ಅಶ್ಲೀಲ ಸಿಡಿ ಬಿಡುಗಡೆ ಪ್ರಕರಣ: 5ನೆ ನೋಟಿಸ್‍ಗೂ ಉತ್ತರಿಸದ ಯುವತಿ
ಬೆಂಗಳೂರು, ಮಾ.23: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಗೆ ವಿಚಾರಣೆಗೆ ಹಾಜರಾಗುವಂತೆ ಸಿಟ್(ವಿಶೇಷ ತನಿಖಾ ತಂಡ) ಅಧಿಕಾರಿಗಳು 5ನೆ ಬಾರಿಗೆ ನೋಟಿಸ್ ಜಾರಿಗೊಳಿಸಿದರೂ, ಯಾವುದೇ ಉತ್ತರ ಬಂದಿಲ್ಲ.
ಲಿಖಿತ ರೂಪದಲ್ಲಿ ವಾಟ್ಸ್ ಆ್ಯಪ್ ಹಾಗೂ ಇ-ಮೇಲ್ ಮೂಲಕವೂ ಯುವತಿಗೆ ನೋಟಿಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಇ-ಮೇಲ್‍ಗೆ ಕಳುಹಿಸಲಾಗಿದ್ದ ನೋಟಿಸ್ ಅನ್ನು ಯುವತಿ ನೋಡಿದ್ದಾಳೆ. ಆದರೆ, ಆಕೆಯಿಂದ ಯಾವುದೇ ಉತ್ತರಗಳು ಬಂದಿಲ್ಲ ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮತ್ತೊಂದಡೆ ಸಿಟ್ ತನಿಖಾಧಿಕಾರಿಗಳು ಯುವತಿಗಾಗಿ ಹುಡುಕಾಟ ನಡೆಸಿದ್ದಾರೆ. ಕರ್ನಾಟಕ ಮಾತ್ರವಲ್ಲ ಚೆನ್ನೈ, ಹೊಸದಿಲ್ಲಿ, ಗೋವಾ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಯುವತಿಗಾಗಿ ಶೋಧ ನಡೆದಿದ್ದು, ಯಾವುದೇ ಸುಳಿವು ಸಿಗುತ್ತಿಲ್ಲ ಎಂದು ಸಿಟ್ ಮೂಲಗಳು ತಿಳಿಸಿವೆ.
ಪೋಷಕರ ಹೇಳಿಕೆ ದಾಖಲು?: ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರಿ ಅಪಹರಣ ಕುರಿತು ದೂರು ಸಲ್ಲಿಕೆ ಮಾಡಿರುವ ಯುವತಿಯ ಪೋಷಕರನ್ನು ಸಿಟ್ ತನಿಖಾಧಿಕಾರಿಗಳು ವಿಚಾರಣೆಗೊಳಪಡಿಸಿ, ಅವರ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.