×
Ad

ಸಿಡಿ ಪ್ರಕರಣದಲ್ಲಿ 'ಕೋಟ್ಯಂತರ ರೂ.ವ್ಯವಹಾರ' ಆರೋಪ: ಸಮಗ್ರ ತನಿಖೆಗೆ ಡಿಕೆಶಿ ಒತ್ತಾಯ

Update: 2021-03-22 22:09 IST

ಬೆಂಗಳೂರು, ಮಾ.22: ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾದ ಸಿಡಿ ಪ್ರಕರಣದಲ್ಲಿ ಕೋಟ್ಯಂತರ ರೂ.ಗಳ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗುತ್ತಿದೆ. ನಾಲ್ಕು ತಿಂಗಳ ಹಿಂದೆಯೇ ಸಿಡಿ ವಿಚಾರದಲ್ಲಿ ನನ್ನನ್ನು ಬ್ಲ್ಯಾಕ್‍ಮೇಲ್ ಮಾಡಿದ್ದರು ಎಂದು ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. 100 ಕೋಟಿ ರೂ.ಗಳ ಬ್ಲ್ಯಾಕ್‍ಮೇಲ್ ಡೀಲ್ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಸೋಮವಾರ ವಿಧಾನಸಭೆಯಲ್ಲಿ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮ್ಮಿಶ್ರ ಸರಕಾರ ಬೀಳಿಸಲು ಯೋಗೇಶ್ವರ್ 9 ಕೋಟಿ ರೂ.ಸಾಲ ಪಡೆದಿದ್ದರು ಎಂದೂ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಸಿಡಿ ವಿಚಾರದಲ್ಲಿ 5 ಕೋಟಿ ರೂ.ಡೀಲ್ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 15 ಕೋಟಿ ರೂ.ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ ಈ ಎಲ್ಲ ವಿಚಾರಗಳ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು ಎಂದರು.

ನನ್ನ ಮನೆಯಲ್ಲಿ 41 ಲಕ್ಷ ರೂ.ಹಣ ಸಿಕ್ಕಿದ ವಿಚಾರದಲ್ಲಿ ಐಟಿ, ಈಡಿ ಸೇರಿದಂತೆ ಏನೆಲ್ಲ ತನಿಖೆಗಳು ನಡೆದವು. ಈಗ ಇಲ್ಲಿ ಕೋಟ್ಯಂತರ ರೂ.ಗಳ ವ್ಯವಹಾರ ಬಯಲಾಗುತ್ತಿದ್ದರೂ ಎಸಿಬಿಯಾಗಲಿ, ಐಟಿ, ಈಡಿ ಯಾಕೆ ಮೌನವಹಿಸಿದೆ ಗೊತ್ತಾಗುತ್ತಿಲ್ಲ ಎಂದು ಶಿವಕುಮಾರ್ ಹೇಳಿದರು.

ಗೃಹ ಸಚಿವರು ಮೊದಲು ಆ ವಿಡಿಯೋ ಬಗೆಗಿನ ಸತ್ಯಾಸತ್ಯತೆಯನ್ನು ಬಯಲು ಮಾಡಬೇಕು. ಆ ವಿಡಿಯೋ ನಿಜಾನಾ, ಅದನ್ನು ತಿರುಚಲಾಗಿದೆಯೇ ಎಂಬ ಮಾಹಿತಿ ಪಡೆದುಕೊಳ್ಳಬೇಕು. ತನಿಖೆಯನ್ನು ಯಾವುದೇ ಕಾರಣಕ್ಕೂ ಏಕಮುಖವಾಗಿ ಮಾಡಬಾರದು. ಇಲ್ಲಿ ಸಂತ್ರಸ್ತೆಯಾಗಿರುವ ಹೆಣ್ಣು ಮಗಳಿಗೆ ನ್ಯಾಯ ಕೊಡಿಸುವ ಕೆಲಸವು ಆಗಬೇಕಿದೆ ಎಂದು ಅವರು ಒತ್ತಾಯಿಸಿದರು.

ಬಸನಗೌಡ ಪಾಟೀಲ್ ಯತ್ನಾಳ್ ಇನ್ನು 400 ಸಿಡಿ ಇದೆ ಎಂದು ಹೇಳಿದ್ದಾರೆ. ವಿಧಾನಪರಿಷತ್ ಸದಸ್ಯ ವಿಶ್ವನಾಥ್ ಕೂಡ ಸಿಡಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಯನ್ನು ಬ್ಲ್ಯಾಕ್‍ಮೇಲ್ ಮಾಡಿ ಅನುದಾನ ಪಡೆದಿದ್ದಾರೆ ಎಂದು ಯತ್ನಾಲ್ ಹೇಳುತ್ತಾರೆ ಎಂದು ಶಿವಕುಮಾರ್ ಹೇಳುತ್ತಿದ್ದಂತೆ, ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಕೆ.ಜೆ.ಜಾರ್ಜ್, ಕಾಂಗ್ರೆಸ್ ಸದಸ್ಯರಿಗೆ ಅನುದಾನ ಕೊಡುವುದು ಇರಲಿ, ಕೊಟ್ಟಿರುವ 224 ಕೋಟಿ ರೂ.ಅನುದಾನವನ್ನೆ ಹಿಂಪಡೆದು ಬಿಜೆಪಿ ಸದಸ್ಯರು ಇರುವ ಕ್ಷೇತ್ರಗಳಿಗೆ ಹಂಚಿಕೆ ಮಾಡಿದ್ದಾರೆ ಎಂದು ದೂರಿದರು.

