ಪರಿಷತ್‍ನಲ್ಲಿ ಬೆಲೆ ಏರಿಕೆ ಕುರಿತು ಚರ್ಚೆ: 'ವಾರ್ತಾಭಾರತಿ' ಸಂಪಾದಕೀಯ ಉಲ್ಲೇಖಿಸಿದ ವಿಪಕ್ಷ ನಾಯಕ ಪಾಟೀಲ್

Update: 2021-03-22 17:22 GMT

ಬೆಂಗಳೂರು, ಮಾ.22: ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಅಂಬಾನಿ ಕಂಪೆನಿ ಕೃಷ್ಣ ಗೋದಾವರಿ ಭಾಗದಲ್ಲಿರುವ ತೈಲ ನಿಕ್ಷೇಪ, ರೈತರ ಉತ್ಪನ್ನಗಳು ಹಾಗೂ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಣ್ಣಿಟ್ಟಿದ್ದಾರೆಂದು ವಿಧಾನಪರಿಷತ್‍ನ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಆರೋಪಿಸಿದ್ದಾರೆ.

ಸೋಮವಾರ ವಿಧಾನಪರಿಷತ್‍ನ ಮಧ್ಯಾಹ್ನದ ಕಲಾಪದಲ್ಲಿ ನಿಯಮ 68ರಡಿ ಬೆಲೆ ಏರಿಕೆ ಕುರಿತು ಮಾತನಾಡಿದ ಅವರು, ಸಾರ್ವಜನಿಕ ಉದ್ಯಮಗಳನ್ನು, ಸಂಪತ್ತನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಅಂಬಾನಿ ಸೇರಿದಂತೆ ಹಲವು ಕಾರ್ಪೊರೇಟ್ ಕಂಪೆನಿಗಳು ಮುಂದಾಗಿವೆ. ಅದಕ್ಕೆ ಪೂರಕವಾಗಿ ಕೇಂದ್ರ ಸರಕಾರ ನಡೆದುಕೊಳ್ಳುತ್ತಿದೆ ಎಂದು ಆಪಾಧಿಸಿದ್ದಾರೆ.

ಯುಪಿಎ ಸರಕಾರದ ಅವಧಿಯಲ್ಲಿ ಪೆಟ್ರೋಲ್ ಬೆಲೆ ಸ್ವಲ್ಪಪ್ರಮಾಣದಲ್ಲಿ ಏರಿಕೆ ಮಾಡಿದಾಗ ಬಿಜೆಪಿ ದೇಶಾದ್ಯಂತ ಉಗ್ರವಾಗಿ ಪ್ರತಿಭಟಿಸಿತು. ಹಾಗೂ ನರೇಂದ್ರ ಮೋದಿ ತಮ್ಮ ಚುನಾವಣಾ ಭಾಷಣದಲ್ಲಿ ಪೆಟ್ರೋಲ್ ಬೆಲೆ ಏರಿಕೆಯನ್ನು ಮುಖ್ಯ ವಿಷಯವನ್ನಾಗಿಸಿಕೊಂಡು, ಬಿಜೆಪಿ ಅಧಿಕಾರಕ್ಕೆ ಬಂದರೆ ಪೆಟ್ರೋಲ್ ಬೆಲೆ ದರವನ್ನು ಕಡಿಮೆ ಮಾಡಲಾಗುವುದೆಂದು ಭರವಸೆ ನೀಡಿದ್ದರು. ಆದರೆ, ಸದ್ಯ ಅಂತರ್‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ದರ ಕಡಿಮೆಯಿದ್ದರೂ ದೇಶದಲ್ಲಿ ತೈಲ ದರವನ್ನು ಏರಿಕೆ ಮಾಡುತ್ತಲೇ ಹೋಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ವಾರ್ತಾಭಾರತಿ' ಸಂಪಾದಕೀಯ ಪ್ರಸ್ತಾವ

ವಿಧಾನಪರಿಷತ್‍ನಲ್ಲಿ ಬೆಲೆ ಏರಿಕೆ ಕುರಿತು ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ನಿಯಮ 68ರಡಿ ಮಾತನಾಡುವಾಗ, ವಾರ್ತಾಭಾರತಿ ಪತ್ರಿಕೆಯ ಸಂಪಾದಕೀಯವನ್ನು ಪ್ರಸ್ತಾವ ಮಾಡಿದ್ದಾರೆ. ‘ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ಪ್ರಧಾನಿ ನುಡಿದ ಹಸಿ ಸುಳ್ಳು’ ಎಂಬ ಸಂಪಾದಕೀಯ ತಲೆ ಬರಹವನ್ನು ಓದುವ ಮೂಲಕ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News