ಸಕಲೇಶಪುರದಲ್ಲಿ ಧರ್ಮಗುರುಗಳ ಮೇಲಿನ ಹಲ್ಲೆ: ನಾಲ್ವರ ವಿರುದ್ಧ ಪ್ರಕರಣ ದಾಖಲು

Update: 2021-03-22 15:20 GMT

ಸಕಲೇಶಪುರ, ಮಾ.22: ಮಸೀದಿ ಧರ್ಮಗುರುಗಳ ಮೇಲೆ ಹಲ್ಲೆ ನಡೆಸಿರುವ ಕಿಡಿಗೇಡಿಗಳನ್ನು ಬಂಧಿಸುತ್ತೇವೆ ಎಂದು ಹಾಸನ ಜಿಲ್ಲಾ ಎಸ್ಪಿ ಶ್ರೀನಿವಾಸ್ ಗೌಡ ಭರವಸೆ ನೀಡಿದ್ದಾರೆ.

ಪಟ್ಟಣದ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಸೋಮವಾರ ಮುಸ್ಲಿಂ ಮುಖಂಡರೊಂದಿಗೆ ಮಾತನಾಡಿದ ಅವರು, ಈ ಘಟನೆಯನ್ನು ಮುಂದಿಟ್ಟುಕೊಂಡು ಶಾಂತಿ ಕದಡಲು ಮುಂದಾದರೆ ಅವರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ಮುಖಂಡ ಕೊಲ್ಲಹಳ್ಳಿ ಸಲೀಂ, ನಾವು ಬೇರೆಯವರ ಮೇಲೆ ದೂರು ಕೊಟ್ಟಿಲ್ಲ. ಹಲ್ಲೆ ಮಾಡಿರುವ ನೈಜ ಆರೋಪಿಗಳ ಮೇಲೆ ಧರ್ಮಗುರುಗಳು ದೂರು ನೀಡಿದ್ದು ಕೂಡಲೇ ಅವರನ್ನು ಬಂಧಿಸುವ ಕೆಲಸ ಮಾಡಬೇಕು. ಇನ್ನು 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ನಾವು ಶಾಂತಿಯುತ ಹೋರಾಟ ಮಾಡುತ್ತೇವೆ. ಎಸ್ಪಿ ಯವರ ಮಾತಿನ ಮೇಲೆ ನಮಗೆ ನಂಬಿಕೆಯಿದೆ ಎಂದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಗೋಪಿ, ಸರ್ಕಲ್ ಇನ್‌ಸ್ಪೆಕ್ಟರ್ ಗಿರೀಶ್, ಗ್ರಾಮಾಂತರ ಠಾಣೆ ಪಿಎಸ್‌ಐ ಚಂದ್ರಶೇಖರ್, ಯಾದ್ಗಾರ್ ಇಬ್ರಾಹಿಂ, ಫಾರೂಕ್ ಶಾಮಿಯಾನ, ಹಸೈನಾರ್ ಆನೆಮಹಾಲ್ ಹಾಜರಿದ್ದರು.

ಪ್ರಕರಣ ದಾಖಲು: ಹಲ್ಲೆಗೊಳಗಾದ ಧರ್ಮಗುರುವಿನ ಹೇಳಿಕೆ ಆಧರಿಸಿ ಸುಂಡೆಕೆರೆ ಹಾಗೂ ಬಿರಡಹಳ್ಳಿ ಮೂಲದ ತೇಜು, ಗುರು, ಉತ್ತಮ್, ಜಯರಾಮ್ ಎಂಬವರ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News