×
Ad

ಚಿಕ್ಕಮಗಳೂರು: ಮಾರುಕಟ್ಟೆಯಲ್ಲಿ ಎಲೆಕೋಸು ಬೆಲೆ ಕುಸಿತ; ಬೇಸತ್ತ ರೈತನಿಂದ ಬೆಳೆ ನಾಶ

Update: 2021-03-23 20:41 IST

ಚಿಕ್ಕಮಗಳೂರು, ಮಾ.23: ಸತತ ಮೂರು ವರ್ಷಗಳಿಂದ ರೈತರು ಬೆಳೆದ ಎಲೆ ಕೋಸಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದ ಪರಿಣಾಮ ಬೇಸತ್ತ ರೈತರೊಬ್ಬರು ತಾನು ಎರಡು ಎಕರೆಯಲ್ಲಿ ಬೆಳೆದಿದ್ದ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶ ಮಾಡಿದ ಘಟನೆ ಮಂಗಳವಾರ ತಾಲೂಕಿನ ಹಿರೇಗೌಜ ಗ್ರಾಮದಲ್ಲಿ ವರದಿಯಾಗಿದೆ.

ಹಿರೇಗೌಜ ಗ್ರಾಮದ ರೈತ ಬಸವರಾಜು ಎಂಬವರು ಕಳೆದ ಅನೇಕ ಕೆಲ ವರ್ಷಗಳಿಂದ ತಮ್ಮ ಎರಡು ಎಕರೆ ಜಮೀನಿನಲ್ಲಿ ಎಲೆಕೋಸು ಬೆಳೆದಿದ್ದು, ಈ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕಿರಲಿಲ್ಲ. ಸತತ ಮೂರು ವರ್ಷಗಳಿಂದ ರೈತ ಬಸವರಾಜು ಬೆಳೆದ ಎಲೆಕೋಸಿಗೆ ಸೂಕ್ತ ಬೆಲೆ ಸಿಗದೇ ಬೆಳೆಯಲು ಮಾಡಿದ್ದ ಖರ್ಚು ಕೂಡ ಕೈಗೆ ಬಂದಿರಲಿಲ್ಲ.

ಎಲೆಕೋಸು ಬೆಳೆಯಲು ರೈತ ಬಸವರಾಜು ಪ್ರತೀ ಎಕರೆಗೆ 35-40 ಸಾವಿರ ರೂ ಖರ್ಚು ಮಾಡಿದ್ದು, ಸತತ ಮೂರು ವರ್ಷಗಳಿಂದ ತಾನು ಬೆಳೆದ ಬೆಳೆಯ ಅಸಲೂ ಕೂಡ ಸಿಗದ ಪರಿಣಾಮ ಬೇಸತ್ತಿದ್ದ ಅವರು, ಈ ಬಾರಿಯಾದರೂ ಎಲೆಕೋಸಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಬೆಳೆ ಕಟಾವಿಗೆ ಬಂದಿದ್ದರೂ ಮಾರುಕಟ್ಟೆಯಲ್ಲಿ ಎಲೆಕೋಸನ್ನು ಕೇಳುವವರೂ ಇಲ್ಲದಂತಾಗಿತ್ತು.
ಇದರಿಂದ ಮತ್ತಷ್ಟು ನೊಂದುಕೊಂಡಿದ್ದ ರೈತ ಬಸವರಾಜು ಮಂಗಳವಾರ ಬೆಳಗ್ಗೆ ಟ್ಯ್ರಾಕ್ಟರ್ ಬಳಸಿ ಎಕರೆಯಲ್ಲಿ ಸಮೃದ್ಧವಾಗಿ ಬೆಳದಿದ್ದ ಎಲೆಕೋಸು ಬೆಳೆ ಸಂಪೂರ್ಣವಾಗಿ ನಾಶ ಮಾಡಿದ್ದಾರೆ. 

ತಾಲೂಕಿನ ಹಿರೇಗೌಜ ಗ್ರಾಮದ ವ್ಯಾಪ್ತಿಯಲ್ಲಿ ರೈತರು ಸತತ ಬರದಿಂದ ನಲುಗಿದ್ದು, ಈ ಬಾರಿಯ ಮಳೆಗಾಲದಲ್ಲಿ ಈ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದರಿಂದ ರೈತರು ತರಕಾರಿ ಬೆಳೆಯತ್ತ ಮುಖ ಮಾಡಿದ್ದರು. ಈ ಪೈಕಿ ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿ ಕೆಲ ರೈತರು ಎಲೆಕೋಸು ಬೆಳೆಯಲು ಮುಂದಾಗಿದ್ದು, ಬಸವರಾಜು ಸೇರಿದಂತೆ ಕೆಲ ರೈತರು ಎಲೆಕೋಸನ್ನು ಬೆಳೆದಿದ್ದರು. 

ಈ ಭಾಗದಲ್ಲಿ ಎಲೆಕೋಸು ಬೆಳೆದ ಮತ್ತಷ್ಟು ಕೃಷಿಕರು ಬೆಳೆ ನಾಶಕ್ಕೆ ಮುಂದಾಗಿದ್ದಾರೆಂದು ತಿಳಿದು ಬಂದಿದ್ದು, ಸಂಬಂಧಿಸದ ಕೃಷಿ ಅಧಿಕಾರಿಗಳು ರೈತರ ಸಮಸ್ಯೆ ಆಲಿಸುವ ಮೂಲಕ ಪರಿಹಾರ ಕಲ್ಪಿಸಲು ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News