ನಂತರ ಮಾತು ಮುಂದುವರಿಸಿದ ಡಿ.ಕೆ.ಶಿವಕುಮಾರ್, ಇದರಲ್ಲಿ ಹನಿಟ್ರ್ಯಾಪ್ ಆಗಿದೆ ಎಂದು ಹೇಳುತ್ತಿದ್ದಾರೆ. ಹನಿ ಯಾರು ತಿಂದದ್ದು ಎಂದು ಪ್ರಶ್ನಿಸಿದರು, ಈ ವೇಳೆ ಎದ್ದು ನಿಂತ ಸಚಿವ ಸೋಮಶೇಖರ್, ಇಡಿ ರಾಜ್ಯ ಈ ಚಿತ್ರದ ಫೈನಾನ್ಸರ್ ಯಾರು, ಸ್ಕ್ರಿಪ್ಟ್ ಬರೆದವರು ಯಾರು, ನಿರ್ಮಾಪಕರು ಯಾರು ಅನ್ನೋದನ್ನು ತಿಳಿದುಕೊಳ್ಳಲು ಕಾಯುತ್ತಿದೆ. ಈಗಾಗಲೆ ಅವರ ಚಿತ್ರಗಳು ವಾಟ್ಸಪ್‍ನಲ್ಲಿ ಹರಿದಾಡುತ್ತಿವೆ ಎಂದು ಟೀಕಿಸಿದರು.

ಇದಕ್ಕೆ ತಿರುಗೇಟು ನೀಡಿದ ಶಿವಕುಮಾರ್, ಎಲ್ಲರ ಫೋನ್‍ಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಆದರೆ, ಸಚಿವರ ಫೋನ್ ಪಡೆದುಕೊಂಡಿಲ್ಲ. ಕಾಂಗ್ರೆಸ್‍ನವರ ವಿರುದ್ಧ ಆರೋಪಗಳು ಕೇಳಿ ಬರುತ್ತಿವೆ. ನಾವು ಅವರಿಗೆ ಬಟ್ಟೆ ಬಿಚ್ಚಲು ಹೇಳಿದ್ವಾ? ಕನ್ನಡಿಗರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಲು ಹೇಳಿದ್ವಾ? ಸಿಎಂ ಅತೀ ಭ್ರಷ್ಟ ಅಂತ ಹೇಳಿಸಿದ್ವಾ? ಹೆಣ್ಣು ಮಕ್ಕಳನ್ನು, ಮಾಧ್ಯಮಗಳಿಗೆ ಅವಹೇಳನ ಮಾಡಿ ಅಂತ ಹೇಳಿದ್ವಾ? ಸಿದ್ದರಾಮಯ್ಯ ಜೊತೆ ದಿನ ಮಾತನಾಡುತ್ತಾರಂತೆ, ಸಿದ್ದರಾಮಯ್ಯಗೆ ಡ್ಯಾಮೇಜ್ ಮಾಡಲು ಅವರು ಹೇಳಿದ್ದಾರೆ ಅಷ್ಟೇ ಎಂದು ಶಿವಕುಮಾರ್ ಹೇಳಿದರು.

ಸರಕಾರ, ರಾಜಕಾರಣಿಗಳ ಮರ್ಯಾದೆ ತೆಗೆದು ನಾನು ಮಾಡಿಲ್ಲ ಅಂದರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೆ ಇಲ್ಲ. ಯಾರೊಬ್ಬರೂ ಇವತ್ತು ರಾಜಕಾರಣಿಗಳನ್ನು ತಮ್ಮ ಮನೆಗೆ ಕರೆದು ಊಟ ಹಾಕುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಅವರು ತಿಳಿಸಿದರು.

ತಂತ್ರಜ್ಞಾನದಲ್ಲಿ ಇವತ್ತು ಏನು ಬೇಕಾದರೂ ಮಾಡಲು ಸಾಧ್ಯವಿದೆ. ಆದುದರಿಂದ, ನಾವು ಅಧಿಕೃತವಾಗಿ ದೃಢೀಕರಣಗೊಳ್ಳದಂತಹ ಸುದ್ದಿಗಳನ್ನು ನಮ್ಮ ವಿರುದ್ಧ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದೇವೆ. ಕಾನೂನಿನಲ್ಲಿ ಅದಕ್ಕೆ ಅವಕಾಶವಿದೆ. ಸಮ್ಮಿಶ್ರ ಸರಕಾರ ಬೀಳಿಸಿದ 17 ಜನರ ವಿರುದ್ಧ ಅಪಪ್ರಚಾರ ಮಾಡಲು ವೇದಿಕೆ ಸಿದ್ಧವಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದ್ದರಿಂದ ನಾವು ಕಾನೂನಿನ ರಕ್ಷಣೆಗೆ ಹೋಗಿದ್ದೇವೆ.

-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News