ಮಡಿಕೇರಿ: ಕೊಲೆ ಪ್ರಕರಣ; ಆರೋಪಿಯ ಬಂಧನ
ಮಡಿಕೇರಿ, ಮಾ.23 : ಕಳಕೇರಿ ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಲಬ್ ಮಹೀಂದ್ರ ರೆಸಾರ್ಟ್ ಸಮೀಪ ಫೆ.22ರಂದು ನಡೆದಿದ್ದ ಲಲಿತ(65) ಎಂಬವರ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಜಿಲ್ಲಾ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ನಿವಾಸಿ, ಖಾಸಗಿ ಕಂಪೆನಿಯೊಂದರಲ್ಲಿ ಹೊರ ಗುತ್ತಿಗೆ ಸಿಬ್ಬಂದಿ, ಮೆಕಾನಿಕಲ್ ಇಂಜಿನಿಯರ್ ಪದವೀಧರನಾಗಿರುವ ಅನಿಲ್(30) ಎಂಬಾತ ಬಂಧಿತ ಆರೋಪಿ.
ಬಂಧಿತನಿಂದ 2.80 ಲಕ್ಷ ರೂ. ಮೌಲ್ಯದ 72 ಗ್ರಾಂ ಚಿನ್ನಾಭರಣ, 4 ಸಾವಿರ ರೂ. ನಗದು, ಕೃತ್ಯ ಎಸಗಿದ ಬಳಿಕ ಪರಾರಿಯಾಗಲು ಬಳಸಿದ್ದ ಬೈಕ್(ಕೆ.ಎ.20-ಯು.9735) ಮತ್ತು ಹತ್ಯೆಗೆ ಬಳಸಿದ್ದ ಕಬ್ಬಿಣದ ರಾಡ್ ಒಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಅನಿಲ್ ಸಾಲ ತೀರಿಸುವ ಉದ್ದೇಶದಿಂದಲೇ ಕೊಲೆ ಮಾಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಮಾಹಿತಿ ನೀಡಿದ್ದಾರೆ.
ಕಳವು ಮಾಡಲಾಗಿದ್ದ 50 ಸಾವಿರ ರೂ. ಪೈಕಿ ಕೇವಲ 4 ಸಾವಿರ ರೂ.ಗಳನ್ನು ಮಾತ್ರವೇ ಆರೋಪಿ ಬಳಿಯಿಂದ ವಶಕ್ಕೆ ಪಡೆಯಲಾಗಿದ್ದು, ಉಳಿದ ಹಣವನ್ನು ಆರೋಪಿ ಅನಿಲ್ ಖರ್ಚು ಮಾಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಮಡಿಕೇರಿ ಹೊರ ವಲಯ ಕ್ಲಬ್ ಮಹಿಂದ್ರ ಸಮೀಪದ ಕಳಕೇರಿ ನಿಡುಗಣೆ ಗ್ರಾಮದ ನಿವಾಸಿ ಮಾಜಿ ಯೋಧ ದಿ.ಬೈಲಾಡಿ ಹೊನ್ನಪ್ಪ ಅವರ ಪತ್ನಿ ಲಲಿತ(65) ಅವರನ್ನು ಫೆ. 22ರ ಸಂಜೆಯ ವೇಳೆ ಭರ್ಬರವಾಗಿ ಹತ್ಯೆ ಮಾಡಲಾಗಿತ್ತು. ಮಾತ್ರವಲ್ಲದೇ, ಮನೆಯಲ್ಲಿಟ್ಟಿದ್ದ 50 ಸಾವಿರ ನಗದು, 2.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಆರ್ಮಿ ಕ್ಯಾಂಟೀನ್‍ನ ದುಬಾರಿ ದರದ ಮದ್ಯದ ಬಾಟಲಿಗಳನ್ನು ಕಳವು ಮಾಡಲಾಗಿತ್ತು. ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೃತ ಮಹಿಳೆ ಲಲಿತ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಮಗಳು ಚಂದ್ರಾವತಿ ಕಲ್ಲುಗುಂಡಿ ಹಾಗೂ ಮತ್ತೋರ್ವ ಮಗಳು ಮೀನಾ ಬೆಂಗಳೂರಿನಲ್ಲಿ ವಾಸವಿದ್ದರೆ ಪುತ್ರ ಗೋಪಾಲಕೃಷ್ಣ ಮೈಸೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಲಲಿತಾ ಅವರ ಮನೆ ಇರುವ ಪ್ರದೇಶದ ಸುತ್ತ ಕಾಫಿ ತೋಟವಿದ್ದು, ಫೆ. 22ರಂದು ಎಂದಿನಂತೆ ಸಂಜೆ ತೋಟದ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ಈ ಸಂದರ್ಭ ದುಷ್ಕರ್ಮಿ ಕಬ್ಬಿಣದ ರಾಡ್‍ನಿಂದ ಅವರ ತೆಲೆಯ ಹಿಂಭಾಗಕ್ಕೆ ಹೊಡಿದು ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಆರೋಪಿ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಸಾಲದ ಮೊತ್ತ ಏರಿಕೆಯಾದಾಗ ಅನಿಲ್ ಫೆ.22ರಂದು ಸಂಜೆ ಲಲಿತ ಅವರನ್ನು ಕೊಲೆ ಮಾಡಿ ಚಿನ್ನಾಭರಣ, ನಗದನ್ನು ದೋಚಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಲಲಿತ ಅವರನ್ನು ಕೊಲೆ ಮಾಡಿದ ಬಳಿಕವೂ ಒಂದು ವಾರ ರೆಸಾರ್ಟ್‍ನಲ್ಲಿ ಕೆಲಸ ಮಾಡಿಕೊಂಡಿದ್ದ. ಬಳಿಕ ಥೈರಾಯ್ಡ್ ಸಮಸ್ಯೆ ಇದೆ ಎಂದು ಹೇಳಿ ತನ್ನ ಸ್ವಂತ ಊರಾದ ಮೂಡುಬಿದಿರೆಗೆ ತೆರಳಿದ್ದ. ಆರೋಪಿಯ ಜಾಡನ್ನು ಪತ್ತೆ ಹಚ್ಚಿದ ಜಿಲ್ಲಾ ಅಪರಾಧ ಪತ್ತೆ ದಳ ಮಾ.22ರಂದು ಮೂಡುಬಿದಿರೆಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ಮಡಿಕೇರಿಗೆ ಕರೆತಂದು ವಿಚಾರಣೆ ನಡೆಸಿದಾಗ ಕೊಲೆಯ ಸತ್ಯಾಸತ್ಯತೆ ಬೆಳಕಿಗೆ ಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಮತ್ತು ಡಿವೈಎಸ್‍ಪಿ ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಕಿರಣ್, ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಯೋಗೇಶ್ ಕುಮಾರ್, ನಿರಂಜನ್, ಶರತ್ ರೈ, ಮಡಿಕೇರಿ ಗ್ರಾಮಾಂತರ ಠಾಣೆಯ ರವಿ ಕುಮಾರ್, ಮಂಜುನಾಥ್, ದಿನೇಶ್, ಸೋಮಶೇಖರ್ ಸಜ್ಜನ್, ಸಿದ್ದಾಪುರ ಪೊಲೀಸ್ ಠಾಣೆಯ ಎಎಸ್‍ಐ ತಮ್ಮಯ್ಯ, ಸಿಬ್ಬಂದಿ ಲವ ಕುಮಾರ್, ಡಿಸಿಐಬಿ ಎಎಸ್‍ಐ ಹಮೀದ್, ಅನಿಲ್ ಕುಮಾರ್, ವೆಂಕಟೇಶ್, ವಸಂತ, ಸುರೇಶ್, ಶಶಿ ಕುಮಾರ್, ಸಿಡಿಆರ್ ಶೆಲ್‍ನ ರಾಜೇಶ್, ಗಿರೀಶ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.