ಕುವೆಂಪು ವಿಶ್ವವಿದ್ಯಾಲಯದ ಘನತೆಗೆ ಧಕ್ಕೆ ತಂದವರ ವಿರುದ್ಧ ಕಾನೂನು ಕ್ರಮ: ಕುಲಪತಿ ಪ್ರೊ. ಬಿ.ವಿ.ವೀರಭದ್ರಪ್ಪ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಸುಮಾರು 35 ಅಧ್ಯಾಪಕರು ಮತ್ತು ಸಿಬ್ಬಂದಿಗಳ ಮೇಲೆ ಕೆಲವು ಸಂಘಟನೆಗಳು ಸುಳ್ಳು ಆರೋಪ ಮಾಡಿ ದೂರು ದಾಖಲಿಸಿ ವಿವಿಯ ಘನತೆಗೆ ಧಕ್ಕೆ ತರಲಾಗಿದ್ದು, ಇದರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಕುಲಪತಿ ಪ್ರೊ. ಬಿ.ವಿ.ವೀರಭದ್ರಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈ ಭೀಮ್ ಕನ್ನಡ ಜಾಗೃತಿ ಮತ್ತು ಎಸ್.ಸಿ. ಎಸ್.ಟಿ. ಅಸಂಘಟಿತ ಕಾರ್ಮಿಕರ ಅಭಿವೃದ್ಧಿ ಸಂಘದ ಹೆಸರಿನ ಸಂಘಟನೆ ಈ ದೂರು ನೀಡಿದ್ದು, ಇದು ಸತ್ಯಕ್ಕೆ ದೂರವಾಗಿದೆ. ವಿಶ್ವವಿದ್ಯಾನಿಲಯದ ಘನತೆಗೆ ಚ್ಯುತಿ ತಂದಿದೆ. ಇದಕ್ಕೆ ಸಂಬಂಧಿಸಿದಂತೆ ನಮ್ಮ ವಕೀಲರನ್ನು ಸಂಪರ್ಕಿಸಿ ಅದರ ಆಧಾರದ ಮೇಲೆ ಮರುದೂರು ದಾಖಲಿಸುವುದು ಅಥವಾ ಹೆಚ್ಚಿನ ಕಾನೂನು ಕ್ರಮ ತೆಗೆದುಕೊಳ್ಳಲು ವಿಶ್ವವಿದ್ಯಾನಿಲಯ ತೀರ್ಮಾನಿಸಿದೆ ಎಂದರು.
ಕೆಲವು ಸಂಘಟನೆಗಳು ನೀಡಿರುವ ದೂರಿನಂತೆ ವಿಶ್ವವಿದ್ಯಾನಿಲಯದಲ್ಲಿ ಯಾವ ಅಕ್ರಮಗಳು ನಡೆದಿಲ್ಲ. ಮುಖ್ಯವಾಗಿ ವಿವಿಯಲ್ಲಿ ಯಾವ ಡಿಜಿಟಲ್ ಆಗಿಲ್ಲ ಎಂದು ಆರೋಪಿಸುತ್ತವೆ. ಆದರೆ ವಿವಿಯಲ್ಲಿ ಪರೀಕ್ಷೆ ವಿಭಾಗ ಅಂಕಪಟ್ಟಿ ಸೇರಿದಂತೆ ಎಲ್ಲವು ಡಿಜಿಟಲ್ ಆಗಿದೆ ಎಂದು ಪ್ರಾತ್ಯಕ್ಷತೆಯ ಮೂಲಕ ವಿವರಿಸಿದರು.
ಅಂಕಪಟ್ಟಿ ಮತ್ತು ಪರೀಕ್ಷೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಇಡೀ ದೇಶದಲ್ಲಿಯೇ ಅತ್ಯಂತ ವೇಗವಾಗಿ ಫಲಿತಾಂಶ ಪ್ರಕಟಿಸಿದ್ದು ಕುವೆಂಪು ವಿವಿ. ಇದಕ್ಕೆ ಸಂಬಂಧಿಸಿದಂತೆ ನಾವು ಅನಿವಾರ್ಯವಾಗಿ ಖಾಸಗಿಯವರಿಗೆ ತಂತ್ರಜ್ಞಾನದ ಗುತ್ತಿಗೆ ಕೊಟ್ಟಿದ್ದು ನಿಜ. ಹಾಗಂತ ಅದು ಎಲ್ಲಿಯೂ ಲೋಪವಾಗಿಲ್ಲ. ಎಲ್ಲವು ಪಾರದರ್ಶಕವಾಗಿದೆ ಎಂದು ಕುಲಪತಿಗಳು ಸಮರ್ಥಿಸಿಕೊಂಡರು.
