ಗೋ ಹತ್ಯೆ ನಿಷೇಧ ಕಾಯ್ದೆಯಿಂದಾಗಿ ಲಕ್ಷಾಂತರ ಜನರು ನಿರುದ್ಯೋಗಿಗಳಾಗಿದ್ದಾರೆ: ನಸೀರ್ ಅಹ್ಮದ್
ಬೆಂಗಳೂರು, ಮಾ.23: ಗೋ ಹತ್ಯೆ ನಿಷೇಧ ಕಾಯ್ದೆಯಿಂದಾಗಿ ಲಕ್ಷಾಂತರ ಜನರು ನಿರುದ್ಯೋಗಿಗಳಾಗಿದ್ದಾರೆ. ಅದರಿಂದ ಗಳಿಸಿದ್ದಾದರೂ ಏನೆಂಬುದನ್ನು ಸರಕಾರ ಸ್ಪಷ್ಟ ಪಡಿಸಬೇಕೆಂದು ಕಾಂಗ್ರೆಸ್ ಸದಸ್ಯ ನಸೀರ್ ಅಹ್ಮದ್ ತಿಳಿಸಿದ್ದಾರೆ.
ಮಂಗಳವಾರ ಪರಿಷತ್‍ನ ಮಧ್ಯಾಹ್ನದ ಕಲಾಪದಲ್ಲಿ ನಿಯಮ 68ರಡಿ ಮಾತನಾಡಿದ ಅವರು, ಗೋ ಹತ್ಯೆ ನಿಷೇಧ, ಸಿಎಎ, ಎನ್‍ಆರ್‍ಸಿಯಿಂದ ಏನಾದರು ಪ್ರಯೋಜನವಿದೆಯೇ. ರಾಜ್ಯದ ಜನತೆಯನ್ನು ರಾಜ್ಯ ಸರಕಾರವೇ ಬಡತನಕ್ಕೆ ನೂಕುವಂತಹ ಕಾನೂನುಗಳನ್ನು ರೂಪಿಸುತ್ತಿದೆ. ಈ ಬಗ್ಗೆ ಪುನಃ ಅವಲೋಕನ ಮಾಡಿಕೊಳ್ಳಬೇಕೆಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಂಕಷ್ಟದ ಸಮಯದಲ್ಲಿ ತಾವು ವಿದೇಶಗಳಿಗೆ ಸುತ್ತುವುದಕ್ಕಾಗಿ ಸುಮಾರು 8ಸಾವಿರ ಕೋಟಿ ರೂ.ವೆಚ್ಚದಲ್ಲಿ ವಿಶೇಷ ವಿಮಾನವನ್ನು ಕೊಂಡಿದ್ದಾರೆ. ಇದು ಅಗತ್ಯವಿತ್ತೆ. ನಮ್ಮಲ್ಲಿ ವಿಮಾನಗಳಿರಲಿಲ್ಲವೇ. ಇಷ್ಟು ದಿನ ಯಾವ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆಂದು ಅವರು ಪ್ರಶ್ನಿಸಿದ್ದಾರೆ.
ಕೋವಿಡ್ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನರ ಪರವಾಗಿ ಉತ್ತಮವಾದ ಕಾರ್ಯಕ್ರಮಗಳನ್ನು ರೂಪಿಸುತ್ತಾರೆಂದು ನಿರೀಕ್ಷೆ ಮಾಡುತ್ತಾ ಜನರು ಕಾದು ಕುಳಿತರು. ಆದರೆ, ಪ್ರಧಾನಿ ನರೇಂದ್ರ ಮೋದಿ ಲಾಕ್‍ಡೌನ್ ಸಮಯದಲ್ಲಿ ನವಿಲುಗಳ ಜತೆ ವಾಕಿಂಗ್, ಅವುಗಳಿಗೆ ಊಟ ತಿನ್ನಿಸುವುದನ್ನು ಮಾತ್ರ ನಾವು ನೋಡಲು ಸಾಧ್ಯವಾಯಿತೆಂದು ಅವರು ಟೀಕಿಸಿದ್ದಾರೆ.
ಅಗತ್ಯ ವಸ್ತುಗಳ ಬೆಲೆಏರಿಕೆಯು ಪೆಟ್ರೋಲ್, ಡೀಸೆಲ್ ದರಗಳ ಮೇಲೆ ಅವಲಂಬಿತವಾಗಿರುತ್ತವೆ. ಹೀಗಾಗಿ ಪೆಟ್ರೋಲಿಯಂ ದರಗಳನ್ನು ಕಡಿಮೆ ಮಾಡಿದರೆ ಇನ್ನಿತರೆ ವಸ್ತುಗಳ ಬೆಲೆಗಳು ಕಡಿಮೆ ಆಗಲಿವೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಬೆಲೆ ಏರಿಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.