿರುಕುಳದ ಸಿಡಿ ಬಂದಿತ್ತು. ಆಗ ಹೆಣ್ಣುಮಗಳೇ ಬಂದು ದೂರು ನೀಡಿದ್ದರು. ತನಿಖೆ ನಂತರ ಅದು ನಕಲಿ ಸಿಡಿ ಎಂದು ವರದಿ ಬಂತು. ಆದರೆ, ಎಚ್.ವೈ.ಮೇಟಿಯವರು ಕಳೆದುಕೊಂಡ ಗೌರವ, ಮರ್ಯಾದೆಯನ್ನು ಪುನಃ ಸರಿಪಡಿಸಲು ಸಾಧ್ಯವಾಗಲೇ ಇಲ್ಲ. ಆದುದರಿಂದ, ಅಂತಹ ಷಡ್ಯಂತ್ರ ತಮ್ಮ ವಿರುದ್ಧವು ಆಗಲಿದೆ ಎಂಬ ಮುನ್ನೆಚ್ಚರಿಕೆಯಿಂದ ಸಚಿವರು ನ್ಯಾಯಾಲಯದ ಮೊರೆ ಹೋಗಿ ರಕ್ಷಣೆ ಪಡೆದುಕೊಂಡಿದ್ದಾರೆ ಎಂದರು.

ರಾಜ್ಯದ ಇತಿಹಾಸದಲ್ಲಿ ಈ ರೀತಿ ಸಚಿವರು ಕೋರ್ಟ್ ಗೆ ಹೋಗಿ 'ನಮಗೆ ಭಯ, ಆತಂಕ ಇದೆ. ನಮ್ಮ ಮೇಲೆ ಸಿಡಿ ಬಿಡುಗಡೆ ಆಗಬಹುದು. ನಮ್ಮ ತೇಜೋವಧೆ ಆಗಬಹುದು ಎಂದು ನ್ಯಾಯಾಲಯದ ಮೊರೆ ಹೋಗಿದ್ದು ಇದೇ ಮೊದಲು. ಬಾಂಬೆಗೆ ಹೋದ ಈ ಆರು ಜನ ಮಾತ್ರ ಯಾಕೆ ತಡೆಯಾಜ್ಞೆ ತಂದಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಸಮ್ಮಿಶ್ರ ಸರಕಾರ ರಚನೆಗಾಗಿ ಸಿ.ಪಿ.ಯೋಗೇಶ್ವರ್ ತಮ್ಮ ಮನೆ ಮೇಲೆ 9 ಕೋಟಿ ರೂ.ಸಾಲವನ್ನು ಎಂ.ಟಿ.ಬಿ.ನಾಗರಾಜ್ ಬಳಿ ತಂದಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದರು ಎಂದು ಸಿದ್ದರಾಮಯ್ಯ ತಿಳಿಸಿದರು. ಈ ಸಂದರ್ಭದಲ್ಲಿ ಎದ್ದು ನಿಂತ ಸಚಿವ ಎಂ.ಟಿ.ಬಿ.ನಾಗರಾಜ್, ಇದೆಲ್ಲ ಹಸಿ ಸುಳ್ಳು, ನಾನು ಯೋಗೇಶ್ವರ್ ಗೆ ಸಾಲ ನೀಡಿಲ್ಲ ಎಂದು ಹೇಳಿದರು.

ಇದು ಆರ್ಥಿಕ ಅವ್ಯವಹಾರ ಅಲ್ಲವೇ? ಭ್ರಷ್ಟಾಚಾರ ಅಲ್ಲವೇ? ಮನಿ ಲಾಂಡ್ರಿಂಗ್ ಕಾಯ್ದೆ, ಈಡಿ, ಐಟಿ ಇವೆಲ್ಲ ಇದಕ್ಕೆ ಅನ್ವಯ ಆಗುವುದಿಲ್ಲವೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನ್ಯಾಯಾಲಯದ ಮೊರೆ ಹೋಗುವ ಮುನ್ನ ಈ ಸಚಿವರು ಪೊಲೀಸರಿಗೆ ಯಾಕೆ ದೂರು ನೀಡಿಲ್ಲ. ಸಚಿವರು, ರಾಜ್ಯ ಹಾಗೂ ಸದನಕ್ಕೆ ಜವಾಬ್ದಾರರು. ತಮ್ಮ ಮನಸ್ಸಿಗೆ ಬರುವ ರೀತಿಯಲ್ಲಿ ನಡೆದುಕೊಳ್ಳಲು ಆಗಲ್ಲ ಎಂದರು.

19 ಸಿಡಿ ಇದೆ ಎಂದು ಹೇಳಿದವರಿಗೆ ನೋಟಿಸ್ ಕೊಟ್ಟಿದ್ದೇವೆ. ಈವರೆಗೆ ವಿಚಾರಣೆಗೆ ಬಂದಿಲ್ಲ. ನಾವು ದಿನೇಶ್ ಕಲ್ಲಹಳ್ಳಿಯ ದೂರು ಸೇರಿದಂತೆ ಬೇರೆ ಬೇರೆ ಸಂಘ ಸಂಸ್ಥೆಗಳು ನೀಡಿರುವ ದೂರುಗಳನ್ನು ಸೇರಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್ ಹಿರಿಯ ಸದಸ್ಯ ರಮೇಶ್ ಕುಮಾರ್ ಮಾತನಾಡಿ, ದಿನೇಶ್ ಕಲ್ಲಹಳ್ಳಿ ದೂರು ನೀಡಲು ಯಾರು ಕಾರಣ ? ಪುನಃ ಅವರು ತಮ್ಮ ದೂರನ್ನು ಹಿಂಪಡೆದುಕೊಳ್ಳುವಂತೆ ಅವರ ಮೇಲೆ ಒತ್ತಡ ಹೇರಿದ್ದು ಯಾರು ಎಂಬ ವಿಚಾರವು ತನಿಖೆಯಿಂದ ಹೊರ ಬರಬೇಕು ಎಂದರು.

ಸಂತ್ರಸ್ತ ಯುವತಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ನನ್ನ ತಂದೆ ತಾಯಿ ಎರಡು ಬಾರಿ, ನಾನು ಮೂರ್ನಾಲ್ಕು ಬಾರಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದೇನೆ. ಸಮಾಜದಲ್ಲಿ ನಮ್ಮ ಮಾನ ಹರಾಜಾಗಿದೆ. ರಮೇಶ್ ಜಾರಕಿಹೊಳಿ ನನ್ನನ್ನು ಕೆಲಸ ಕೊಡುವುದಾಗಿ ಹೇಗಿ ಬಳಸಿಕೊಂಡಿದ್ದಾರೆ. ನನಗೆ ಜೀವ ಬೆದರಿಕೆ ಇದ್ದು, ರಕ್ಷಣೆ ಕೊಡಿ ಎಂದು ಕೇಳಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News