ಕುವೆಂಪು ವಿವಿಯಲ್ಲಿ ವಿದ್ಯಾರ್ಥಿಗಳ ಉತ್ಕೃಷ್ಟ ಕಲಿಕೆ ಸಂಶೋಧನೆ ಪದವಿ ಫಲಿತಾಂಶದ ನಿಖರತೆ ಮತ್ತು ಭದ್ರತೆಗಾಗಿ ಕಾಲ ಕಾಲಕ್ಕೆ ತಕ್ಕಂತೆ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಲೋಪ ರಹಿತ ವಿದ್ಯಾರ್ಥಿಸ್ನೇಹಿ ಪದ್ಧತಿ ಹೊಂದಿದೆ. ಕೇವಲ ಮೂರುವರೆ ದಶಕಗಳಲ್ಲಿಯೇ ವಿಶ್ವವಿದ್ಯಾಲಯ ರಾಜ್ಯದ ಇತರೆ ಹಿರಿಯ ವಿವಿಗಳನ್ನು ಸರಿಗಟ್ಟುವ ಮಟ್ಟಕ್ಕೆ ಬೆಳೆದಿದೆ. ಇದು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಸಂದ ಗೌರವವಾಗಿದೆ ಎಂದರು.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯದ ಅಧಿನಿಯಮದಡಿಯಲ್ಲಿ ಸ್ಥಾಪಿತವಾದ ಕುವೆಂಪು ವಿವಿ ಸರ್ಕಾರ ನೇಮಕ ಮಾಡುವ ಕುಲಪತಿ ಸಕ್ಷಮ ಪ್ರಾಧಿಕಾರಿಗಳು ಹಾಗೂ ಸರ್ಕಾರದ ನಿಯಮ, ಆದೇಶದನ್ವಯ ಕಾರ್ಯನಿರ್ವಹಿಸುತ್ತದೆ. ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಅಗತ್ಯವಾದ ಮೂಲಸೌಲಭ್ಯ ಕಾರ್ಯಗತಗೊಳಿಸುವಾಗ ವಿವಿ ನೀಡುವ ಯಾವುದೇ ಹೆಚ್ಚುವರಿ ಜವಾಬ್ದಾರಿಗಳನ್ನು, ಅಧ್ಯಾಪಕರು, ಸಿಬ್ಬಂದಿ ವರ್ಗದವರು ನಿಯಮಾನುಸಾರ ಪಾರದರ್ಶಕವಾಗಿ ನಿರ್ವಹಿಸುತ್ತಾ ಬಂದಿದ್ದಾರೆ ಎಂದು ತಿಳಿಸಿದರು.
ಈ ರೀತಿ ಸುಳ್ಳು ಆರೋಪ ಮಾಡಿ ವಿವಿ ಘನತೆಗೆ ಚ್ಯುತಿ ತರುತ್ತಿರುವುದರಿಂದ ಸಂಘಟನೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ವಿಶ್ವವಿದ್ಯಾಲಯದ ನಿಯಮಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ವಿವಿಯ ಯಾವುದೇ ಅಧ್ಯಾಪಕರು ಸಿಬ್ಬಂದಿ ನೆಮ್ಮದಿಯಿಂದ ದೈನಂದಿನ ಕೆಲಸ ನಿರ್ವಹಿಸುವುದು ಕಷ್ಟಸಾಧ್ಯ. ವ್ಯಕ್ತಿತ್ವಕ್ಕೆ ಇಂತಹ ಪ್ರಕರಣಗಳು ಧಕ್ಕೆ ತರುತ್ತವೆ. ವಿವಿ ಘನತೆಗೆ ಚ್ಯುತಿ ಉಂಟುಮಾಡುತ್ತವೆ. ವಿವಿಯ ಸರ್ವತೋಮುಖ ಬೆಳವಣಿಗೆಗೆ ಅಡ್ಡಿಯಾಗಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.
ಮುಂದಿನ ದಿನಗಳಲ್ಲಿ ವಿವಿಗೆ ಸಂಬಂಧಿಸಿದ ಯಾವುದೇ ಆರೋಪ ಬಂದಾಗ ಸತ್ಯ ಸತ್ಯತೆ ಪರಿಶೀಲಿಸಿ ವಿವಿಯಿಂದ ಸಂಪೂರ್ಣ ಮಾಹಿತಿ ಪಡೆದು ಪ್ರಸಾರ, ವರದಿ ಮಾಡುವಂತೆ ಮನವಿ ಮಾಡಿದೆ.
ಪತ್ರಿಕಾಗೋಷ್ಠಿಯಲ್ಲಿ ಪರೀಕ್ಷಾಂಗ ಮತ್ತು ಆಡಳಿತ ವಿಭಾಗದ ಕುಲಸಚಿವರುಗಳಾದ ಪ್ರೊ.ಎಸ್.ಎಸ್.ಪಾಟೀಲ್, ಪ್ರೊ.ಟಿ.ಕಣ್ಣನ್, ವಿವಿ ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಜೆ.ಕೇಶವಯ್ಯ ಉಪಸ್ಥಿತರಿದ್ದರು.