ಶಿವಮೊಗ್ಗ: 'ಪೋಷಣ್ ಪಕ್ವಾಡ್-2021' ಕಾರ್ಯಕ್ರಮ
ಶಿವಮೊಗ್ಗ: ಕಾಲ ಕಾಲಕ್ಕೆ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದಷ್ಟೇ ಅಲ್ಲ, ಅದರ ಸದುಪಯೋಗವಾಗಿದೆಯೇ ಎಂದು ಗಮನಿಸಿ ಪೂರ್ಣ ಪ್ರಮಾಣದಲ್ಲಿ ಅದರ ಸದುಪಯೋಗವಾದಾಗ ಮಾತ್ರ ಕಾರ್ಯಕ್ರಮಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಎಲ್.ವೈಶಾಲಿ ಹೇಳಿದ್ದಾರೆ.
ಅವರು ಸರ್ಕಾರಿ ಬಾಲಕರ ಬಾಲಮಂದಿರದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಆಯುಷ್ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಪೋಷಣ್ ಪಕ್ವಾಡ್-2021ರ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಗರ್ಭಿಣಿ ಹಾಗೂ ಬಾಣಂತಿ ಹಾಗೂ ಮಕ್ಕಳಿಗೆ ಸರ್ಕಾರ ಮಾತೃ ವಂದನಾ, ಮಾತೃ ಪೂರ್ಣ ಸೇರಿದಂತೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಮಗು ತಾಯಿಯ ಗರ್ಭದಲ್ಲಿ ಇರುವಾಗಲೇ ತಾಯಿಗೆ ಮತ್ತು ಮಗುವಿಗೆ ಉತ್ತಮ ಆರೋಗ್ಯ ನೀಡುವಲ್ಲಿ ಪೌಷ್ಠೀಕಾಂಶ ವಿರುವ ಆಹಾರ, ಉಚಿತ ಆರೋಗ್ಯ ತಪಾಸಣೆ, ಕಾಲ ಕಾಲಕ್ಕೆ ಆರೋಗ್ಯ ಸಲಹೆ, ಚುಚ್ಚು ಮದ್ದು, ಅಗತ್ಯ ಔಷದೋಪಚಾರಗಳನ್ನು ಸರ್ಕಾರ ನಿಯಮಿತವಾಗಿ ಆಶಾ ಕಾರ್ಯಕರ್ತೆಯರ ಮೂಲಕ ನೀಡುವಂತಹ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದೆ. ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪರಸ್ಪರ ಸಮನ್ವಯತೆಯಿಂದ ತಾಯಿ ಮಗುವಿನ ಆರೋಗ್ಯ ವೃದ್ಧಿಗೆ ಕ್ರಮಕೈಗೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಈ ಯೋಜನೆ ಜಾರಿಯಲ್ಲಿ ಶಿವಮೊಗ್ಗ ಜಿಲ್ಲೆ ೨೪ನೇ ಸ್ಥಾನದಿಂದ ೨ ಸ್ಥಾನಕ್ಕೆ ಬಂದಿರುವುದು ಸಂತೋಷದ ವಿಚಾರ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ತಮ್ಮ ಸಂಸಾರದ ಎಲ್ಲರಿಗೆ ಊಟ ಬಡಿಸಿ, ಬಳಿಕ ಅಳಿದು ಉಳಿದುದ್ದನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಬಾಣಂತಿಯರಿಗೆ ಕೊಟ್ಟ ಆಹಾರವನ್ನು ಅವರು ಮನೆಗೆ ತೆಗೆದುಕೊಂಡು ಹೋಗಿ ಅವರೇ ತಿನ್ನುತ್ತಾರೋ ಎನ್ನುವುದನ್ನೂ ದೃಢಪಡಿಸಿಕೊಳ್ಳಬೇಕು. ಮೊಟ್ಟೆಯನ್ನು ಸ್ಥಳದಲ್ಲೇ ಬೇಯಿಸಿ ತಿನ್ನಿಸಿ ಕಳುಹಿಸಬೇಕು. ಮನೆಗೆ ತೆಗೆದುಕೊಂಡು ಹೋಗಲು ಮೊಟ್ಟೆಯನ್ನು ಕೊಡಬಾರದು. ತಾಯಿ ತಾನು ಪೌಷ್ಠಿಕ ಆಹಾರ ಸೇವಿಸಿದಾಗ ಮಗುವಿಗೂ ಅದರ ಲಾಭ ಸಿಗುತ್ತದೆ. ಆಶಾ ಕಾರ್ಯಕರ್ತೆಯರು ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿವಹಿಸಿ ಶೇ.100 ಕ್ಕೆ 100 ಯೋಜನೆಯ ಸಫಲತೆ ಮುಟ್ಟಿಸುವಲ್ಲಿ ಶ್ರಮಿಸಬೇಕು ಎಂದರು.
ಅಲ್ಲದೇ, ಆರೋಗ್ಯ ಇಲಾಖೆಯಿಂದಲೂ ಜಂತು ಹುಳು ನಿರ್ಮೂಲನೆಗೆ ಮಾತ್ರೆ, ಮೆಡಿಕಲ್ ಕಿಟ್, ಕಾಲಕಾಲಕ್ಕೆ ತಪಾಸಣೆ ಸೇರಿದಂತೆ ಅನೇಕ ಸೌಲಭ್ಯಗಳಿವೆ. ಮಹಿಳೆಗೆ ಆಹಾರ ಸೇವನೆಯನ್ನು ಒಂದು ಶಿಸ್ತುಬದ್ಧ ಕ್ರಮವನ್ನಾಗಿಸಬೇಕು. ಜೊತೆಗೆ ವೈಯುಕ್ತಿಕ ಸ್ವಚ್ಛತೆಯ ಬಗ್ಗೆಯೂ ತಿಳಿಸಿಕೊಡಬೇಕು. ಅವರು ಕೂಡ ಈ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಪ್ರಮುಖವಾಗಿ ಪೌಷ್ಠಿಕ ಆಹಾರ ಸೇವನೆಗೆ ಒತ್ತು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಎಂ.ಸರಸ್ವತಿ, ಡಿ.ಹೆಚ್.ಓ. ಡಾ. ರಾಜೇಶ್ ಸುರಗಿಹಳ್ಳಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಎ.ಎಸ್.ಪುಷ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಉಪ ನಿರ್ದೇಶಕರಾದ ಸಿ.ಸುರೇಶ್, ಸಿ.ಗಂಗಾಬಾಯಿ, ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಜ್ಯೋತಿ, ನೇತ್ರಾವತಿ ಬಳಗನೂರ್‌ಮಠ್ ಮುಂತಾದವರು ಇದ್ದರು.